ಕೂಡಿಗೆ, ಜು. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಪತ್ತು ನಿರ್ವಹಣೆ ಯೋಜನೆ ಸಮಿತಿ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಯ ಮುಂಜಾಗ್ರತಾ ಕ್ರಮದ ಪೂರ್ವಭಾವಿ ಸಭೆ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿಯೂ ಆದ ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆ ಹಾರಂಗಿ ಮತ್ತು ಕಾವೇರಿ ನದಿಯ ಸಂಗಮ ಸ್ಥಳದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣೆಗೆ ಅನುಸರಿಸುವ ಕ್ರಮಗಳ ಬಗ್ಗೆ ದೀರ್ಘವಾಗಿ ಚರ್ಚೆಗಳು ಸಭೆಯಲ್ಲಿ ನಡೆದವು.
ಇದರ ಜೊತೆಯಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವರದರಾಜ್ ಮಾತನಾಡಿ, ವಿಪತ್ತು ನಿರ್ವಹಣೆ ಸಮಿತಿಯವರು ಈ ವ್ಯಾಪ್ತಿಯ ಆಗುಹೋಗುಗಳ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ತಮ್ಮ ತಮ್ಮ ಜವಾಬ್ದಾರಿಯನ್ನು ಸೂಚನೆಯಂತೆ ನಿರ್ವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಶುಶ್ರೂಷಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಅಧಿಕಾರಿ ವರ್ಗದವರು ಹಾಜರಿದ್ದರು.