ಕಣಿವೆ, ಜು. 25: ಕೊರೊನಾ ಉಂಟುಮಾಡಿದ ಸಂಕಟದಿಂದ ಬೇಸತ್ತು ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ತೊರೆದು ತಮ್ಮ ತಮ್ಮ ಹಳ್ಳಿಗಳಿಗೆ ಸಂತಸದಿಂದ ಮರಳಿರುವ ಅನೇಕ ಮಂದಿ ಜೀವನೋಪಾಯಕ್ಕಾಗಿ ಸುಲಭದ ಮಾರ್ಗವನ್ನು ಕಂಡು ಕೊಂಡಿದ್ದಾರೆ. ಅದುವೇ ಹೈನೋದ್ಯಮ. ಗ್ರಾಮೀಣ ಪ್ರದೇಶಗಳಿಗೆ ನಗರಗಳಿಂದ ಮರಳಿದ ಅನೇಕ ಜನರು ಸಾಲ ಸೋಲ ಮಾಡಿ, ಆಭರಣಗಳನ್ನು ಅಡವಿಟ್ಟು ತಂದ ಅಷ್ಟೋ ಇಷ್ಟೋ ಹಣದಿಂದ ಹಸುಗಳನ್ನು ಖರೀದಿಸಿದ್ದಾರೆ. ಆ ಹಸುಗಳಿಂದ ಹಾಲನ್ನು ಕರೆದು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಹಾಸನ ಹಾಲು ಒಕ್ಕೂಟಕ್ಕೆ ಈ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದ ಹಾಲು ಸಂಗ್ರಹವಾಗುತ್ತಿರುವುದು ಕಂಡುಬಂದಿದೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 31 ಹಾಲು ಉತ್ಪಾದಕ ಸಹಕಾರ ಸಂಘಗಳಿವೆ. ಈ ಸಹಕಾರ ಸಂಘಗಳ ಪೈಕಿ ಕುಶಾಲನಗರ ಹಾಗೂ ಶಿರಂಗಾಲ ಹಾಲು ಉತ್ಪಾದಕ ಸಂಘಕ್ಕೆ ಅತ್ಯಂತ ಗರಿಷ್ಠÀ್ಠ ಪ್ರಮಾಣದಲ್ಲಿ ಹಾಲು ಪೂರೈಕೆಯಾಗುತ್ತಿದೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತಕುಮಾರ್ ಹೇಳಿದ್ದಾರೆ. ಹೆಬ್ಬಾಲೆಯ ಹಾಲು ಉತ್ಪಾದಕ ಸಂಘದಲ್ಲಿ ಮಾಸಿಕ ಬರೋಬ್ಬರಿ 48 ಸಾವಿರ ಲೀ.ನಷ್ಟು ಹಾಲು ಶೇಖರಣೆಯಾದರೆ, ಎರಡನೇ ಸ್ಥಾನದಲ್ಲಿ ಅಲ್ಲಿಗೆ ಸನಿಹದ ಶಿರಂಗಾಲ ಹಾಲು ಉತ್ಪಾದಕ ಸಂಘದಲ್ಲಿ 47 ಸಾವಿರ ಲೀ. ಹಾಲು ಶೇಖರಣೆ ಯಾಗುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ 10 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಿದ್ದು ಈ ಹತ್ತರ ಪೈಕಿ ಅತ್ಯಂತ ಹೆಚ್ಚು ಪ್ರಮಾಣದ ಹಾಲನ್ನು ಆಲೂರು ಸಿದ್ದಾಪುರದ ಸಂಘ ಸಂಗ್ರಹಿಸುತ್ತಿದೆ. ಮಾಸಿಕ 36 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಜಿಲ್ಲೆಯ 31 ಸಹಕಾರ ಸಂಘಗಳಿಂದ 25 ಸಾವಿರ ಲೀ.