ಕಣಿವೆ, ಜು. 26: ಕೊರೊನಾ ಸೋಂಕು ದೃಢಪಟ್ಟ ಹುಲುಸೆ ಗ್ರಾಮದ ಮಹಿಳೆಯೊಬ್ಬರ ಮನೆಯ ಆಸುಪಾಸಿನ ಹತ್ತಕ್ಕೂ ಹೆಚ್ಚು ಮನೆಗಳನ್ನು ಸೀಲ್‍ಡೌನ್ ಮಾಡಿದ್ದು, ಅಲ್ಲಿನ ರೈತರು ಹೈನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮದ ನಿವಾಸಿ ರೈತರು, ಈ ಹಾಳು ಕೊರೊನಾ ಬಂದು ನಮ್ಮ ಮನೆಯಲ್ಲಿನ ಊಟದಲ್ಲಿ ಹೆಚ್ಚು ಖಾರದ ಖಾದ್ಯಗಳನ್ನೇ ತಿನ್ನುವಂತಿಲ್ಲ. ಏಕೆಂದರೆ ಇದನ್ನು ತಿಂದರೆ ಸೀನೋ ಹಾಗೂ ಇಲ್ಲ -ಕೆಮ್ಮೋ ಹಾಗೂ ಇಲ್ಲ. ನೋಡಿ ಅಲ್ಲಿ ಯಾವುದೋ ಹೆಂಗಸಿಗೆ ಎಲ್ಲಿಂದ ವಕ್ಕರಿಸಿತೋ ಗೊತ್ತಿಲ್ಲ. ಆ ಹೆಂಗಸು ಮನೆ ಬಿಟ್ಟು ಹೊರಗೆ ಹೋಗಿದ್ದೇ ಇಲ್ಲ. ಆ ಹೆಂಗಸಿಗೆ ಕೊರೊನಾ ಬಂತು ಅಂತ ಹೇಳಿ ಉಳಿದ ಸುತ್ತಲಿನ ಎಂಟು ಹತ್ತು ಮನೆಗಳನ್ನು ಸೇರಿಸಿ ಹಗ್ಗ ಕಟ್ಟಿ ಹೋಗಿದ್ದಾರಲ್ಲ. ನಾವು ನಮ್ಮನೆಯ ಹಸುಗಳನ್ನು ಎಲ್ಲಿ ಕಟ್ಟುವ? ಹಸುಗಳಿಗೆ ಹುಲ್ಲು ಎಲ್ಲಿ ತರುವಾ? ಹಾಲನ್ನು ಕೂಡ ಹಾಕೋ ಹಾಗಿಲ್ಲ ಅಂತ ಹುಲುಸೆ ಹಾಲು ಸಂಘದವರು ಹೇಳ್ತಾ ಅವ್ರಲ್ಲ. ಹಾಲು ಮಾರಿದರೆ ಮಾತ್ರ ಮನೆಗೆ ಉಪ್ಪು ಎಣ್ಣೆ ತಂದು ಊಟ ಮಾಡೋದು ನಾವು. ಆದರೆ ಮನೆಯಿಂದ ಹೊರಗೆ ಬರೋ ಹಾಗೇ ಇಲ್ಲ ಅಂತಾ ಅಧಿಕಾರಿಗಳು ಹೇಳ್ತಾರಲ್ಲ. ನಮ್ ಹಸುಗಳಿಗೆ ಮೇವು ಯಾರು ಕೊಡ್ತಾರೆ ಹೇಳಿ? ನಮಗೆ ಊಟ ಯಾರು ಕೊಡ್ತಾರೆ ಹೇಳಿ? ದಿನಕ್ಕೆ ಬೆಳಿಗ್ಗೆ ಸಂಜೆ ಸೇರಿಸಿ 15 ರಿಂದ 20 ಲೀಟರ್ ಹಾಲನ್ನು ಹಾಕ್ತಿದ್ದೋ. ಈಗ ಮೂರು ದಿನದಿಂದ ಹಾಲು ತರಬೇಡಿ. ತಂದರೆ ಹಿಂದಕ್ಕೆ ಕಳಿಸ್ತೀವಿ ಅಂತಾ ಆ ಹಾಲು ಅಳೆಸೋರು ಕೂಡ ಹೇಳ್ತಾರಲ್ಲ ಏನು ಮಾಡೋದು ಹೇಳಿ ಎಂದು ಹುಲುಸೆ ಗ್ರಾಮದ ರೈತರು ಹಾಗೂ ರೈತ ಮಹಿಳೆಯರು ತಮ್ಮ ಸಂಕಟವನ್ನು ತೋಡಿಕೊಂಡರು. ಅಲ್ಲಿನ ಎಂಟು ಮನೆಗಳಲ್ಲಿ ದಿನವೊಂದಕ್ಕೆ ತಲಾ ನೂರು ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು ಇದೀಗ ಕೊರೊನಾ ಪಾಸಿಟಿವ್ ಬಂದ ಕಾರಣ ಹಾಲನ್ನು ತರಬಾರದು. ಅದನ್ನು ಅಲ್ಲೇ ಚೆಲ್ಲಿ ಬಿಡಿ ಎಂದು ಯಾರೋ ಹೇಳಿದ ಮಾತಿಗೆ ತುಂಬಾ ವ್ಯಥೆ ಪಡ್ತಾ ಇದ್ದಾರೆ ಇಲ್ಲಿನ ನಿವಾಸಿಗಳು. ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಮತ್ತೊಮ್ಮೆ ಅಲ್ಲಿನ ಸ್ಥಿತಿಗತಿ ಅವಲೋಕಿಸಿ ಸೋಂಕಿತ ಮಹಿಳೆಯ ಮನೆಯನ್ನು ಹೊರತುಪಡಿಸಿ ಉಳಿದ ನಿವಾಸಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಬದಲೀ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದೆ.