ಕಣಿವೆ, ಜು. 24: ಹೌದು... ಆಗಸ್ಟ್ ತಿಂಗಳು ನೆನಪಿಸಿಕೊಂಡರೆ ಈ ನಿವಾಸಿಗಳಿಗೆ ಅದೇನೋ ಒಂಥರ ಭಯ ಮತ್ತು ಆತಂಕ ಎದುರಾಗುತ್ತದೆ. 2018ರಲ್ಲಿ ಸುರಿದ ಭಯಾನಕ ಮಳೆಗೆ ಪಶ್ಚಿಮಘಟ್ಟ ಶ್ರೇಣಿಯ ಕೊಡಗಿನ ಬೆಟ್ಟಗುಡ್ಡಗಳು ರುದ್ರನರ್ತನ ಗೈದು ಸೀಳಿದ ಕಾರಣ ಅದರೊಳಗೆ ಚಿಮ್ಮಿದ ನೀರು ಅದೆಷ್ಟೋ ಅಮಾಯಕ ಜನರ ಬದುಕನ್ನು ಬರಿದಾಗಿಸಿತ್ತು. ಅಂದರೆ ಕಂಡ ಕಂಡದ್ದನ್ನೆಲ್ಲಾ ತನ್ನೊಳಗೆ ಸೇರಿಸಿಕೊಂಡು ಹಾರಂಗಿ ನದಿ ಪ್ರವಹಿಸಿತ್ತು. ಈ ನದಿಯ ಪ್ರವಾಹ ಕೂಡಿಗೆಯಲ್ಲಿನ ಕಾವೇರಿ ನದಿಯಲ್ಲಿ ಸೇರಿ ಹರಿಯುವ ಸಂಗಮವನ್ನು ಅಲ್ಲೋಲ ಕಲ್ಲೋಲ ಮಾಡಿದ್ದಲ್ಲದೇ ಸುಮಾರು ಏಳೆಂಟು ಕಿ.ಮೀ. ಹಿಂದಕ್ಕೆ ಅಂದರೆ ಕೂಡಿಗೆಯಿಂದ ಕುಶಾಲ ನಗರ, ಮಾದಾಪಟ್ಟಣದವರೆಗೂ ಕಾವೇರಿ ನದಿಯನ್ನು ಸೀಳಿತ್ತು. ಇದು ನದಿ ತೀರದ ಇಕ್ಕೆಲಗಳ ನಿವಾಸಿಗಳ ಸಾವಿರಾರು ಮಂದಿಯ ಬದುಕನ್ನೇ ಹೈರಾಣಾಗಿಸಿತ್ತು. ನೂರಾರು ಮನೆಗಳು ಮುಳುಗಿ ಹೋಗಿದ್ದವು. ಮನೆಯೊಳಗಿನ ಅಮೂಲ್ಯ ಪರಿಕರಗಳು ನೀರುಪಾಲಾಗಿದ್ದವು. ಅಲ್ಲದೇ ಅತ್ತ ನದಿ ದಂಡೆಯ ರೈತರು ಬೆಳೆಸಿದ್ದ ನೂರಾರು ಎಕರೆ ಭೂಮಿಯಲ್ಲಿನ ಬೆಳೆಗಳು ಹಾಳಾಗಿದ್ದವು. 2018 ರ ಆಗಸ್ಟ್ ತಿಂಗಳ 15, 16, 17 ಹಾಗೂ 18 ರಂದು ಮೂರ್ನಾಲ್ಕು ದಿನಗಳ ಕಾಲ ಹಾರಂಗಿ ಹಾಗೂ ಕಾವೇರಿ ನದಿಗಳು ಅಪಾಯದ ಮಟ್ಟ ಮೀರಿ ಹರಿದಿದ್ದವು. ಹಾಗೆಯೇ 2019ರಲ್ಲಿ ತಲಕಾವೇರಿಯ ಬ್ರಹ್ಮಗಿರಿ ಶ್ರೇಣಿಯಲ್ಲಿ ಕೂಡ ಅಲ್ಲಿನ ಬೆಟ್ಟ ಗುಡ್ಡಗಳಲ್ಲಿ ಘರ್ಜಿಸಿದ ಮಳೆಯಿಂದಾಗಿ ಹಿಂದೆಂದೂ ಕಂಡರಿಯದ ಕಾವೇರಿ ಪ್ರವಾಹ 2019ರ ಅದೇ ಆಗಸ್ಟ್ ತಿಂಗಳಲ್ಲಿ ಅಂದರೆ ಹತ್ತು ದಿನಗಳ ಮೊದಲೇ ತಾ. 