ಕುಶಾಲನಗರ, ಜು. 25: ಅಕ್ರಮ ಮರ ಸಾಗಾಟ ಪ್ರಕರಣ ಪತ್ತೆಹಚ್ಚಿರುವ ಕುಶಾಲನಗರ ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿಗಳು ಲಕ್ಷಾಂತರ ಮೌಲ್ಯದ ಬೀಟೆ ಮರ ವಶಪಡಿಸಿ ಕೊಂಡಿದ್ದಾರೆ. ಸುಂಟಿಕೊಪ್ಪ ಸಮೀಪದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಕಡಿದು ಬೀಟೆ ಮರದ ಸಾಗಾಟದಲ್ಲಿ ತೊಡಗಿ ಜೀಪೊಂದ ರಲ್ಲಿ (ಕೆಎ.02. ಎನ್.8426) ನಾಟ ಸಾಗಾಟ ಮಾಡುತ್ತಿದ್ದ ಸಂದರ್ಭ ಕುಶಾಲನಗರ ಅರಣ್ಯ ವಲಯಾಧಿಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳಾದ ಹದ್ದುಶ ಮತ್ತು ರಜಾಕ್ ಎಂಬವರುಗಳು ಪರಾರಿ ಯಾಗಿದ್ದಾರೆ. ಸುಮಾರು 4 ಲಕ್ಷ ರೂ. ಮೌಲ್ಯದ ನಾಟಗಳನ್ನು ವಶಪಡಿಸಿ ಕೊಳ್ಳಲಾಗಿದೆ.ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಎಸಿಎಫ್ ಕೆ.ಎ.ನೆಹರು ಮಾರ್ಗ ದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಆನೆಕಾಡು ಶಾಖೆಯ ಉಪವಲಯ ಅರಣ್ಯಾಧಿಕಾರಿ ಮಹದೇವ್ ನಾಯಕ್, ಅರಣ್ಯ ರಕ್ಷಕರಾದ ಬಿ.ಸಿ.ಗಣೇಶ್, ಸಿದ್ದರಾಮ ನಾಟಿಕಾರ, ವೀಕ್ಷಕರಾದ ದಿನೇಶ್ ಮತ್ತು ಆರ್‍ಆರ್‍ಟಿ ತಂಡದ ಸದಸ್ಯರು ಪಾಲ್ಗೊಂಡಿದ್ದರು.

ಇನ್ನೊಂದು ಪ್ರಕರಣದಲ್ಲಿ 7ನೇ ಹೊಸಕೋಟೆ ಗ್ರಾಮದಲ್ಲಿ ತೇಗದ ಮರದಿಂದ ಕಟ್‍ಸೈಜ್‍ಗಳನ್ನು ಅಕ್ರಮ ದಾಸ್ತಾನು ಮಾಡಿದ ಆರೋಪದ ಮೇರೆಗೆ ಗ್ರಾಮದ ನಿವಾಸಿ ಸುರೇಶ ಎಂಬಾತನನ್ನು ಬಂಧಿಸಲಾಗಿದೆ. ಆನೆಕಾಡು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಹದೇವನಾಯಕ್ ಮತ್ತು ಸಿಬ್ಬಂದಿ ಆರೋಪಿಯ ಮನೆ ಶೋಧ ನಡೆಸಿ 22 ತೇಗದ ಕಟ್‍ಸೈಜ್ ಗಳನ್ನು ವಶಪಡಿಸಿಕೊಂಡು ಮೊಕ ದ್ದಮೆ ದಾಖಲಿಸಿದ್ದಾರೆ. ಸುಮಾರು ರೂ. 50 ಸಾವಿರ ಮೌಲ್ಯದ ಮರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.