ಮಡಿಕೇರಿ, ಜು. 22: ಕೋವಿಡ್-19 ನಿಯಂತ್ರಿಸುವಲ್ಲಿ ನಗರ ಮತ್ತು ಪಟ್ಟಣದ ಸ್ಥಳೀಯ ಸಂಸ್ಥೆಗಳು ಶ್ರಮಿಸುತ್ತಿದ್ದು, ಈ ಸಂಬಂಧ ಮತ್ತಷ್ಟು ಎಚ್ಚರಿಕೆ ವಹಿಸುವಲ್ಲಿ ಅನುಸರಿಸ ಬೇಕಾದ ಮಾರ್ಗೋಪಾಯಗಳ ಬಗ್ಗೆ ತರಬೇತಿ ಕಾರ್ಯಗಾರ ನಡೆಯಿತು.
ನಗರದ ನಗರಸಭೆ ಕೌನ್ಸಿಲಿಂಗ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಪೌರಾಯುಕ್ತ ಶ್ರೀನಿವಾಸ್ ಮಾತನಾಡಿ, ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆ ಇಲಾಖೆ ವತಿಯಿಂದ ಕೋವಿಡ್-19 ಸಂಬಂಧ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಉಸ್ತುವಾರಿಯಲ್ಲಿ ಬಿಎಲ್‍ಒ, ನಗರಸಭೆ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳನ್ನೊಳಗೊಂಡ ತಂಡವನ್ನು ಪ್ರತಿ ವಾರ್ಡ್‍ನಲ್ಲಿಯೂ ಸಿದ್ಧಪಡಿಸಿದ್ದು, ಈಗಾಗಲೇ ಕೋವಿಡ್-19 ನಿಯಂತ್ರಣಾ ಸಂಬಂಧ ಈ ತಂಡಗಳು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪ್ರತೀ ವಾರ್ಡ್‍ನಲ್ಲಿ ರಚನೆಯಾದ ಈ ತಂಡವು, ಸಂಬಂಧಪಟ್ಟ ವಾರ್ಡ್‍ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಂತಹ ಸಂದರ್ಭ ಅದನ್ನು ನಿರ್ವಹಿಸಲಿದೆ. ಅಲ್ಲದೆ ಸಣ್ಣ-ಪುಟ್ಟ ಸಮಸ್ಯೆಗಳನ್ನೂ ಸಹ ಸ್ಥಳೀಯವಾಗಿಯೇ ಬಗೆಹರಿಸಿ ಕೊಂಡು ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ವೃದ್ಧರು ಮತ್ತು ಅನಾರೋಗ್ಯ ಪೀಡಿತರ ವಿವರವನ್ನು ಸಹ ಸಂಗ್ರಹಿಸಲಿದೆ. ಒಟ್ಟಾರೆ 120 ಜನರು ಪ್ರತ್ಯೇಕ ತಂಡಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕೋವಿಡ್-19 ಬಗ್ಗೆ ಭಯ ಬೇಡ ಎಚ್ಚರಿಕೆ ಇರಲಿ ಎಂಬ ಸಂದೇಶದಡಿ ಪ್ರತೀ ವಾರ್ಡ್‍ನಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವಿಕೆ ಮತ್ತು ಅದರ ಮಹತ್ವ, ವೈಯಕ್ತಿಕ ಶುಚಿತ್ವ, ಸ್ಯಾನಿಟೈಸರ್ ಬಳಕೆ ಮತ್ತು ಅತೀ ಮುಖ್ಯವಾಗಿ ಮಾಸ್ಕ್ ಧಾರಣೆಯ ಕುರಿತಂತೆ ಸಾರ್ವಜನಿ ಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ಕೋವಿಡ್-19 ಸಂಬಂಧ ಸಾರ್ವಜನಿಕರಲ್ಲಿನ ಗೊಂದಲ ಮತ್ತು ಭಯ ನಿವಾರಿಸುವ ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಪೌರಾಯುಕ್ತರು ತಿಳಿಸಿದರು.
ರಾಜ್ಯ ಮಟ್ಟದಲ್ಲಿ ಆನ್‍ಲೈನ್ ಮೂಲಕ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಈ ತರಬೇತಿಯಲ್ಲಿ 4 ನಗರ ಸ್ಥಳೀಯ ಸಂಸ್ಥೆಯ ಉಸ್ತುವಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಭಾಗಿಯಾಗಿ ತರಬೇತಿ ಪಡೆದು ಕೊಂಡಿದ್ದಾರೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ನಗರಸಭೆ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣ ಬಂದಂತಹ ಸಂದರ್ಭದಲ್ಲಿ ಅಂತಹ ಕಟ್ಟಡವನ್ನೂ ಸಹ ಸ್ಯಾನಿಟೈಸೇಶನ್ ಮಾಡುವ ಕಾರ್ಯನಿರ್ವಹಣೆ. ಕೋವಿಡ್-19 ಸೋಂಕಿನಿಂದ ಮೃತರಾದವರ ಶವಸಂಸ್ಕಾರ ಸಂದರ್ಭದಲ್ಲಿಯೂ ನಗರಸಭೆಯ ಪೌರಕಾರ್ಮಿಕರು ತೊಡಗಿಸಿ ಕೊಂಡಿದ್ದಾರೆ ಎಂದು ಪೌರಾಯುಕ್ತ ಶ್ರೀನಿವಾಸ್ ತಿಳಿಸಿದರು. ಇದರೊಂದಿಗೆ ಮಳೆಗಾಲ ನಿರ್ವಹಣೆ ಸಂಬಂಧ ಮಾಹಿತಿ ನೀಡಿ, ನಗರಸಭೆಯಲ್ಲಿ 24x7 ಕಂಟ್ರೋಲ್ ರೂಂ ಕಾರ್ಯ ನಿರ್ವಹಿಸಲಿದೆ. ಮಳೆಗಾಲವನ್ನು ಸಮರ್ಥವಾಗಿ ನಿಭಾಯಿಸಲು ನಗರಸಭೆ ಸಜ್ಜಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು.