ಅತ್ತಿಬೆಲೆ ಆಕ್ಸ್‍ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಹೀಗೂ ನಾಲ್ಕು ದಿನ ಕಳೆದಿದ್ದೆ. ದಿನಕ್ಕೆ ಎರಡು ಮಾತ್ರೆ ನೀಡುವುದು ಬಿಟ್ಟರೆ ಬೇರೇನೂ ಟ್ರೀಟ್ಮೆಂಟ್ ಇರಲಿಲ್ಲ. ವೈದ್ಯರು ಬೆಳಗ್ಗೆ ಮತ್ತು ರಾತ್ರಿ ಎರಡು ಹೊತ್ತು ಬಂದು ಆರೋಗ್ಯ ವಿಚಾರಿಸಿ ತೆರಳುತ್ತಿದ್ದರು. ದಾದಿಯರು ಆಗಾಗ್ಗೆ ಬಂದು ಹೋಗುತ್ತಿದ್ದರು. ನಾವು ಊಟ ಮಾಡುವುದು, ಮೊಬೈಲ್ ನೋಡುವುದು ಹರಟುವುದು ಹೀಗೆ ಸಾಗಿತ್ತು.

ಇದರ ಮಧ್ಯೆ ಪ್ರತಿನಿತ್ಯ ಆಸ್ಪತ್ರೆಗೆ 15, 20 ಮಂದಿ ಹೊಸ ಸೋಂಕಿತರು ಬರುತ್ತಿದ್ದರು. ಅಷ್ಟೇ ಮಂದಿ ಇಲ್ಲಿಂದ ಡಿಸ್ಚಾರ್ಜ್ ಕೂಡ ಆಗುತ್ತಿದ್ದರು. ಈ ಮಧ್ಯೆ ಬೆಲ್ಟ್ ಮಹಾದೇವಣ್ಣ ಮತ್ತಷ್ಟು ಆತ್ಮೀಯರಾಗಿದ್ದರು. ನನ್ನ ಮೊಬೈಲ್‍ನಿಂದಲೇ ಅವರ ಮನೆಯವರಿಗೆ ವೀಡಿಯೋಕಾಲ್ ಮಾಡಿ ಮಾತನಾಡುತ್ತಿದ್ದರು. ಕೊರೊನಾ ಬಂದು ಆಸ್ಪತ್ರೆ ಸೇರಿದ್ದ ಎರಡು ವರ್ಷದ ಮಗುವಿನ ತಾಯಿ ಸೀಮಾ, ಅವರ ತಾಯಿ ಫಾತಿಮ, ಅವರ ಪತಿ ದಾದೂ, ಜೊತೆಗೆ ವಾರ್ಡ್‍ಗೆ ಹೊಸದಾಗಿ ಬಂದಿದ್ದ ಎಡ್ನರಿಚಿ ಎಂಬ ಹಿರಿಯ ಮಹಿಳೆ ಸೇರಿ ಎಲ್ಲರೂ ಆತ್ಮೀಯರಾಗಿದ್ದರು. ನಮಗೆಲ್ಲರಿಗೂ ಕುಳಿತು ಹರಟಲು ಸಮಯಕ್ಕೇನೂ ಕೊರತೆ ಇರಲಿಲ್ಲ.

