ಕೂಡಿಗೆ ಜು 24.ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಹೆಚ್ಚು ಕಚೇರಿಗಳು ಹಾರಂಗಿಯ ಅಣೆಕಟ್ಟೆಯ ಸಮೀಪದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಬೇಕಾದವು, ಹಾರಂಗಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿವೆ. ಈ ಕಚೇರಿಗಳನ್ನು ಹಾರಂಗಿಯಲ್ಲಿ ಖಾಲಿ ಇರುವ ಕಟ್ಟಡಗಳಲ್ಲಿ ಪ್ರಾರಂಭಿಸಲು ರೈತರ ಮತ್ತು ವಿವಿಧ ಗ್ರಾಮಗಳ ಸಂಘಟನೆಗಳು, ಈ ವ್ಯಾಪ್ತಿಯ ಗ್ರಾಮಸ್ಥರ ಒತ್ತಾಯವಾಗಿದೆ.

ಹಾರಂಗಿಯಲ್ಲಿದ್ದ ಅಧೀಕ್ಷಕರ ಕಚೇರಿ ಮತ್ತು ಕಾರ್ಯಪಾಲಕ ಅಭಿಯಂತರ ಕಚೇರಿಯನ್ನು ಕುಶಾಲನಗರಕ್ಕೆ ಕಳೆದ ಹತ್ತು ವರ್ಷಗಳ ಹಿಂದೆ ಸ್ಥಳಾಂತರ ಮಾಡಲಾಗಿತ್ತು. ಮೊದಲು ಕುಶಾಲನಗರದ ಕಾವೇರಿ ನೀರಾವರಿ ನಿಗಮದ ಮುಖ್ಯ ಅಧೀಕ್ಷಕರ ಕಚೇರಿಯನ್ನು ಮೈಸೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಯಿತು. ಇದಾದ ನಂತರದ ದಿನಗಳಲ್ಲಿ ಕುಶಾಲನಗರದ ಪುನರ್ವಸತಿ ಕೇಂದ್ರದಲ್ಲಿ ಅನೇಕ ಕಟ್ಟಡಗಳು ಖಾಲಿ ಇರುವುದನ್ನು ತಿಳಿದು ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿ ಇರಬೇಕಾದ ಅಧೀಕ್ಷಕರ ಕಚೇರಿ ಮತ್ತು ಕಾರ್ಯಪಾಲಕ ಅಭಿಯಂತರ ಕಚೇರಿಯನ್ನು ಕುಶಾಲನಗರಕ್ಕೆ ಸ್ಥಳಾಂತರ ಮಾಡಲಾಯಿತು. ಇದರಿಂದಾಗಿ ಸುಸಜ್ಜಿತವಾದ. ಹಾರಂಗಿಯಲ್ಲಿರುವ ಕಟ್ಟಡಗಳು ಪಾಳುಬಿದ್ದ ಕಟ್ಟಡಗಳಾಗಿವೆ.

ರಾಜ್ಯದ ಎಲ್ಲಾ ಅಣೆಕಟ್ಟೆಗಳ ಸಮೀಪದಲ್ಲಿ ಅಣೆಕಟ್ಟೆಗೆ ಸೇರಿದ. ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಅದರೆ ಹಾರಂಗಿ ವಿಭಾಗದ ಕಚೇರಿಗಳು ಹತ್ತು ಕಿಲೋಮೀಟರ್ ದೂರದ ಕುಶಾಲನಗರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರು ಮೇಲ್ಮಟ್ಟದ ಅಧಿಕಾರಿಗಳನ್ನು ಕಾಣಬೇಕಾದರೆ ಕುಶಾಲನಗರಕ್ಕೆ ಹೋಗಬೇಕು. ಇದರ ಬದಲು ಖಾಲಿ ಇರುವ ಕಟ್ಟಡಗಳಲ್ಲಿ ಕುಶಾಲನಗರದಲ್ಲಿರುವ ಕಚೇರಿಗಳನ್ನು ಪ್ರಾರಂಭಿಸಬೇಕೇಂದು ಹಾರಂಗಿ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಾದ ಹುದುಗೂರು, ಶಿರಹೊಳಲು, ಮಾದಲಾಪುರ, ಮಾವಿನಹಳ್ಳಿ, ಹಗ್ಗಡಹಳ್ಳಿ, ಕೂಡಿಗೆ, ಮಲ್ಲೇನಹಳ್ಳಿ, ಬ್ಯಾಡಗೊಟ್ಟ ಗ್ರಾಮದ ರೈತರು ಸಭೆ ಸೇರಿ ಉಸ್ತುವಾರಿ ಸಚಿವರಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಲು ತೀರ್ಮಾನ ಕೈಗೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹಾರಂಗಿ ಅಚ್ಚುಕಟ್ಟು ಪ್ರದೇಶದ ಕೊಡಗಿನ ಗಡಿ ಭಾಗದ ನೂರಾರು ರೈತರಿಗೆ ಬಾರಿ ಬೆಳೆ ನಷ್ಟವಾಗಿದೆ ಇದರ ಬಗ್ಗೆ ಮಾಹಿತಿ ನೀಡಲು ಈ ಭಾಗದ ರೈತರು ಕುಶಾಲನಗರಕ್ಕೆ ಹೋಗಬೇಕಾದ ಪ್ರಸಂಗಗಳು ಎದುರಾಗುತ್ತಿವೆ. ಅದ್ದರಿಂದಾಗಿ ಈ ಭಾಗದ ನೂರಾರು ರೈತರು, ಮಹಿಳಾ ರೈತರು, ಗ್ರಾಮಸ್ಥರು ಸಭೆ ನಡೆಸಿ ಮನವಿಯನ್ನು ಸಲ್ಲಿಸಲು ಒಕ್ಕೊರಲಿನ ತೀರ್ಮಾನ ತೆಗೆದುಕೊಂಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.