ಸ್ವದೇಶಿ ನಿರ್ಮಿತ “ಕೋವಾಕ್ಸಿನ್” ಪ್ರಯೋಗ
ನವದೆಹಲಿ, ಜು. 24: ಕೋವಿಡ್-19 ನಿಯಂತ್ರಣದ ಪ್ರಯತ್ನವಾಗಿ ಸ್ವದೇಶಿ ನಿರ್ಮಿತ “ಕೋವಾಕ್ಸಿನ್” ಔಷಧಿಯನ್ನು 30 ವರ್ಷದ ಯುವಕನೋರ್ವನಿಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಇಂದು ನೀಡಿದೆ. ಹೈದ್ರಾಬಾದ್ ಮೂಲದ ಭಾರತ್ ಬಯೋ ಟೆಕ್ ಔಷಧ ಕಂಪೆನಿ ಸಿದ್ಧಪಡಿಸಿರುವ ’ಕೋವಾಕ್ಸಿನ್’ ಮಾನವ ಪ್ರಯೋಗಕ್ಕೆ ಏಮ್ಸ್‍ನ ನೈತಿಕ ಕಮಿಟಿ ಅನುಮೋದನೆ ನೀಡಿದ ಬಳಿಕ ಇದು ಮಾನವ ಪ್ರಯೋಗದ ಮೊದಲ ಹಂತವಾಗಿದೆ. ದೆಹಲಿಯ ನಿವಾಸಿಯೊಬ್ಬರಿಗೆ ಇಂದು ಕೋವಾಕ್ಸಿನ್ ಔಷಧಿಯನ್ನು ನೀಡಲಾಗಿದೆ ಎಂದು ಅಧ್ಯಯನದ ತನಿಖಾಧಿಕಾರಿ ಹಾಗೂ ಕಮ್ಯೂನಿಟಿ ಮೆಡಿಷನ್ ಡಿಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡಿರುವ ಪ್ರೊ. ಡಾ. ಸಂಜಯ್ ರೈ ತಿಳಿಸಿದ್ದಾರೆ. ದೆಹಲಿಯ 30 ವರ್ಷದ ಯುವಕನಿಗೆ ಕೋವಾಕ್ಸಿನ್ ಔಷಧಿಯನ್ನು ಮೊದಲಿಗೆ ನೀಡಲಾಗಿದೆ. ಎರಡು ದಿನಗಳ ಹಿಂದೆ ಆತನನ್ನು ತಪಾಸಣೆ ಮಾಡಲಾಗಿತ್ತು. ಆರೋಗ್ಯದ ಪ್ರಮುಖ ನಿಯತಾಂಕಗಳು ಸಾಮಾನ್ಯವಾಗಿದ್ದವು. ಆತನಿಗೆ ಯಾವುದೇ ರೀತಿಯ ಅಸ್ವಸ್ಥತತೆ ಕಂಡು ಬರಲಿಲ್ಲ ಎಂದು ಡಾ. ರೈ ಹೇಳಿದ್ದಾರೆ.
ಇ-ಮಾರುಕಟ್ಟೆ : ಸುಪ್ರೀಂ ನೋಟೀಸ್
ನವದೆಹಲಿ, ಜು. 24: ಇ-ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನಗಳ ಮೂಲ ದೇಶದ ಮಾಹಿತಿ ಕಡ್ಡಾಯಗೊಳಿಸುವ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದೆ. ಇ-ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನಗಳ ಮೂಲ ದೇಶವನ್ನು ನಮೂದಿಸುವುದರ ಬಗ್ಗೆ ಕಾನೂನು ಜಾರಿಗೊಳಿಸುವುದರ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೊಟೀಸ್ ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ವಿ. ರಾಮ ಸುಬ್ರಹ್ಮಣಿಯನ್ ಅವರಿದ್ದ ಪೀಠ ಉತ್ಪನ್ನಗಳ ಮೂಲಗಳನ್ನು ನಮೂದಿಸುವುದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತಿತ್ತು.
