ಕೂಡಿಗೆ, ಜು.26:ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದು ಗೂರು ಮದಲಾಪುರ ಬ್ಯಾಡಗೊಟ್ಟ ವ್ಯಾಪ್ತಿಯಲ್ಲಿ ಮುಂದುವರಿದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆ ನಷ್ಟ ಉಂಟಾಗಿದೆ.
ಕಳೆದ ಎರಡು ದಿನಗಳ ಹಿಂದೆ ಈ ವ್ಯಾಪ್ತಿಯ ಪ್ರದೇಶಗಳಿಗೆ ಆನೆಕಾಡಿನಂಚಿನ ಅತ್ತೂರು ಉಪ ಅರಣ್ಯ ವಲಯದ ಬೆಂಡೆಬೆಟ್ಟ ಭಾಗದಿಂದ ಬಂದು ಹಾರಂಗಿ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಹಾರಂಗಿ ನದಿಯನ್ನು ದಾಟಿ ಈ ವ್ಯಾಪ್ತಿಯ ರೈತರುಗಳ ಜಮೀನಿಗೆ ದಾಳಿ ಮಾಡಿ ಬೆಳೆಯನ್ನು ತುಳಿದು ನಷ್ಟಪಡಿಸಿವೆ.
ಹಾರಂಗಿ ನದಿ ದಾಟಿ ಬಂದಿದ್ದ ಹತ್ತಕ್ಕೂ ಹೆಚ್ಚು ಕಾಡಾನೆಗಳು ಇಂದು ಸಹ ಜಮೀನಿಗೆ ದಾಳಿ ಮಾಡಿ ಕೆಸ, ಹೈಬ್ರೀಡ್ ತಳಿಯ ಬಾಳೆ, ಕೇನೆ, ಜೋಳ ಮತ್ತು ಹಲಸಂಡೆ ಫಸಲಿನ ಗದ್ದೆಗಳನ್ನು ತುಳಿದು ಹಾಳು ಮಾಡಿವೆ. ಇದೀಗ ಯಾವ ಬೇಸಾಯ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಿದ್ದಾಪುರ : ಕಕ್ಕಟ್ಟುಕಾಡು ಪಳ್ಳಕೆರೆ ಕಣ್ಣಂಗಾಲ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ದಾಂಧಲೆ ನಡೆಸಿವೆ. ಅಡಿಕೆ ತೆಂಗು ಕಾಫಿ ಗಿಡಗಳನ್ನು ತುಳಿದು ಹಾನಿಗೊಳಿಸುತ್ತಿವೆ. ಇದರಿಂದಾಗಿ ಬೆಳೆಗಾರರಿಗೆ ಅಪಾರ ನಷ್ಟ ಸಂಭವಿಸಿದೆ ಇದಲ್ಲದೆ ಕಾರ್ಮಿಕರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.