ಕಣಿವೆ, ಜು. 24 : ಸಾರ್ವಜನಿಕರು ಇನ್ನು ಮುಂದೆ ಕಂಡ ಕಂಡಲ್ಲಿ ಕಸ ಎಸೆದರೆ ಮೊದಲ ಹಂತವಾಗಿ ರೂ. 500 ಹಾಗೂ ಎರಡನೇ ಮತ್ತು ಕೊನೆಯ ಹಂತವಾಗಿ ರೂ. 2 ಸಾವಿರ ದವರೆಗೆ ದಂಡ ವಿಧಿಸಲಾಗುವುದು ಎಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್ ಎಚ್ಚರಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿನ ಕಾವೇರಿ ತೀರದ ರಸ್ತೆ ಬದಿಯಲ್ಲಿ ಕಸದ ರಾಶಿ ಹಾಕಿದ್ದ ಬಗ್ಗೆ ‘ಶಕ್ತಿ' ಸಚಿತ್ರ ವರದಿ ಪ್ರಕಟಿಸಿದ್ದರಿಂದ ಎಚ್ಚೆತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನದಿ ತೀರದ ರಸ್ತೆಯನ್ನು ಸ್ವಚ್ಛಗೊಳಿಸಿದ ನಂತರ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದರು. ಕುಶಾಲನಗರ ಪಟ್ಟಣ ನಮ್ಮ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಬೆಳೆಯುತ್ತಿದ್ದು, ಜನಸಂಖ್ಯೆಯು ಹೆಚ್ಚಿದೆ. ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ 35 ರಿಂದ 40 ಬಡಾವಣೆಗಳಿದ್ದು, 12 ಸಾವಿರ ಜನಸಂಖ್ಯೆಗೂ ಹೆಚ್ಚಿದೆ. ಪಂಚಾಯಿತಿಯಲ್ಲಿ ಕೇವಲ ನಾಲ್ವರು ಪೌರ ಕಾರ್ಮಿಕ ಸ್ವಚ್ಛತಾ ನೌಕರರಿದ್ದು, ಪಂಚಾಯಿತಿ ವ್ಯಾಪ್ತಿಯ ದೈನಂದಿನ ಸ್ವಚ್ಛತೆಗೆ ಅನಾನುಕೂಲ ಆಗುತ್ತಿದೆ. ಇದೀಗ ಕೊರೊನಾ ಕಾರಣವಿದ್ದರೂ ಕೂಡ ನಮ್ಮ ನೌಕರರು ಸ್ವಚ್ಛತೆಯಲ್ಲಿ ನಿರತರಾಗುತ್ತಿದ್ದಾರೆ. ಸಾರ್ವಜನಿಕರು ಪಂಚಾಯಿತಿಯೊಂದಿಗೆ ಸ್ವಚ್ಛತೆಗೆ ಸಹಕರಿಸಬೇಕಿದೆ. ಪಂಚಾಯಿತಿಯ ಟ್ರಾಕ್ಟರ್ ತಮ್ಮ ಬೀದಿಗೆ ಬಂದಾಗ ಟ್ರಾಕ್ಟರ್ ಒಳಗೆ ಕಸವನ್ನು ಹಾಕಬೇಕು ಎಂದು ಮನವಿ ಮಾಡಿದರು. ಪಂಚಾಯಿತಿ ವತಿಯಿಂದಲೇ ಮನೆಗಳಿಗೆ ತಲಾ ಎರಡು ಬಕೆಟ್ಗಳನ್ನು ಕೊಟ್ಟು ಹಸಿ ಕಸ ಮತ್ತು ಒಣ ಕಸವನ್ನು ಮನೆಯಿಂದಲೇ ಬೇರ್ಪಡಿಸುವ ಕೆಲಸಕ್ಕೆ ಇನ್ನೊಂದು ವಾರದಲ್ಲಿ ಚಾಲನೆ ನೀಡಲಾಗುತ್ತದೆ. ಅಲ್ಲದೇ ಈ ಕಾರಣಕ್ಕೆ ಟ್ರಾಕ್ಟರ್ ಜೊತೆಗೆ ಮತ್ತೊಂದು ಟಾಟಾ ಏಸ್ ವಾಹನವನ್ನು ಖರೀದಿಸಲಾಗುತ್ತಿದೆ. ಪೌರ ಕಾರ್ಮಿಕರ ಸ್ವಚ್ಛತೆಯ ಸೇವೆಯೊಂದಿಗೆ ಸಾರ್ವಜನಿಕರು ಕೂಡ ಕೈ ಜೋಡಿಸಿ ವೈಜ್ಞಾನಿಕವಾದ ಕಸ ವಿಂಗಡಣೆÉ ಹಾಗೂ ವಿಲೇವಾರಿ ಮನೆಯಿಂದಲೇ ಆರಂಭವಾಗುವ ಅಗತ್ಯವಿದೆ. ಎಲ್ಲಕ್ಕೂ ಪಂಚಾಯಿತಿ ಹಾಗೂ ಪೌರ ಕಾರ್ಮಿರನ್ನು ಬೊಟ್ಟು ಮಾಡುವುದು ತಪ್ಪಬೇಕಿದೆ. ವಾಹನ ಬಂದಾಗ ಕಸ ಹಾಕದೇ ರಸ್ತೆ, ಚರಂಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಕಸ ಹಾಕುವ ಜನರಿಗೆ ಆರಂಭಿಕ 500 ರೂ.ಗಳಿಂದ 2000 ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
-ಮೂರ್ತಿ