ಹಾಲು ಶೇಖರಣೆಯಾಗುತ್ತಿದ್ದರೆ 45 ಸಾವಿರ ಲೀ.ಹಾಲು ಮಾರಾಟ ವಾಗುತ್ತಿದೆ. ಈ ಹಿಂದೆ 55 ಸಾವಿರ ಲೀ. ಹಾಲು ಕೊಡಗಿನಲ್ಲಿ ಬಳಕೆ ಯಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊರೊನಾ ರಾಜ್ಯಕ್ಕೆ ಅಪ್ಪಳಿಸಿದ ಪರಿಣಾಮ ಉಂಟಾದ ಲಾಕ್ ಡೌನ್ ಪ್ರಕ್ರಿಯೆಯ ಬಳಿಕ ಅಂದಿನಿಂದ ಇಂದಿನವರೆಗೂ ರೈತ ಬೆಳೆದ ಯಾವುದೇ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಹೈನುಗಾರಿಕೆಯತ್ತ ಹೆಚ್ಚಿನ ಮಂದಿ ಆಕರ್ಷಿತರಾಗಿದ್ದಾರೆ. ನಮ್ಮ ಒಕ್ಕೂಟ ನಿರೀಕ್ಷಿಸದೇ ಇರುವಷ್ಟು ಹೆಚ್ಚು ಹಾಲು ಬರುತ್ತಿದೆ. ಆದರೂ ಕೂಡ ನಮ್ಮ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಅವರು, ಇಂತಹ ಕೊರೊನಾ ಸಂಕಷ್ಟದ ದಿನಗಳಲ್ಲಿ ಹೈನುಗಾರಿಕೆ ಅವಲಂಭಿಸಿ ರುವ ರೈತರಿಗೆ ನಿರಾಸೆ ಮಾಡಬಾರದು ಎಂದು ತೀರ್ಮಾನಿಸಿದ್ದಾರೆ. ಕೆಲ ದಿನಗಳ ಕಾಲ ಹಾಲು ಸಂಗ್ರಹ ಸ್ಥಗಿತ ಗೊಳಿಸುವುದಾಗಲೀ,
(ಮೊದಲ ಪುಟದಿಂದ) ಹಾಲಿನ ಬಿಲ್ಲನ್ನು ತಡೆಹಿಡಿಯುವುದಾಗಲೀ ಮಾಡದೇ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಕೈಹಿಡಿಯಬೇಕು ಎಂದು ನಿರ್ಧರಿಸಿ ವಾರಕ್ಕೊಮ್ಮೆ ಹಾಲಿನ ಬಿಲ್ ಪಾವತಿ ಮಾಡಲಾಗುತ್ತಿದೆ. ಜೊತೆಗೆ ಎಷ್ಟೇ ಹಾಲು ಶೇಖರಣೆಗೊಂಡರೂ ಕೂಡ ಹಾಲನ್ನು ಖರೀದಿಸಲಾಗುತ್ತಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ತಿಳಿಸಿದ್ದಾರೆ. ಲಾಕ್‍ಡೌನ್‍ನಿಂದಾಗಿ ಯಾವುದೇ ಸಭೆ ಸಮಾರಂಭಗಳು ನಡೆಯದ ಕಾರಣ ಉತ್ಪಾದನೆ ಆಗುತ್ತಿರುವ ಹಾಲು ಖರ್ಚಾಗುತ್ತಿಲ್ಲ. ಹಾಸನ ಹಾಲು ಒಕ್ಕೂಟದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ 2 ಲಕ್ಷ ಲೀ. ಹಾಲು ಜಾಸ್ತಿ ಪೂರೈಕೆಯಾಗುತ್ತಿದೆ. ಹಾಗಾಗಿ 3 ಲಕ್ಷ ಲೀ. ಹಾಲಿನ ಬಳಕೆ ಕಡಿಮೆಯಾಗಿದೆ. ನಿತ್ಯವೂ ಒಕ್ಕೂಟದಲ್ಲಿ ಸಂಗ್ರಹವಾಗುತ್ತಿರುವ 11.50 ಲಕ್ಷ ಲೀ. ಹಾಲಿನ ಪೈಕಿ 7 ಲಕ್ಷ ಲೀ. ಹಾಲನ್ನು ಬೆಣ್ಣೆ ಹಾಗೂ ಹಾಲಿನ ಪುಡಿ ತಯಾರಿಸಿ ಸಂಗ್ರಹ ಮಾಡಿ ಇಡುತ್ತಿದ್ದೇವೆ. ಈಗಾಗಲೇ ನಮ್ಮಲ್ಲಿ 3750 ಟನ್ ಹಾಲಿನ ಪೌಡರ್, 1700 ಟನ್ ಬೆಣ್ಣೆ ಸಂಗ್ರಹಗೊಂಡಿದೆ. ಈಗ ಇವುಗಳ ಸಂಗ್ರಹಿತ ಮೌಲ್ಯವೇ ಬರೋಬ್ಬರಿ 140 ಕೋಟಿ ರೂಗಳಷ್ಟಿದೆ ಎಂದು ಮಾಹಿತಿ ನೀಡಿದ ಒಕ್ಕೂಟದ ಎಂಡಿ ಗೋಪಾಲಯ್ಯ, ಈಗಾಗಲೇ ಈ ಉತ್ಪನ್ನಗಳ ಉತ್ಪಾದನಾ ವೆಚ್ಚವೇ ಪ್ರತೀ ಕೆಜಿಗೆ 250 ರೂ. ತಗಲುತ್ತಿದೆ. ಆದರೆ ಮಾರುಕಟ್ಟೆಯ ದರ 130 ರೂ.ಗಳಿಂದ 140 ರೂ. ಇದೆ. ಆದರೂ ಕೂಡ ನಮಗೆ ಈ ಸಂದರ್ಭದಲ್ಲಿ ಅದೆಷ್ಟೇ ನಷ್ಟವಾದರೂ ಕೂಡ ಮುಂದಿನ ಮೂರು ತಿಂಗಳ ಬಳಿಕ ಪರಿಸ್ಥಿತಿ ಸುಧಾರಿಸಬಹುದು. ಆಮೇಲೆ ಎಲ್ಲವೂ ಸರಾಗವಾಗಬಹುದು ಎಂಬ ಆಶಯದಿಂದ ಉತ್ಪನ್ನಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೇವೆ.
ಇಂತಹ ಪರಿಸ್ಥಿತಿಯಲ್ಲಿ ರೈತನಿಗೆ ಬೇರೆ ಆದಾಯವೂ ಇಲ್ಲ. ಹಾಗಾಗಿ ಹಾಲಿನ ಬಿಲ್ ಅನ್ನು ಸಕಾಲದಲ್ಲಿ ಪಾವತಿಸುತ್ತಿದ್ದೇವೆ. ಪ್ರತೀ ವರ್ಷದ ಮೇ ಮಾಸದಿಂದ ಆಗಸ್ಟ್ ಹಾಗೂ ಸೆಪ್ಟೆಂಬರ್‍ವರೆಗೂ ಹಾಲಿನ ಬೇಡಿಕೆ ಕಡಿಮೆಯಾಗುತ್ತದೆ. ಇದರ ಜೊತೆಗೆ ಈ ಬಾರಿ ಕೊರೊನಾದಿಂದ ಬೇಡಿಕೆ ಮತ್ತಷ್ಟು ಕುಸಿದಿದೆ ಎಂದು ವಿವರಿಸಿದರು. ಆರು ತಿಂಗಳ ಕಾಲ ಹಾಲು ಕೆಡದೇ ಇಡುವಂತಹ ತಂತ್ರಜ್ಞಾನದ ಪ್ಲಾಂಟ್ ಕೂಡ ನಾವು ಹೊಂದಿದ್ದೇವೆ. ದಿನಕ್ಕೆ 4 ಲಕ್ಷ ಲೀ. ಹಾಲಿನ ಪ್ಯಾಕ್ ಮಾಡುತ್ತಿದ್ದೇವೆ. ದೇಶದ 23 ರಾಜ್ಯಗಳಲ್ಲಿ ನಂದಿನಿ ಹಾಲು ಮಾರಾಟ ಮಾಡುತ್ತಾ ಇದ್ದೇವೆ. ಜೊತೆಗೆ ದೇಶದ ಗಡಿಗಳ ಯೋಧರಿಗೂ ಈ ಹಾಲನ್ನು ಕಳುಹಿಸುತ್ತಿದ್ದೇವೆ. ಒಂದು ದಿನಕ್ಕೆ ಒಂದು ಲಕ್ಷ ಲೀ. ಸಾಮಥ್ರ್ಯವಿರುವ ಸುವಾಸಿತ ಹಾಲನ್ನು 200 ಮಿಲಿ ಬಾಟಲ್‍ಗಳಲ್ಲಿ ತುಂಬಿಸಿ ಮಾರಾಟ ಮಾಡುವ ಯೋಜನೆ ಇನ್ನು ಮೂರು ತಿಂಗಳಲ್ಲಿ ಆರಂಭವಾಗಲಿದೆ. ಅಲ್ಲದೇ ಕೇವಲ ಹಾಲಿನ ಪುಡಿ ಮತ್ತು ಬೆಣ್ಣೆಯನ್ನು ಮಾಡುತ್ತಾ ಕುಳಿತರೆ ಆದಾಯ ಬರಲ್ಲ ಎಂದು ನಿರ್ಧರಿಸಿ, ಮೌಲ್ಯವರ್ಧಿತ ಹಾಲು ಉತ್ಪನ್ನಗಳ ತಯಾರಿಕೆಗೂ ಒತ್ತು ಕೊಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ಇದರಿಂದಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ. ಈ ಹಿಂದೆ ಇದ್ದ ಲಾಕ್‍ಡೌನ್ ಅವಧಿಯಲ್ಲಿಯೂ ರೈತರಿಂದ ಈರುಳ್ಳಿ, ಬೆಳ್ಳುಳ್ಳಿ, ಬೇಳೆ, ಎಣ್ಣೆ, ಸಕ್ಕರೆ ಮೊದಲಾದವುಗಳನ್ನು ಖರೀದಿಸಿ ಅವುಗಳನ್ನು ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಹೈನುಗಾರರಿಗೆ ಸಹಕಾರ ಸಂಘಗಳ ಮೂಲಕ ವಿತರಿಸಿದ್ದೇವೆ. ಸೋಮವಾರಪೇಟೆ ಒಂದರಲ್ಲಿಯೇ ಕೆ.ಕೆ. ಹೇಮಂತಕುಮಾರ್ ಅವರ ಕಾಳಜಿಯಿಂದ 100 ಟನ್‍ಗಳಷ್ಟು ದವಸ ಧಾನ್ಯಗಳನ್ನು ರೈತರಿಗೆ ಮಾರಾಟ ಮಾಡಿದ್ದೇವೆ ಎಂದು ಗೋಪಾಲಯ್ಯ ಹೇಳಿದರು. ಕೆಎಂಎಫ್‍ಗೆ ರಾಜ್ಯವ್ಯಾಪಿ ಇರುವ 14 ಒಕ್ಕೂಟಗಳಿಂದ 88 ಲಕ್ಷ ಲೀ. ಹಾಲು ಪೂರೈಕೆಯಾಗುತ್ತಿದೆ. ಇದರಲ್ಲಿ ಹಾಸನ ಹಾಲು ಒಕ್ಕೂಟ 11.50 ಲಕ್ಷ ಲೀ ಹಾಲು ಬರುತ್ತಿದ್ದು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿ ಹಾಸನ ಹಾಲು ಒಕ್ಕೂಟ ಇದೆ. ನಮ್ಮ ಒಕ್ಕೂಟದ ವತಿಯಿಂದ 75 ಬಗೆಯ ಸಿಹಿ ಹಾಗೂ ಖಾರ ಉತ್ಪನ್ನಗಳು, ವಿವಿಧ ಮಾಪನಗಳಲ್ಲಿ ಬೆಣ್ಣೆ, 110 ಬಗೆಯ ಐಸ್ ಕ್ರೀಂ, 10 ಬಗೆಯ ಗುಡ್ ಲೈಫ್ ಹಾಲಿನ ಪ್ಯಾಕ್‍ಗಳನ್ನು ನಾವು ತಯಾರಿಸುತ್ತಿದ್ದೇವೆ ಅಲ್ಲದೇ ಅಮೂಲ್ ಅವರಿಗೆ ನಾವೇ ಐಸ್ ಕ್ರೀಂ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
-ವರದಿ: ಕೆ.ಎಸ್.ಮೂರ್ತಿಗ್ರಾಮೀಣ ಜನತೆಯ ಕೈ ಹಿಡಿದಿರುವ ಹೈನುಗಾರಿಕೆ