7, 8 ಹಾಗೂ 9 ರಂದು ಮತ್ತೆ ಅದೇ ಪ್ರಯಾಸದ ಪ್ರವಾಹ ಅನಾಯಾಸವಾಗಿ ಬಂದ ಕಾರಣ ಮತ್ತೆ ಕಾವೇರಿ ನದಿ ತೀರದ ವಾಸಿಗಳಲ್ಲಿ ಆತಂಕ ಇಮ್ಮಡಿ ಗೊಂಡಿತ್ತು. ಕಳೆದ ವರ್ಷದ ಪ್ರವಾಹ ಸೃಷ್ಟಿಸಿದ ನಾಶ ವಿನಾಶದ ನೆನಪು ಮಾಸುವ ಮುನ್ನವೇ ಉರಿವ ಗಾಯಕ್ಕೆ ಉಪ್ಪು ಸುರಿದುಕೊಂಡಂತೆ ಮತ್ತೆ ಅದೇ ರೀತಿಯ, ಅದಕ್ಕೂ ಮಿಗಿಲಾದ ಪ್ರವಾಹ ಬಂದು ಮತ್ತೆ ಎರಡನೇ ಬಾರಿ ಜನ ಜೀವನ ಅಸ್ತವ್ಯಸ್ತ ಗೊಂಡಿತ್ತು. ಹಾಗಾಗಿ ಈ ಭಾಗದ ಜನರಿಗೆ ಪ್ರತೀ ವರ್ಷದ ಆಗಸ್ಟ್ ಮಾಸ ಬಂತು ಎಂದರೆ ಏನೋ ಒಂಥರ ದುಗುಡ, ಏನೋ ಒಂಥರ ಅಸಹನೆ, ಯಾಕಾದರೂ ಈ ಮಳೆಗಾಲ ಬರುತ್ತೆ, ಈ ಆಗಸ್ಟ್ ಇನ್ನೇನು ಆತಂಕ ತಂದಿಡುತ್ತೋ ಎನ್ನುವ ಕಳವಳ ಈ ನದಿ ತೀರದ ನಿವಾಸಿಗಳಿಗೆ ಕಾಡುತ್ತಿದೆ. ಜುಲೈ ತಿಂಗಳ ಕ್ಯಾಲೆಂಡರ್ ಬದಲಾಗಲು ಇನ್ನೇನು ದಿನಗಣನೆ ಆರಂಭವಾಗಿದೆ. ಆತಂಕವೂ ಎದುರಾಗುತ್ತಿದೆ. ಆದರೆ ಅಂತಹ ಆತಂಕವನ್ನು ನದಿ ನಿವಾಸಿಗಳು ದೂರ ಮಾಡಿ ಸಹಜವಾದ ಬದುಕು ನಡೆಸಬೇಕು. ಏನೋ ಕಳೆದ ಎರಡು ವರ್ಷಗಳು ಸತತವಾಗಿ ಪ್ರವಾಹ ಬಂತು ಎಂದರೆ ಮತ್ತೆ ಬರುತ್ತೇ ಎನ್ನೋ ಜಿಜ್ಞಾಸೆ ಬೇಡ. ಜಿಲ್ಲೆಯ ಜೀವ ನದಿಯಾದ ಕಾವೇರಿ ಅದರ ಇರುವಿಕೆಯ ಸರಹದ್ದನ್ನು ಗಡಿ ಗುರುತಿಸಿದಂತಹ ಮಾದರಿಯಲ್ಲಿ ನಿವಾಸಿಗಳಿಗೆ ತೋರಿಸಿದೆ. ಜನ ಇನ್ನಾದರೂ ಅದರ ತಂಟೆಗೆ ಬರದಂತೆ ಅದನ್ನು ಮಲಿನ ಮಾಡದಂತೆ ಮತ್ತು ನದಿ ತೀರವನ್ನು ಒತ್ತುವರಿ ಮಾಡಬೇಡಿ ಎಂಬಂತೆ ಹೇಳಿದೆ. ಈಗ ಆ ದುಗುಡ ದುಮ್ಮಾನದ ಕಳವಳ ಬೇಡ. ನಮ್ಮ ಜನಗಳ ದೃಷ್ಟಿಯಂತೆ ಸೃಷ್ಟಿಯಲ್ಲ. ಸೃಷ್ಟಿ ಕಲಿಸಿದ್ದನ್ನು ನಾವು ಕಲಿಯ ಬೇಕಷ್ಟೆ. ಇದೀಗ ಪ್ರವಾಹ ಬರದಂತೆ ಕಾವೇರಿ ನದಿಯ ಒಂದಷ್ಟು ಶುದ್ಧೀಕರಣವೂ ಆಗಿದೆ. ನೋಡೋಣ, ಭಯದ ಬದುಕು ಬೇಡ. ಮಳೆಗಾಲದ ಆಗಸ್ಟ್ ತಿಂಗ ಳನ್ನು ಎಂದಿನಂತೆ ಸ್ವೀಕರಿಸಲು ಮತ್ತು ಆದರಿಸಲು ನಾವು ಅಣಿಯಾಗೋಣ ಅಲ್ಲವೇ... - ಕೆ.ಎಸ್. ಮೂರ್ತಿ.