ಎಲ್ಲವೂ ಸಹಜವಾಗಿರುವಾಗಲೇ ವಾರ್ಡ್‍ನಲ್ಲಿ ಹೊಸ ಸಮಸ್ಯೆಯೊಂದು ಶುರುವಾಗಿತ್ತು. ಊಟ, ತಿಂಡಿಯ ಬಳಿಕ ಪ್ಲಾಸ್ಟಿಕ್ ತಟ್ಟೆ, ಲೋಟ, ಹೆಚ್ಚಾದ ಆಹಾರಗಳನ್ನು ಅಲ್ಲಿ ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಾ ಇರಲಿಲ್ಲ. ಡ್ರಮ್‍ಗಳು, ದೊಡ್ಡ-ದೊಡ್ಡ ಪ್ಲಾಸ್ಟಿಕ್ ಚೀಲಗಳಿದ್ದರೂ ಆಸ್ಪತ್ರೆಯಲ್ಲಿದ್ದ ರೋಗಿಗಳು ಮಾತ್ರ ಬೇಜವಾಬ್ದಾರಿ ಮೆರೆಯುತ್ತಿದ್ದರು. ಊಟ, ತಿಂಡಿಯ ಬಳಿಕ ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನ ವೆರಾಂಡಾದಲ್ಲೇ ಎಲ್ಲೆಂದರಲ್ಲಿ ಹಾಕುತ್ತಿದ್ದರು. ಹೆಚ್ಚುವರಿಯಾಗಿ ಉಳಿದ ಆಹಾರ ಪದಾರ್ಥಗಳು ನೆಲದಲ್ಲಿ ಚೆಲ್ಲಿ ಅಸಹ್ಯ ವಾತಾವರಣ ಸೃಷ್ಟಿಯಾಗಿತ್ತು. ದಿನವೊಂದಕ್ಕೆ ಏನಿಲ್ಲವೆಂದರೂ 100 ಕೆಜಿಗೂ ಅಧಿಕ ಕಸ ಸೃಷ್ಟಿಯಾಗುತ್ತಿತ್ತು. ಮೂರ್ನಾಲ್ಕು ದಿನಗಳಿಂದ ಕಸ ಸ್ವಚ್ಛವಾಗದೇ ಇದ್ದುದರಿಂದ ಆಹಾರ ಪದಾರ್ಥಗಳು ಕೊಳೆತು ಅಸಹ್ಯ ವಾಸನೆ ಶುರುವಾಗಿತ್ತು. ಜೊತೆಗೆ ನೊಣಗಳು ಒಳ ಬಂದು ನಮಗೆ ಇನ್ನಿಲ್ಲದ ಕಿರಿಕಿರಿ ಮಾಡುತ್ತಿದ್ದವು

ಡಿ ಗ್ರೂಪ್ ನೌಕರರು ಯಾಕೆ ಸ್ವಚ್ಛತಾ ಕಾರ್ಯಕ್ಕೆ ಬರುವುದಿಲ್ಲ ಎಂದು ಯೋಚಿಸುತ್ತಿದ್ದೆ. ಈ ಬಗ್ಗೆ ಅಲ್ಲಿಯೇ ಇದ್ದ ನೌಕರನೊಬ್ಬನನ್ನು ವಿಚಾರಿಸಿದೆ.

“ಅಯ್ಯೋ ನಾವೇನು ಮಾಡೋಣ ಸಾರ್. ನಾನೂ ಒಬ್ಬ ಡಿ ಗ್ರೂಪ್ ನೌಕರ ನಾನು ಯಾವ್ಯಾವ ಕೆಲ್ಸ ಮಾಡ್ಲಿ. ಬೆಳಗ್ಗಿಂದ ಸಂಜೆವರೆಗೆ ದುಡೀಬೇಕು. ಕೊಡೋದು ಆರು ಸಾವಿರ ಸಂಬಳ ಮಾತ್ರ. ಕೊರೋನಾ ವಾರ್ಡ್ ಅಂದ್ರೆ ಯಾರೂ ಕೆಲ್ಸಕ್ಕೆ ಬರಲ್ಲ ಸರ್. ಅದೂ ಕೊರೊನಾ ರೋಗಿಗಳು ತಿಂದು ಹಾಕಿದ ವೇಸ್ಟ್ ತೆಗಿಯಲ್ಲಿಕ್ಕಂತೂ ಯಾರೂ ಬರಲ್ಲ” ಅಂತ ಅಸಹಾಯಕತೆ ವ್ಯಕ್ತಪಡಿಸಿದ.

ನಾನೂ ಏನೂ ಹೇಳಲಾಗದೆ ಸುಮ್ಮನಾದೆ. ಅಂದು ರಾತ್ರಿ ಊಟದ ಬಳಿಕ ತಟ್ಟೆ ಹಿಡಿದು ವೆರಾಂಡಕ್ಕೆ ಬಂದಿದ್ದೆ. ನಾಲ್ಕು ವಾರ್ಡ್‍ಗಳ ಕನಿಷ್ಟ್ಟ 120 ಮಂದಿ ತಿಂದು ಹಾಕುವ ರಾಶಿ-ರಾಶಿ ತಟ್ಟೆ, ಲೋಟ, ಆಹಾರ ಪದಾರ್ಥಗಳಿಂದಾಗಿ ವೆರಾಂಡದಲ್ಲಿ ನಡೆಯಲು ಕೂಡ ಸಾಧ್ಯವಿಲ್ಲ ದಂತಾಗಿತ್ತು. ಎಡ್ನಾರಿಚಿ ಮತ್ತು ಸೀಮಾ ಅಲ್ಲಿಯೇ ನಿಂತು ಕಸದ ರಾಶಿಯ ಬಗ್ಗೆ ಚರ್ಚಿಸುತ್ತಿದ್ದರು. ಬೇಜವಾಬ್ದಾರಿ ಜನರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಬಹುಶಃ ವಿಷಯ ಪ್ರಸ್ತಾಪಿಸಲು ಇದೇ ಸರಿಯಾದ ಸಮಯ ಎಂದು ಭಾವಿಸಿ ಅವರಿಗೆ ಡಿ ಗ್ರೂಪ್ ನೌಕರರ ಅಲಭ್ಯತೆ ಬಗ್ಗೆ ವಿಚಾರ ತಿಳಿಸಿದೆ. ಇನ್ನು ಒಂದು ದಿನ ಹೀಗೆ ಮುಂದುವರಿ ದರೆ ನಾವು ಇಲ್ಲಿ ಉಳಿಯುವುದೇ ಕಷ್ಟವಾಗಬಹುದು, ಹಾಗಾಗಿ ನಾವೇ ಕ್ಲೀನ್ ಮಾಡೋಣ್ವಾ ಎಂದೆ. ಅಷ್ಟರಲ್ಲಿ ಎಡ್ನರಿಚಿ, ಚಲೋ ಬೈಯ ಹಂಲೋಗ್ ಮಿಲ್ಕೆ ಕ್ಲೀನ್ ಕರೇಂಗೆ ಅಂದ್ರು. ಸೀಮಾ ಕೂಡ ಹೌದು ಸ್ವಚ್ಚ ಮಾಡುವ ಎಂದು ತಲೆಯಾಡಿಸಿದರು. ಎಂಜಲನ್ನು ಬರಿಗೈಯಲ್ಲಿ ಸ್ವಚ್ಛಮಾಡುವುದು ಅಸಹ್ಯ ಎಂದೆನಿಸಿದರೂ ನಾವು ಹೆಚ್ಚೇನೂ ಚಿಂತಿಸದೆ ಕಾರ್ಯಾಚರಣೆಗೆ ಇಳಿದೆವು. ಅಷ್ಟರಲ್ಲಿ ಬೆಲ್ಟ್ ಮಹಾದೇವಣ್ಣ ಬಕೆಟ್ ನೀರು ಹಿಡಿದು ಬಂದರು. ನಾವು ಕಾರ್ಯಾಚರಣೆಗೆ ಇಳಿದಿದ್ದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಬಂದು ಕೈ ಜೋಡಿಸಿದ. ಹೀಗೆ ನಾವು ಐದಾರು ಮಂದಿ ಸಮಾರು 45 