ಸೋಮವಾರಪೇಟೆ, ಜು. 21: ಲೋಕೋಪಯೋಗಿ ಇಲಾಖೆ ಮೂಲಕ ಮಳೆಹಾನಿ ಪರಿಹಾರ ನಿಧಿಯಡಿ ಪ್ರಗತಿಯಲ್ಲಿರುವ ಸೋಮವಾರಪೇಟೆ-ಶಾಂತಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಾಂಕ್ರೀಟ್ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು.ಪ್ರಗತಿಯಲ್ಲಿರುವ ಕಾಮಗಾರಿ ಯನ್ನು ವೀಕ್ಷಿಸಿದ ಶಾಸಕರು, ಈಗಾಗಲೇ ಪೂರ್ಣಗೊಂಡಿರುವ ಚರಂಡಿ ಕಾಮಗಾರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ರಸ್ತೆಗಿಂತಲೂ ಚರಂಡಿ ಮೇಲೆ ಇದ್ದು, ನೀರಿನ ಸರಾಗ ಹರಿವಿಗೆ ತೊಡಕುಂಟಾಗುತ್ತದೆ. ಈ ಹಿನ್ನೆಲೆ ಕೆಲವು ಕಡೆಗಳಲ್ಲಿ ಚರಂಡಿಯನ್ನು ಒಡೆದು ನೂತನವಾಗಿ ನಿರ್ಮಿಸುವಂತೆ ಸೂಚಿಸಿದರು.ಕಾಂಕ್ರೀಟ್ ಕಾಮಗಾರಿಗೆ ಬಳಕೆ ಯಾಗುವ ಪರಿಕರಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಕಲ್ಲು, ವೆಟ್‍ಮಿಕ್ಸ್ ಬಗ್ಗೆ ಗಮನ ಹರಿಸಬೇಕೆಂದು ಸಂಬಂಧಿಸಿದ ಅಭಿಯಂತರ ರಮಣಗೌಡ ಅವರಿಗೆ ನಿರ್ದೇಶನ ನೀಡಿದರು. ಕೆಲವೆಡೆ ಶಾಸಕರೇ ಸ್ವತಃ ಟೇಪ್ ಹಿಡಿದು

(ಮೊದಲ ಪುಟದಿಂದ) ರಸ್ತೆಯ ಅಗಲದ ಬಗ್ಗೆ ಖಾತ್ರಿಪಡಿಸಿಕೊಂಡರು. ರೂ. 125 ಲಕ್ಷ ವೆಚ್ಚದಲ್ಲಿ ವಿವೇಕಾನಂದ ವೃತ್ತದಿಂದ ಆಲೇಕಟ್ಟೆವರೆಗೆ 530 ಮೀಟರ್ ಉದ್ದ, 7 ಮೀಟರ್ ಅಗಲದ ನೂತನ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಗುತ್ತಿಗೆದಾರ ಮತ್ತು ಅಭಿಯಂತರರಿಗೆ ಸೂಚಿಸಲಾಗಿದೆ. ಸ್ಥಳೀಯರೂ ಸಹ ರಸ್ತೆ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಶಾಸಕರು ಅಭಿಪ್ರಾಯಿಸಿದರು.

45 ದಿನಗಳ ಕಾಲ ರಸ್ತೆ ಬಂದ್

ವಿವೇಕಾನಂದ ಸರ್ಕಲ್‍ನಿಂದ 530 ಮೀಟರ್ ರಸ್ತೆಯ ಕಾಮಗಾರಿ ನಡೆಯುತ್ತಿರುವದರಿಂದ ತಾ.21ರಿಂದ ಸೆ.6ರ ತನಕ ಈ ರಸ್ತೆಯಲ್ಲಿ ವಾಹನ ಸಂಚಾರವಿರುವದಿಲ್ಲ. ಮುಂದಿನ 15 ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕಾಂಕ್ರೀಟ್‍ನ ಕ್ಯೂರಿಂಗ್‍ಗಾಗಿ ಹೆಚ್ಚು ದಿನಗಳ ಅವಶ್ಯಕತೆಯಿದೆ. ಈ ಹಿನ್ನೆಲೆ ಸೆ.6ರವರೆಗೆ (45 ದಿನಗಳ ಕಾಲ)ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಶಾಂತಳ್ಳಿ, ಕುಂದಳ್ಳಿ, ಮಲ್ಲಳ್ಳಿ ಹಾಗೂ ತೋಳೂರುಶೆಟ್ಟಳ್ಳಿ, ಕೂತಿ, ಸಕಲೇಶಪುರಕ್ಕೆ ತೆರಳುವವರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಚೌಡ್ಲು, ಆಲೇಕಟ್ಟೆ ರಸ್ತೆ ಹಾಗೂ ಕಕ್ಕೆಹೊಳೆ, ಹಾನಗಲ್ಲು ಕೆರೆ, ಹಾನಗಲ್ಲು ಶೆಟ್ಟಳ್ಳಿ, ಬಿ.ಟಿ.ಸಿ.ಜಿ. ಕಾಲೇಜು ಮೂಲಕ ಪರ್ಯಾಯ ರಸ್ತೆಯಲ್ಲಿ ಸಂಚರಿಸಬಹುದಾಗಿದೆ ಎಂದು ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಪಷ್ಟಪಡಿಸಿದ್ದಾರೆ.