ವಿದ್ಯಾರ್ಥಿಗಳಿಗೆ ಕೆಂಪುಕೋಟೆಗೆ ಪ್ರವೇಶವಿಲ್ಲ
ನವದೆಹಲಿ, ಜು. 24: ನೋವಾಲ್ ಕೊರೊನಾ ವೈರಸ್ ಕಾರಣದಿಂದಾಗಿ ರಾಷ್ಟ್ರ ರಾಜಧಾನಿ ಕೆಂಪು ಕೋಟೆಯಲ್ಲಿ ನಡೆಯಲಿರುವ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿಲ್ಲ. ಕೆಲವೇ ಮಂದಿ ಗಣ್ಯರಷ್ಟೇ ಭಾಗವಹಿಸುವ ಸಾಧ್ಯತೆ ಇದೆ. ಡಾಕ್ಟರ್, ಆರೋಗ್ಯ ಕಾರ್ಯಕರ್ತೆಯರು, ಪೌರ ಕಾರ್ಮಿಕರಂತಹ ಕೋವಿಡ್-19 ವಾರಿಯರ್ಸ್‍ಗಳನ್ನು ಗಣ್ಯರಾಗಿ ಆಹ್ವಾನಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೊರೊನಾ ವೈರಸ್ ಕಾರಣ ಕೆಂಪು ಕೋಟೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಕಡಿಮೆ ಸಂಖ್ಯೆಯ ಗಣ್ಯರನ್ನು ಆಹ್ವಾನಿಸಲಾಗುವುದು, ಅವರಿಗೆ ಆರು ಅಡಿಗಳ ಅಂತರದಂತೆ ಆಸನಗಳ ವ್ಯವಸ್ಥೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಹಾಗೂ ಸ್ಯಾನಿಟೈಸ್ ಕಾರ್ಯಕ್ಕಾಗಿ ಆ. 1 ರಿಂದ ಕೆಂಪು ಕೋಟೆಯನ್ನು ಸಾರ್ವಜನಿಕ ವೀಕ್ಷಣೆಗೆ ಬಂದ್ ಮಾಡಲಾಗಿದ್ದು, ಶಾಲಾ ಮಕ್ಕಳಿಂದ ಪ್ರದರ್ಶನ ಇರುವುದಿಲ್ಲ, ಇದರ ಬದಲಿಗೆ ಕೆಲ ಎನ್‍ಸಿಸಿ ಕೆಡಿಟ್‍ಗಳನ್ನು ಆಹ್ವಾನಿಸಲಾಗುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು, ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಮಮಂದಿರ ಭೂಮಿಪೂಜೆಗೆ ವಿಘ್ನ
ನವದೆಹಲಿ, ಜು. 24: ಅಯೋಧ್ಯೆಯಲ್ಲಿ ಆ. 5 ರಂದು ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆಗೆ ಮತ್ತೊಂದು ವಿಘ್ನ ಎದುರಾಗಿದ್ದು, ಭೂಮಿಪೂಜೆ ಕಾರ್ಯಕ್ರಮಕ್ಕೆ ತಡೆ ಕೋರಿ ಅಲಹಾಬಾದ್ ಹೈಕೋರ್ಟ್‍ನಲ್ಲಿ ಸಾರ್ವಜನಿಕಿ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಆಗಸ್ಟ್ 5 ರಂದು ಭವ್ಯವಾದ ಮಂದಿರ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ಪೂಜೆ ಮೂರು ದಿನಗಳ ಸುದೀರ್ಘ ವೈದಿಕ ಆಚರಣೆಗಳ ಮೂಲಕ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ 40 ಕೆ.ಜಿ. ಬೆಳ್ಳಿ ಇಟ್ಟಿಗೆಯನ್ನು ಅಡಿಪಾಯಕ್ಕೆ ಅಳವಡಿಸುವ ಮೂಲಕ ದೇಗುಲ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಇದೇ ರಾಮಮಂದಿರ ಭೂಮಿಪೂಜೆ ಕಾರ್ಯಕ್ರಮ ಕೋವಿಡ್-19 ನಿಯಮಾವಳಿಗಳ ಉಲ್ಲಂಘನೆಯಾಗಿದ್ದು ಕೂಡಲೇ ಭೂಮಿಪೂಜೆ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ದೆಹಲಿ ಮೂಲದ ಪತ್ರಕರ್ತರೊಬ್ಬರು ಹೈಕೋರ್ಟ್‍ಗೆ ಪಿಐಎಲ್ ಸಲ್ಲಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ತೀವ್ರಗತಿಯಲ್ಲಿ ಹಬ್ಬುತ್ತಿರುವ ನಡುವೆಯೇ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಕೇಂದ್ರ ಸರ್ಕಾರಕದ ಅನ್‍ಲಾಕ್ 2.0 ಮಾರ್ಗಸೂಚಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಅಂತೆಯೇ ಕೊರೊನಾ ವೈರಸ್ ಸಮಯದಲ್ಲಿ ಕಾರ್ಯಕ್ರಮ ನಡೆಯವುದು ಬೇಡ ಎಂದಿರುವ ಅರ್ಜಿದಾರ, ಭೂಮಿಪೂಜೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ನಾಯಕತ್ವ
ಬೆಂಗಳೂರು, ಜು. 24: ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ನಂತರ ಕನ್ನಡ ಚಿತ್ರೋದ್ಯಮದ ನಾಯಕತ್ವವನ್ನು ಯಾರು ವಹಿಸಿಕೊಳ್ಳಬೇಕೆಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತಿತ್ತು. ಅಂಬರೀಷ್ ಅವರು ನಿಧನರಾಗಿ ಒಂದೂವರೆ ವರ್ಷದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸ್ಯಾಂಡಲ್‍ವುಡ್ ನಾಯಕತ್ವ ವಹಿಸಿಕೊಂಡಿದ್ದಾರೆ. ಕೋವಿಡ್-19ನಿಂದಾಗಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ವಿಷಯವಾಗಿ, ಎಲ್ಲ ವಿಭಾಗಗಳ ಪುನಶ್ಚೇತನದ ಬಗ್ಗೆ ಚರ್ಚಿಸಲು ಶುಕ್ರವಾರ ಮಧ್ಯಾಹ್ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಸಲಾಯಿತು. ಕಲಾವಿದರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಕನ್ನಡ ಚಿತ್ರರಂಗದ ಸಂಕಷ್ಟಗಳನ್ನು ಸರ್ಕಾರದ ಮುಂದಿಡಲು, ಸಮಸ್ಯೆಗಳನ್ನು ಬಗೆಹರಿಸಲು ನಾಯಕತ್ವದ ಅಗತ್ಯವಿದ್ದು, ಶಿವರಾಜ್‍ಕುಮಾರ್ ನಾಯಕತ್ವ ವಹಿಸಲು ಸಭೆ ಸಮ್ಮತಿಸಿತು.
