ಮಡಿಕೇರಿ, ಜು. 24: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಪ್ರಗತಿಯಲ್ಲಿದ್ದರೂ, ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ನಡುವೆ ಅನ್ನದಾತನಿಗೆ ಕಾಲಕಾಲಕ್ಕೆ ಮಾಹಿತಿ ನೀಡುವಲ್ಲಿ ಕರ್ತವ್ಯನಿರತ ಸಿಬ್ಬಂದಿ ಒತ್ತಡದಲ್ಲಿ ಸಿಲುಕು ವಂತಾಗಿದೆ. ಒಂದೆಡೆ ಕೊರೊನಾ ನಿಯಂತ್ರಣ ಸಂಬಂಧ ಕೃಷಿ ಇಲಾಖೆಯ ಪ್ರಬಾರ ಜಂಟಿ ನಿರ್ದೇಶಕರ ಸಹಿತ ಒಂದಿಷ್ಟು ಮಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಇನ್ನೊಂದೆಡೆ ಕಚೇರಿ ಕೆಲಸಗಳಿಗೆ ಸೀಮಿತಗೊಂಡಿರುವ ಬೆರಳೆಣಿಗೆ ಸಿಬ್ಬಂದಿ ಒತ್ತಡದಲ್ಲಿ ಸಿಲುಕಿದ್ದು, ರೈತ ಸಂಪರ್ಕ ಕೇಂದ್ರಗಳ ಸಹಿತ ಇತರ ಉದ್ಯೋಗಿಗಳ ಸಾಕಷ್ಟು ಹುದ್ದೆ ಖಾಲಿ ಬಿದ್ದಿವೆ. ಪ್ರಸ್ತುತ ರಾಜ್ಯ ಸರಕಾರದ ಮುಖ್ಯಮಂತ್ರಿಗಳು ತಾವೇ ರೈತರಿರುವ ಕಾಲಘಟ್ಟದಲ್ಲಿ ಇತ್ತ ತುರ್ತು ಗಮನ ಹರಿಸಿ ಕೃಷಿ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕಿದೆ. ಕೊಡಗಿನಲ್ಲಿ ಖಾಲಿ ಹುದ್ದೆಗಳು ಕೊಡಗು ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 145 ಹುದ್ದೆಗಳಿದ್ದು, ಮಂಜೂ ರಾಗಿರುವ ಈ ಹುದ್ದೆಗಳಲ್ಲಿ ಕೇವಲ 48 ಮಂದಿ ಪ್ರಸ್ತುತ ಕರ್ತವ್ಯ ದಲ್ಲಿದ್ದಾರೆ. 97 ಹುದ್ದೆಗಳು ಭರ್ತಿ ಗೊಳ್ಳದೆ ಖಾಲಿಯಿವೆ. ಪರಿಣಾಮ ಕೃಷಿ ಚಟುವಟಿಕೆ ಪ್ರಗತಿ ಕಂಡುಕೊಳ್ಳು ವಲ್ಲಿಯೂ ಇಲಾಖೆಯು ವಿಫಲ ಗೊಂಡಿರುವುದು ಬೆಳಕಿಗೆ ಬಂದಿದೆ.
ವಿವಿಧ ಶಾಖೆಗಳು: ಕೊಡಗು ಜಿಲ್ಲಾ ಜಂಟಿ
(ಮೊದಲ ಪುಟದಿಂದ) ಕೃಷಿ ನಿರ್ದೇಶಕರ ಮುಖ್ಯ ಹುದ್ದೆ ಸಹಿತ ನಾಲ್ವರು ಸಹಾಯಕ ನಿರ್ದೇಶಕರು, ಇಬ್ಬರು ಕೃಷಿ ಅಧಿಕಾರಿಗಳು, ಕೇಂದ್ರ ಕಚೇರಿ ಅಧೀಕ್ಷಕರು ಸೇರಿದಂತೆ ಒಟ್ಟು 26 ಹುದ್ದೆಗಳಲ್ಲಿ ಏಳು ಮಂದಿ ಮಾತ್ರ ಕರ್ತವ್ಯದಲ್ಲಿದ್ದು, 19 ಸ್ಥಾನಗಳು ಖಾಲಿ ಇವೆ. ಮಡಿಕೇರಿ, ಭಾಗಮಂಡಲ, ನಾಪೋಕ್ಲು, ಸಂಪಾಜೆ, ರೈತ ಸಂಪರ್ಕ ಕೇಂದ್ರಗಳನ್ನು ಒಳಗೊಂಡಂತೆ ಬಹುತೇಕ ಖಾಲಿ ಉಳಿದಿವೆ.
ಮಡಿಕೇರಿ ಕೃಷಿ ಉಪ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಅಧಿಕಾರಿ, ಕಚೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಹಾಗೂ ‘ಡಿ’ ಗ್ರೂಪ್ ಸೇರಿದಂತೆ 15 ಹುದ್ದೆಗಳಲ್ಲಿ ನಾಲ್ವರು ಕರ್ತವ್ಯದಲ್ಲಿದ್ದು, 11 ಸ್ಥಾನಗಳು ಖಾಲಿ ಉಳಿದಿವೆ.