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಇಡೀ ವೆರಾಂಡ ಸ್ವಚ್ಛಗೊಳಿಸಿದೆವು. ಅದರ ಮಧ್ಯೆ ಒಬ್ಬೊಬ್ಬರದ್ದು ಒಂದೊಂದು ಡ್ರಾಮ. ಕೆಲವರು ನಮ್ಮ ಬಳಿ ನಿಂತು ಹೀಗೆ ಕಸ ಹಾಕಿದವರನ್ನ ಬೈಯುತ್ತಿದ್ದರು. ನಮ್ಮ ಬಗ್ಗೆ ಇನ್ನಿಲ್ಲದ ಕಾಳಜಿ ತೋರುತ್ತಿದ್ದರು. ಮತ್ತೆ ಕೆಲವರು ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದರು. ಅಷ್ಟರಲ್ಲಿ ಮೊಬೈಲ್ ಹಿಡಿದು ಅಲ್ಲಿಗೆ ಬಂದ ವ್ಯಕ್ತಿಯೊಬ್ಬ, ಹೊಸ ಡ್ರಾಮಾ ಶುರು ಮಾಡಿದ. “ಹಲೋ, ಬಿಬಿಎಂಪಿಯವ್ರ ? ನಾನು ಅತ್ತಿಬೆಲೆ ಆಕ್ಸ್‍ಫರ್ಡ್ ಕಾಲೇಜಿಂದ ಮಾತಾಡ್ತಾ ಇರೋದು, ಇಲ್ಲಿಗೆ ಸ್ವಲ್ಪ ಹೌಸ್ ಕೀಪಿಂಗ್ ಅವ್ರನ್ನ ಕಳ್ಸಿಕೊಡ್ರಿ” ಅಂತ ಗದರಿ ಫೋನಿಟ್ಟು ನಮ್ಮಬಳಿ ಬಂದು “ಟೆನ್ಶನ್ ಮಾಡ್ಬೇಡಿ ಸರ್. ಬಿಬಿಎಂಪಿಯವ್ರು ಜನರನ್ನ ಕಳಿಸ್ತಾರೆ, ಫೆÇೀನ್ ಮಾಡಿದ್ದೇನೆ’’ ಎಂದು ಸ್ಕೋಪ್ ತಗೊಂಡ. ಎಡ್ನರಿಚಿಗೆ ಅದೇನನಿಸಿತೋ ಏನೋ ಆಯಪ್ಪಾನನ್ನ ಬೈದಾಕಿಬಿಟ್ಟರು. “ಶರ್ಮ್ ಹೋನಾಚಾಹಿಯೆ ತುಮ್ ಲೋಗೋಂಕೊ.... ಬೇಷರಮ್ ಲೋಗ್... ಯಾಕೆ ಬಿಬಿಎಂಪಿಯವ್ರು ಬರ್ಬೇಕು. ಗೌರ್ನಮೆಂಟ್ ಅವ್ರು ಬಂದು ಯಾಕೆ ಕ್ಲೀನ್ ಮಾಡಬೇಕು. ನಿಮಗೆಲ್ಲಾ ಜವಾಬ್ದಾರಿ ಇಲ್ವಾ ? ಯಾರೂ ಗಲೀಜು ಮಾಡ್ಲಿಲ್ಲಾಂದ್ರೆ ಕ್ಲೀನ್ ಮಾಡೋ ಕೆಲ್ಸಾನೆ ಇರೋದಿಲ್ಲ. ಅರ್ಥಮಾಡ್ಕೊಳ್ಳಿ. ನಾಚಿಗೆ ಆಗ್ಬೇಕು ನಿಮಗೆಲ್ಲಾ” ಎಡ್ನರಿಚಿ ಬೈದದ್ದೆ ಬೈದದ್ದು. ಆ ಮನುಷ್ಯ ಸದ್ದೇ ಮಾಡದೆ ಜಾಗ ಖಾಲಿ ಮಾಡಿದ.

