ಮಡಿಕೇರಿ, ಜು. 25: ಮಡಿಕೇರಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಉಪವಿಭಾಗ ವ್ಯಾಪ್ತಿಗೆ ಸಂಬಂಧಿಸಿ ದಂತಿರುವ ಮಹಿಳಾ ಪೊಲೀಸ್ ಠಾಣೆಯನ್ನು ಇದೀಗ ನೂತನ ಕಚೇರಿಗೆ ಸ್ಥಳಾಂತರಿಸಲಾಗಿದೆ.ನಗರದಲ್ಲಿ ಮಹಿಳಾ ಠಾಣೆ ಆರಂಭಗೊಂಡ ನಂತರ ಈ ಠಾಣೆ ಇಲ್ಲಿಯತನಕ ನಗರ ಪೊಲೀಸ್ ಠಾಣಾ ಕಟ್ಟಡದಲ್ಲೇ (ಈ ಹಿಂದಿನ ಸಂಚಾರಿ ಠಾಣೆ) ಕಾರ್ಯನಿರ್ವಹಿಸುತ್ತಿತ್ತು. ಇದೀಗ ಮೈತ್ರಿ ಸನಿಹದಲ್ಲಿರುವ ಪೊಲೀಸ್ ವಸತಿಗೃಹ ಬಳಿಯ ಇಂಟಲಿಜೆನ್ಸ್ ಕಚೇರಿ ಪಕ್ಕಕ್ಕೆ ಠಾಣೆ ಸ್ಥಳಾಂತರಗೊಳ್ಳುತ್ತಿದೆ. ನಿನ್ನೆಯಿಂದ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿದ್ದು, ಪೂಜಾ ಕೈಂಕರ್ಯದೊಂದಿಗೆ ಸಿದ್ಧತೆ ಆರಂಭಿಸಲಾಗಿದೆ. ಮುಂದಿನ ಒಂದೆರಡು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಡಿ.ವೈ.ಎಸ್ಪಿ ದಿನೇಶ್ ಕುಮಾರ್, ಮಹಿಳಾ ಠಾಣೆಯ ವೃತ್ತ ನಿರೀಕ್ಷಕ ಸೋಮೇಗೌಡ ಸೇರಿದಂತೆ ವೃತ್ತ ನಿರೀಕ್ಷಕರುಗಳಾದ ನಗರಠಾಣೆಯ ಅನೂಪ್ ಮಾದಪ್ಪ, ಐ.ಪಿ. ಮೇದಪ್ಪ, ಜಯರಾಂ, ಹರೀಶ್ ಕುಮಾರ್, ಆರ್.ಪಿ.ಐ. ರಾಚಯ್ಯ ಮತ್ತಿತರರು ಈ ಸಂದರ್ಭ ಪಾಲ್ಗೊಂಡಿದ್ದರು. (ಮೊದಲ ಪುಟದಿಂದ) ಕಳೆದ 19.12.2016ರಲ್ಲಿ ಮಡಿಕೇರಿಯಲ್ಲಿ ಮಹಿಳಾ ಪೊಲೀಸ್ ಠಾಣೆ ಪ್ರಾರಂಭಗೊಂಡಿತ್ತು. ಸರಕಾರದ ಅಧಿಸೂಚನೆಯಲ್ಲಿ ಇದು ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆಯಾದರೂ, ಸಿಬ್ಬಂದಿ ಕೊರತೆ ಕಾರಣ ಮಡಿಕೇರಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ಇರುವ ಮಡಿಕೇರಿ ನಗರ, ಗ್ರಾಮಾಂತರ, ನಾಪೋಕ್ಲು, ಸಿದ್ದಾಪುರ, ಭಾಗಮಂಡಲ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಒಳಗೊಂಡು ಇದು ಕಾರ್ಯಾಚರಿಸುತ್ತಿದೆ.

ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರಂಭದಲ್ಲಿ ಪಿ.ಎಸ್.ಐ. ದರ್ಜೆಯ ಅಧಿಕಾರಿಯನ್ನು ಹೊಂದಿದ್ದ ಮಹಿಳಾ ಠಾಣೆಯನ್ನು ಉನ್ನತೀಕರಿಸಲಾಗಿದ್ದು, ಇನ್ಸ್‍ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಇಲ್ಲಿನ ಇನ್ಸ್‍ಪೆಕ್ಟರ್ ಆಗಿ ಸೋಮೇಗೌಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಮಹಿಳಾ ಠಾಣೆಗೆ ಸಂಬಂಧಿಸಿದಂತೆ ಮಂಜೂರಾತಿ ಇರುವ ಸಬ್‍ಇನ್ಸ್‍ಪೆಕ್ಟರ್ ಹುದ್ದೆ ಖಾಲಿಯಿದೆ. ಉಳಿದಂತೆ ಇಬ್ಬರು ಎ.ಎಸ್.ಐ.ಗಳು, 12 ಪಿ.ಸಿ. ಹಾಗೂ 6 ಹೆಚ್.ಸಿ.ಗಳು ಕರ್ತವ್ಯದಲ್ಲಿದ್ದಾರೆ. ಮಂಜೂರಾತಿ ಇರುವ 30 ಪಿ.ಸಿ. ಹುದ್ದೆಯ ಪೈಕಿ 18 ಹಾಗೂ 10 ಹೆಚ್.ಸಿ. ಪೈಕಿ 4 ಹುದ್ದೆ ಖಾಲಿ ಇದೆ.

ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಮತ್ತಿತರ ಹಲವು ಪ್ರಕರಣಗಳು ದಾಖಲಾಗುತ್ತಿದೆ. ಆದರೆ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದ್ದರೂ, ಕಾನೂನಿನಂತೆ ಇದನ್ನು ಬಹಿರಂಗಪಡಿಸಲು ಅವಕಾಶ ಇಲ್ಲದಿರುವುದರಿಂದ ಈ ಕುರಿತ ಹೆಚ್ಚಿನ ವಿವರಗಳು ಬೆಳಕಿಗೆ ಬರುತ್ತಿಲ್ಲ.

ಈ ವರ್ಷ ಜನವರಿಯಿಂದ ಇಲ್ಲಿಯತನಕ ಒಟ್ಟು 32 ಪ್ರಕರಣಗಳು ದಾಖಲಾಗಿವೆ.