ಸೋಮವಾರಪೇಟೆ, ಜು, 26: ಅವಿವಾಹಿತ ಯುವತಿಯೋರ್ವಳು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ.

ಬಜೆಗುಂಡಿ ಗ್ರಾಮದ ರಮೇಶ್ ಮತ್ತು ಹೊನ್ನಮ್ಮ ದಂಪತಿ ಪುತ್ರಿ, ರೂಪಾ (21) ಎಂಬಾಕೆಯೇ ನೇಣಿಗೆ ಶರಣಾದವಳಾಗಿದ್ದು, ನಿನ್ನೆ ದಿನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ತನ್ನ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾಳೆ.

ಪೋಷಕರು ಕೆಲಸ ನಿಮಿತ್ತ ಮನೆಯಿಂದ ಹೊರತೆರಳಿದ್ದು, ಸಂಜೆ ವೇಳೆಗೆ ವಾಪಸ್ ಆದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೂಪಾ, ಲಾಕ್‍ಡೌನ್ ಹಿನ್ನೆಲೆ ಬಜೆಗುಂಡಿಗೆ ವಾಪಸ್ ಆಗಿ, ಮನೆಯಲ್ಲಿಯೇ ಉಳಿದುಕೊಂಡಿದ್ದಳು.

ನಿನ್ನೆ ದಿನ ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್‍ನಲ್ಲಿ ‘ನನ್ನ ಸಾವಿಗೆ ಯಾರೂ ಕಾರಣರಲ್ಲ; ನನಗೆ ಬದುಕಲು ಇಷ್ಟ ಇಲ್ಲ, ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ’ ಎಂದು ಬರೆದಿಟ್ಟು, ನೇಣಿಗೆ ಶರಣಾಗಿದ್ದಾಳೆ.

ಘಟನೆಯ ಬಗ್ಗೆ ಮೃತೆ ರೂಪಾಳ ತಂದೆ ರಮೇಶ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಮಗಳ ಮೊಬೈಲ್ ಕರೆಗಳ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು ದೂರು ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.