ಹಾಗೂ ಹೀಗೂ ನಮ್ಮ ಅಕ್ಕಪಕ್ಕದ ಎರಡು ವಾರ್ಡ್‍ಗಳು ಸ್ವಚ್ಛವಾದವು. ಅಷ್ಟರಲ್ಲಿ ನಮ್ಮ ಕೆಲಸ ನೋಡಿದ ಮೂರನೇ ವಾರ್ಡಿನವರೂ ಸ್ವಚ್ಛತೆಗೆ ಇಳಿದಿದ್ದರು. ನೋಡಿ ಖುಷಿಯಾಯಿತು. ಅವರಿಗೆ ತಮ್ಸ್‍ಅಪ್ ಮಾಡಿ ಕ್ಯಾರಿಯಾನ್ ಅಂದ್ವಿ. ಆದ್ರೆ ನಾಲ್ಕು ಮತ್ತು ಐದನೇ ವಾರ್ಡಿನವರು ಮಾತ್ರ ಸ್ವಚ್ಛತೆಗೆ ಮುಂದಾಗಲೇ ಇಲ್ಲ. ಅಲ್ಲಿಯೂ ಕಸದ ರಾಶಿ ಹಾಗೇ ಚೆಲ್ಲಾಡಿತ್ತು.

ಮರುದಿನ ಬೆಳಗ್ಗೆ ತಿಂಡಿ ಆದಮೇಲೆ ವಾರ್ಡ್‍ಗೆ ಬಂದ ಇಬ್ಬರು ನರ್ಸ್‍ಗಳು ಜೋರಾಗಿ “ನಿನ್ನೆ ಇಲ್ಲಿ ಕ್ಲೀನ್ ಮಾಡಿದವರು ಯಾರೂ’’ ಜೋರಾಗಿ ಕಿರುಚಿದರು. ವಾರ್ಡಿನಲ್ಲಿದ್ದವರು ಸೀಮಾ, ಎಡ್ನರಿಚಿ ಮತ್ತು ನನ್ನ ಕಡೆ ಬೆರಳು ತೋರಿದರು. ನರ್ಸ್ ಎಲ್ರೂ ಇಲ್ಲಿ ಬನ್ನಿ ಅಂತ ಕರೆದರು. ಏನಾಯ್ತಪ್ಪಾ, ಕೊರೊನಾ ರೋಗಿಗಳ ಎಂಜಲು ಮುಟ್ಟಿದ್ದಕ್ಕೆ ಎಡವಟ್ಟಾಯ್ತಾ ಅಂತ ಸ್ವಲ್ಪ ಹೆದರಿಕೆಯಿಂದಲೇ ನರ್ಸ್ ಬಳಿ ಹೋದೆ.

“ನೀವಾ ಕ್ಲೀನ್ ಮಾಡಿದ್ದು” ಕೇಳಿದಳು ನರ್ಸ್. ನಾವೆಲ್ಲರೂ ಹೌದೆಂದು ತಲೆಯಾಡಿಸಿದೆವು.

“ಹಾಸ್ಪಿಟಲ್ನ ಸೀನಿಯರ್ ಡಾಕ್ಟರ್‍ಗೆ ನೀವು ಕ್ಲೀನ್‍ಮಾಡಿರೋದು ಬಹಳ ಖುಷಿಯಾಗಿದೆ. ಅವರು ಒಂದು ಆಫರ್ ಕೊಟ್ಟಿದ್ದಾರೆ. ನೀವು ಇಲ್ಲೇ ಇದ್ದು ಕೆಲಸ ಮಾಡೋದಾದ್ರೆ ನಿಮಗೆ ಪೇಮೆಂಟ್ ಮಾಡ್ತಾರಂತೆ ನೋಡಿ

‘‘ಸರ್, ಇರೋದಾದ್ರೆ ಇರಿ” ಅಂದ್ಳು

ನಮಗೆ ನಗು ತಡಿಯಲಾಗಲಿಲ್ಲ. ನಕ್ಕೇ ಬಿಟ್ಟೆವು.

ನರ್ಸ್‍ಗೆ ಮುಜುಗರವಾಯ್ತೇನೋ, “ಹಾಗಲ್ಲ ಸರ್. ನಮಗೆ ಕ್ಲೀನಿಂಗ್ ಸ್ಟಾಫ್ ಯಾರೂ ಸಿಕ್ತಾ ಇಲ್ಲ. ಅದಕ್ಕೆ ನಿಮಗೆ ಹೇಳಿದ್ವಿ” ಅಂದ್ಳು.

