ಮಡಿಕೇರಿ, ಜು. 24: ಜಾಗತಿಕ ಕೊರೊನಾ ಸೋಂಕಿನಿಂದ ಅನೇಕ ಹಿರಿಯರು, ತೀರಾ ಕಿರಿಯರು ಜೀವ ಭಯ ಎದುರಿಸುತ್ತಿದ್ದರೆ ಇಂತಹ ಯಾವದೇ ಭಯ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎನ್ನುವ ರೀತಿಯಲ್ಲಿ, 87 ವಯಸ್ಸಿನ ಜಿಲ್ಲೆಯ ವೃದ್ಧೆ ಹಾಗೂ 3 ತಿಂಗಳ ಪುಟ್ಟ ಮರಿಮಗು ಒಂದೇ ಕುಟುಂಬದಲ್ಲಿ ಸೋಂಕಿನಿಂದ ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಗುಣಮುಖಗೊಂಡವರ ಪೈಕಿ ಅತೀ ಇಳಿಯ ವಯಸ್ಸಿನ ವೃದ್ಧೆ ಹಾಗೂ ಅತ್ಯಂತ ಕಿರಿಯ ಮಗು ಸೇರ್ಪಡೆಗೊಂಡು ಜಿಲ್ಲೆಯ ಜನತೆಗೆ ಆತ್ಮಸ್ಥೈರ್ಯ ತುಂಬಿದಂತಾಗಿದೆ. ವೀರಾಜಪೇಟೆ ಹುಂಡಿ ಗ್ರಾಮದ ವೃದ್ಧೆ, ಆಕೆಯ ಮರಿಮಗು ಸೇರಿದಂತೆ ಕುಟುಂಬದ 9 ಮಂದಿಗೂ ಸೋಂಕು ತಗುಲಿದ್ದು, ಈಗ ಎಲ್ಲರೂ ಸೋಂಕಿನಿಂದ ಹೊರಬಂದಿದ್ದು, ಆರೋಗ್ಯವಾಗಿರು ವುದಾಗಿ ಕುಟುಂಬದ ಸದಸ್ಯರೋರ್ವರು ‘ಶಕ್ತಿ’ಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ತಾ. 23 ರವರೆಗೆ 314 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 236 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಬಿಡುಗಡೆಗೊಂಡವರ ಪೈಕಿ 10 ರಿಂದ 60 ವರ್ಷ ವಯೋಮಿತಿಯ ಸೋಂಕಿತರೇ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಂಡಿರುವುದು
(ಮೊದಲ ಪುಟದಿಂದ) ಜಿಲ್ಲೆಯ ಜನತೆಯ ಆತಂಕವನ್ನು ದೂರ ಮಾಡಿದೆ. ಸೋಂಕಿತರ ಸಂಖ್ಯೆಯಲ್ಲಿ ಈ ವಯೋಮಿತಿಯವರೇ ಹೆಚ್ಚಿದ್ದು, ಬಿಡುಗಡೆಗೊಂಡವರು ಕೂಡ ಈ ವಯೋಮಿತಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹುಂಡಿಯ 87 ವರ್ಷದ ವೃದ್ಧೆ ಸೇರಿದಂತೆ ಸೋಮವಾರಪೇಟೆಯ 85 ವರ್ಷದ ವೃದ್ಧೆ, ಬಿಟ್ಟಂಗಾಲದ 70 ವರ್ಷದ ವೃದ್ಧೆ ಹಾಗೂ ಕಿರಿಯರಾದ 8 ತಿಂಗಳ ಗಂಡು ಮಗು ಹಾಗೂ 4 ತಿಂಗಳ ಹೆಣ್ಣು ಮಗು ಹಾಗೂ 3 ತಿಂಗಳ ಪುಟ್ಟ ಕಂದಮ್ಮ ಕೂಡ ಗುಣಮುಖರ ಪಟ್ಟಿಯಲ್ಲಿ ಸೇರಿದ್ದು ಸೋಂಕಿನ ವಿರುದ್ಧದ ಹೋರಾಟದಲ್ಲಿ ಯಶಸ್ವಿಗೊಂಡಿದ್ದಾರೆ.
ಸೋಂಕಿತರು, ಬಿಡುಗಡೆಗೊಂಡವರ ಮಾಹಿತಿ (ತಾ.23ರ ವರೆಗೆ)
10 ವರ್ಷ ವಯಸ್ಸಿಗಿಂತ ಕೆಳಗಿನವರಲ್ಲಿ ಈ ವರೆಗೆ 13 ಬಾಲಕರು ಹಾಗೂ 8 ಬಾಲಕಿಯರು ಸೇರಿದಂತೆ 21 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 11 ಬಾಲಕರು, 7 ಬಾಲಕಿಯರು ಸೇರಿ ಒಟ್ಟು 18 ಮಂದಿ ಗುಣಮುಖರಾಗಿದ್ದಾರೆ.
10 ರಿಂದ 60 ವರ್ಷ ವಯೋಮಿತಿಯಲ್ಲಿ 158 ಪುರುಷರು, 105 ಮಹಿಳೆಯರು ಸೇರಿ ಒಟ್ಟು 263 ಮಂದಿಗೆ ಸೋಂಕು ದೃಢಪಟ್ಟಿದ್ದು, 112 ಪುರುಷರು, 91 ಮಹಿಳೆಯರು ಸೇರಿ 203 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
60 ವರ್ಷ ಮೇಲ್ಪಟ್ಟವರಲ್ಲಿ 13 ಪುರುಷರು, 14 ಮಹಿಳೆಯರು ಸೇರಿದಂತೆ 27 ಮಂದಿಗೆ ಸೋಂಕು ತಗುಲಿದ್ದು, 7 ಪುರುಷರು, 8 ಮಹಿಳೆಯರು ಗುಣಮುಖರಾಗಿದ್ದು, ಒಟ್ಟು 15 ಮಂದಿ ಬಿಡುಗಡೆಗೊಂಡಿರುವುದಾಗಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾಹಿತಿ ಲಭಿಸಿದೆ.