ಸೋಮವಾರಪೇಟೆ: ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಬಂಧಿಸಿದಂತೆ ಬಹುತೇಕ ಹುದ್ದೆಗಳು ಖಾಲಿ ಇವೆ. ಅಲ್ಲದೆ ಸೋಮವಾರಪೇಟೆ, ಕೊಡ್ಲಿಪೇಟೆ, ಕುಶಾಲನಗರ, ಶನಿವಾರಸಂತೆ, ಶಾಂತಳ್ಳಿ, ಸುಂಟಿಕೊಪ್ಪ ರೈತ ಸಂಪರ್ಕ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು ಮಂಜೂರಾಗಿರುವ 32 ಹುದ್ದೆಗಳಲ್ಲಿ 14 ಮಂದಿ ಕರ್ತವ್ಯದಲ್ಲಿದ್ದು, 18 ಹುದ್ದೆಗಳು ಖಾಲಿ ಬಿದ್ದಿವೆ.
ವೀರಾಜಪೇಟೆ: ವೀರಾಜಪೇಟೆ ತಾಲೂಕು ಕೃಷಿ ಅಧಿಕಾರಿ ಸೇರಿದಂತೆ ವೀರಾಜಪೇಟೆ ಹೋಬಳಿ, ಅಮ್ಮತ್ತಿ, ಬಾಳೆಲೆ, ಹುದಿಕೇರಿ, ಪೊನ್ನಂಪೇಟೆ, ಶ್ರೀಮಂಗಲ ಸಹಿತ ತಾಲೂಕಿನಲ್ಲಿ 33 ಮಂಜೂರಾತಿ ಹುದ್ದೆಗಳ ಪೈಕಿ 12 ಮಂದಿ ಕರ್ತವ್ಯದಲ್ಲಿದ್ದು, 21 ಹುದ್ದೆಗಳು ಖಾಲಿಯೊಂದಿಗೆ, ನೇಮಕಗೊಳ್ಳಬೇಕಿದೆ.
ಗೊಂದಲದಲ್ಲಿ ಅಧಿಕಾರಿಗಳು
ಪರಿಣಾಮ ಕೃಷಿ ಇಲಾಖೆಯಲ್ಲಿ ಕೆಳಹಂತದ ತಾಲೂಕು ಅಧಿಕಾರಿಯೊಬ್ಬರು ಜಿಲ್ಲೆಯ ಜಂಟಿ ನಿರ್ದೇಶಕರ ಹುದ್ದೆ ನಿರ್ವಹಿಸುತ್ತಾ, ಒತ್ತಡದ ನಡುವೆ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಜಿಲ್ಲೆಯ 16 ಹೋಬಳಿಗಳಿಗೆ ಸಂಬಂಧಿಸಿದಂತೆ ಅಲ್ಲಲ್ಲಿ ಕೂಡ ಹುದ್ದೆಗಳು ಖಾಲಿ ಇರುವ ಪರಿಣಾಮ ಮುಂಗಾರು ಕೃಷಿ ಚಟುವಟಿಕೆ ಸಹಿತ ಇಲಾಖೆಯ ಸಮಗ್ರ ಮಾಹಿತಿ ಪಡೆಯಲು ಮತ್ತು ಪ್ರಗತಿ ಪರಿಶೀಲನಾ ವರದಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.
ಪ್ರಗತಿ ನೋಟ: ಪ್ರಸಕ್ತ ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್ ಭತ್ತ ನಾಟಿಯ ಗುರಿಯೊಂದಿಗೆ 478 ಹೆಕ್ಟೇರ್ ನಾಟಿ ಮಾಡಲಾಗಿದೆ ಎಂದು ಇಲಾಖೆಯಿಂದ ದೈನಂದಿನ ವರದಿ ನೀಡಲಾಗಿದೆ. ಆದರೆ ಈ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಹೆಕ್ಟೇರ್ ಕೃಷಿ ಕಾರ್ಯ ಮುಗಿದು ಸಾಕಷ್ಟು ವಾರಗಳು ಕಳೆದಿವೆ.
ಅಂತೆಯೇ ಸೋಮವಾರಪೇಟೆ ತಾಲೂಕಿನ 4 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಗುರಿಯನ್ನು ಹೊಂದಿದ್ದು, 3050 ಹೆಕ್ಟೇರ್ ಪ್ರಗತಿ ತೋರಿಸಲಾಗಿದೆ. ಇಲ್ಲಿ ಬಹುತೇಕ ಜೋಳ ಬಿತ್ತನೆ ಮುಗಿದು ಗುರಿ ಮೀರಿದ ಸಾಧನೆ ಗೋಚರಿಸಿದೆ.
ಇನ್ನು ಭತ್ತದ ಕೃಷಿ ಸೋಮವಾರಪೇಟೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಗುರಿಯೊಂದಿಗೆ 4350 ಹೆಕ್ಟೇರ್ ಸಾಧನೆ ತೋರಿಸಿದ್ದು, ಉಭಯ ಬೆಳೆ ಸೇರಿ 7400 ಹೆಕ್ಟೇರ್ ಪ್ರಗತಿ ವಿವರ ಲಭಿಸಿದೆ.
ವೀರಾಜಪೇಟೆ: ಮತ್ತೊಂದೆಡೆ ವೀರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಭತ್ತ ಬೆಳೆ ನಾಟಿ ಪೈಕಿ ಈ ಅವಧಿಗೆ 4340 ಹೆಕ್ಟೇರ್ ಪ್ರಗತಿ ತೋರಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 34500 ಹೆಕ್ಟೇರ್ ಮುಂಗಾರು ಬೆಳೆಯ ಗುರಿ ಹೊಂದಲಾಗಿದ್ದು, 12218 ಹೆಕ್ಟೇರ್ ಕೃಷಿಯೊಂದಿಗೆ ಶೇಕಡ 35.41 ರಷ್ಟು ಸಾಧನೆ ಗೋಚರಿಸಿದೆ ಎಂದು ಇಲಾಖೆಯು ವರದಿ ನೀಡಿದೆ.