“ಪರ್ವಾಗಿಲ್ಲ ಮೇಡಂ, ನಾವು ಹಣಕ್ಕಾಗಿ ಕ್ಲೀನ್ ಮಾಡಿಲ್ಲ. ಇನ್ನು ಮಾಡುವ ಸಂದರ್ಭವೂ ಬರುವುದಿಲ್ಲ. ನಾವೀಗ ಕ್ಲೀನ್ ಮಾಡಿದ್ದನ್ನು ನೋಡಿ ಬಹಳಷ್ಟು ಜನರಿಗೆ ಸ್ವಚ್ಛತೆಯ ಅರಿವು ಬಂದಿರುತ್ತೆ. ಯಾರೂ ಕಸ ಹಾಕಲಿಕ್ಕಿಲ್ಲ. ನಾವೆಲ್ಲರೂ ಈಗ ಎಲ್ಲಾ ವಾರ್ಡ್‍ಗೆ ಹೋಗಿ ಕಸಗಳನ್ನ ಒಂದೇ ಕಡೆ ಪ್ಲಾಸ್ಟಿಕ್ ಬ್ಯಾಗಿಗೆ ವ್ಯವಸ್ಥಿತವಾಗಿ ಹಾಕುವಂತೆ ತಿಳಿ ಹೇಳುವ ಅಂದೆ. ಅದಕ್ಕೆ ಎಲ್ಲರೂ ಒಪ್ಪಿ ಎಲ್ಲಾ ವಾರ್ಡ್‍ಗೆ ತೆರಳಿ ಸಾಧ್ಯವಾದಷ್ಟು ಅರಿವು ಮೂಡಿಸಲು ಪ್ರಯತ್ನಿಸಿದೆವು. ಎಡ್ನರಿಚಿ ಸ್ವಲ್ಪ ಖಾರವಾಗಿಯೇ, “ನೀವು ನಿಮ್ಮ ಮನೆಯಲ್ಲಾದ್ರೆ ಇಷ್ಟೊಂದು ಗಲೀಜಾಗಿರ್ತೀರಾ ? ಸರ್ಕಾರ ನಮಗೆ ಇಷೊಂದು ಫ್ರೀಯಾಗಿ ಎಲ್ಲಾ ಮಾಡ್ತಾ ಇರುವಾಗ ನಮಗೆ ಸ್ವಲ್ಪವಾದ್ರೂ ಕೃತಜ್ಞತೆ ಇರಬೇಕಲ್ಲವಾ?’’ ಅಂತ ಕುಟುಕಿದರು. ಇವೆಲ್ಲದರ ಪರಿಣಾಮವೋ ಏನೋ, ಮರು ದಿನದಿಂದ ನಮ್ಮ ವೆರಾಂಡ ಸಂಪೂರ್ಣ ಸ್ವಚ್ಛವಾಗಿತ್ತು. ಮಾತ್ರವಲ್ಲ ಅದೇದಿನ ನಾಲ್ಕು ಮತ್ತು ಐದನೆಯ ವಾರ್ಡ್‍ನ ಜನರೂ ಕೂಡ ತಮ್ಮ ವೆರಾಂಡಾದ ಕಸ ಸ್ವಚ್ಛಗೊಳಿಸಿದ್ರು. ನಮಗೆ ಒಂದು ಸೇವೆ ಮಾಡಿದಾಗ ಅದು ಸಾರ್ಥಕ ಅನಿಸುವುದಿಲ್ಲ. ಆದರೆ ಆ ಸೇವೆ ಮತ್ತೊಬ್ಬರಿಗೆ ಪ್ರೇರಣೆಯಾಗಿ ಅವರೂ ಆ ಸೇವೆ ಮಾಡಲು ಮುಂದಾಗುತ್ತಾರಲ್ಲಾ ಆಗ ನಿಜಕ್ಕೂ ನಾವು ಮಾಡಿದ್ದು ಸಾರ್ಥಕ ಎನಿಸುತ್ತದೆ. ನಮ್ಮೆಲ್ಲರ ಕೆಲಸ ಮೆಚ್ಚಿದ ಆಸ್ಪತ್ರೆಯ ಹಿರಿಯ ಡಾಕ್ಟರ್‍ಗಳು ರಾತ್ರಿ 10.30ಕ್ಕೆ ಬಂದು ಗ್ರೂಪ್ ಫೆÇೀಟೋ ತೆಗೆದುಕೊಂಡು ಹೋದರಂತೆ. ನಾನು ಬೇಗನೆ ನಿದ್ರೆಗೆ ಜಾರಿದ್ದರಿಂದ ಆ ಸಂದರ್ಭವನ್ನು ಮಿಸ್ ಮಾಡಿಕೊಂಡೆ.

(ಮುಂದಿನ ಸಂಚಿಕೆಯಲ್ಲಿ ಮಹಾದೇವಣ್ಣ ಹೇಳಿದ ಬೆಲ್ಟ್ ಕಹಾನಿ)

?ಐಮಂಡ ಗೋಪಾಲ್ ಸೋಮಯ್ಯ,

ಪತ್ರಕರ್ತ, ಬೆಂಗಳೂರು.

ಮೊ : 8197602051