ಚಿನ್ನದ ಬೆಲೆ ರೂ. 51,946ಗೆ ಏರಿಕೆ
ನವದೆಹಲಿ, ಜು. 24: ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದ್ದು, ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ. 475 ದಾಖಲೆಯ ಏರಿಕೆಯಾಗುವ ಮೂಲಕ 10. ಗ್ರಾಂ ಚಿನ್ನದ ಬೆಲೆ ರೂ. 51,946ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ರೂ. 51,946ಕ್ಕೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಚಿನ್ನದ ಬೆಲೆಗಳು ಏರಿಕೆಯಾಗಿದ್ದು, ರೂಪಾಯಿ ಮೌಲ್ಯ ಮತ್ತೆ ಕುಸಿತಗೊಂಡಿದೆ ಎಂದು ಹೆಚ್‍ಡಿಎಫ್‍ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ. ರೂಪಾಯಿ ಮೌಲ್ಯ ಅಮೇರಿಕಾದ ಡಾಲರ್ ವಿರುದ್ಧ 8 ಪೈಸೆ ಕುಸಿದಿದ್ದು, ಪ್ರತಿ ಡಾಲರ್ ರೂ. 74.83 ಗೆ ಏರಿಕೆಯಾಗಿದೆ. ಅಮೇರಿಕಾ-ಚೀನಾ ಬಿಕ್ಕಟ್ಟು ತೀವ್ರವಾಗುತ್ತಿರುವುದು ಮತ್ತು ಅಮೇರಿಕಾದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವುದರಿಂದ ಚಿನ್ನದ ದರ ಏರುಮುಖವಾಗಿದೆ ಎಂದು ಹೆಚ್‍ಡಿಎಫ್‍ಸಿ ಸೆಕ್ಯುರಿಟೀಸ್ ತಿಳಿಸಿದೆ.
ಸೆ. 19 ರಿಂದ ಐಪಿಎಲ್ ಟೂರ್ನಿ ಆರಂಭ
ನವದೆಹಲಿ, ಜು. 24: ಬಹು ನಿರೀಕ್ಷಿತ 2020ರ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್‍ಪಟೇಲ್ ಘೋಷಿಸಿದ್ದಾರೆ. ಟೂರ್ನಿಯ ಕುರಿತ ಅಂತಿಮ ವಿವರಗಳನ್ನು ಹಾಗೂ ವೇಳಾಪಟ್ಟಿಯನ್ನು ಅನುಮೋದಿಸಲು ಮುಂದಿನ ವಾರ ಆಡಳಿತ ಮಂಡಳಿ ಸಭೆ ನಡೆಸಲಾಗುತ್ತದೆ. ಬಿಸಿಸಿಐ ಟೂರ್ನಿ ಯೋಜನೆಯ ಬಗ್ಗೆ ಅನೌಪಚಾರಿಕವಾಗಿ ಈಗಾಗಲೇ ಐಪಿಎಲ್ ಫ್ರಾಂಚೈಸಿಗಳಿಗೆ ತಿಳಿಸಿದೆ. ಶೀಘ್ರವೇ ಆಡಳಿತ ಸಮಿತಿ ಸಭೆ ಕರೆದು ವೇಳಾಪಟ್ಟಿಯನ್ನು ಫೈನಲ್ ಮಾಡಲಾಗುವುದು. ಟೂರ್ನಿ ಸೆ. 19 ರಿಂದ ನ. 8 ರವರೆಗೂ ನಡೆಯಲಿದೆ. ಸರ್ಕಾರ ಅನುಮತಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಖಂಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ ಎಂದು ಬ್ರಿಜೇಶ್ ಪಟೇಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.