ಕಣಿವೆ, ಜು. 21: ಕಾಡಂಚಿನ ಗ್ರಾಮಗಳಲ್ಲಿ ವಾಸವಿರುವ ರೈತರು ತಮ್ಮ ಮನೆಗಳಲ್ಲಿ ಸಾಕಿರುವ ಗೋವುಗಳನ್ನು ಮೇಯಲೆಂದು ಕಾಡಿನೊಳಗೆ ಓಡಿಸುವುದು ವಾಡಿಕೆ. ಆದರೆ ಆ ಅಮಾಯಕ ಗೋವುಗಳಿಗೆ ಏಕೆ ಈ ಶಿಕ್ಷೆ? ಅಂದರೆ ಗೋವುಗಳಿಗೆ ಸರಿಯಾಗಿ ಮೂಗುದಾರ, ಹಗ್ಗ ಹಾಕಿ ಕಟ್ಟಿ ಸಾಕಲು ಒಲ್ಲದ ಈ ಮಂದಿ ಅವುಗಳ ಕುತ್ತಿಗೆಯ ಮೇಲೆ ಮತ್ತು ಕೆಳಗೆ ಮರದ ತುಂಡುಗಳನ್ನು ಕಟ್ಟಿ ತೂಗು ಹಾಕುವುದು ಒಂದು ರೀತಿಯಲ್ಲಿ ಅವುಗಳಿಗೆ ನೀಡುತ್ತಿರುವ ಶಿಕ್ಷೆ ಅಲ್ಲವೇ? ಇಂತಹ ಚಿತ್ರಣ ಸಾಮಾನ್ಯವಾಗಿ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಂಡುಬರುತ್ತದೆ. ಅಡವಿಯಲ್ಲಿ ಅವುಗಳು ಮೇಯಲು ಯಾವುದೇ ಅಡ್ಡಿ, ಅನಾನುಕೂಲ ಹಾಗೂ ಆತಂಕಗಳಿಲ್ಲ. ಅಂದರೆ ಜಾನುವಾರುಗಳು ಕಾಡುಗಳಲ್ಲಿ ಮೇಯಲು ಈ ಮಂದಿಗೆ ಯಾವುದೇ ತಕರಾರುಗಳಿಲ್ಲ. ಕೇವಲ ಅಲ್ಲಿ ಮೇಯುವುದಾದರೆ ಇವೆಲ್ಲಾ ಆ ಗೋವುಗಳಿಗೆ ತೂಗು ಹಾಕ ಬೇಕಾಗಿಲ್ಲ. ಆದರೆ, ಅಕ್ಕ ಪಕ್ಕದ ಜಮೀನುಗಳ ಬೇಲಿ ನುಗ್ಗಿ ತೆರಳಿ ಅಲ್ಲಿನ ರೈತರು ಬೆಳೆದ ಫಸಲು ತಿನ್ನಬಾರದು ಎಂದು ಈ ಜಾನುವಾರುಗಳ ಪಾಲಕರು ಈ ರೀತಿ ಹಸು ಕರುಗಳು ಎನ್ನದೇ ಮರದ ಕಟ್ಟುಗಳನ್ನು ತೂಗು ಹಾಕುತ್ತಾರೆ. ಒಂದಷ್ಟು ತೂಕದ
(ಮೊದಲ ಪುಟದಿಂದ) ಆ ಭಾರವನ್ನು ಹೊತ್ತು ಕೊಂಡ ಆ ಹಸು ಅಥವಾ ಕರು ಮೇಯುವು ದಾದರು ಏನು ಮತ್ತು ಹೇಗೆ ಎಂಬ ಅರಿವು ಆ ಮಂದಿಗಿಲ್ಲ. ಇದು ಒಂದು ರೀತಿಯಲ್ಲಿ ಮೂಕ ಪ್ರಾಣಿಗಳ ಶಿಕ್ಷೆ ಆಗುವುದಿಲ್ಲವೇ? ಹಾಗೆಂದು ಇವರಿಗೆ ಯಾರಿಗೂ ಅನಿಸುತ್ತಲೇ ಇಲ್ಲವೇ? ಕಾಡಿನ ಒಳಗೆ ಮೇಯುವ ಜಾನುವಾರು ಗಳಿಗೆ ಈ ಶಿಕ್ಷೆ ಇಲ್ಲ. ಅಂದರೆ ಕಾಡಿನೊಳಗೆ ಜಾನುವಾರುಗಳು ಮೇಯಿಸುವುದು ಅವರಿಚ್ಚೆ. ಆದರೆ ಆ ಕಾಡಿನೊಳಗಿನ ವನ್ಯಜೀವಿಗಳು ಕಾಡಿನೊಳಗೆ ಆಹಾರವಿಲ್ಲದೇ ನಾಡಿನೊಳಗಿನ ಈ ಮಂದಿಯ ಜಮೀನುಗಳಿಗೆ ಮಾತ್ರ ಧಾವಿಸು ವಂತಿಲ್ಲ. ನೋಡಿ ಹೇಗಿದೆ. ಇವರು ಸಲಹಿರುವ ಮೂಕ ಪ್ರಾಣಿಗಳಿ ಗೊಂದು ನ್ಯಾಯ. ವನ್ಯ ಜೀವಿಗಳಿ ಗೊಂದು ನ್ಯಾಯ. ಇನ್ನೂ ಕೆಲವು ಮಂದಿ ಇದ್ದಾರೆ. ನಿತ್ಯವೂ ಹೈನುಗಾರಿಕೆ ನಡೆಸುವ ಮಂದಿ ಸಾಕಿರುವ ಹಸುಗಳು ಏನಾದರೂ ಗಂಡು ಕರುವಿಗೆ ಜನ್ಮವಿತ್ತರೆ, ಆ ಕರುಗಳನ್ನು ದಿನ ಬೆಳಗಾಗುವ ಮೊದಲೇ ಕಟುಕರಿಗೆ ಮಾರಾಟ ಮಾಡುವ ಪ್ರಸಂಗಗಳು ಇವೆ. ಹೆಣ್ಣಾದರೆ ಅವುಗಳು ಮುಂದೆ ಹಾಲು ಕೊಡುತ್ತವೆ. ಗಂಡಾದರೆ ಯಾವುದೇ ಪ್ರಯೋಜನವಿಲ್ಲ ಎಂಬುದು ಆ ಮಂದಿಯ ಅಂಬೋಣ. ಏನೇ ಇರಲಿ. ತಾವು ಸಾಕುವ ಹಸು ಕರುಗಳನ್ನು ಕಾಡಿಗೂ ಕೂಡ ಮೇಯಲು ಓಡಿಸದೇ, ಬೇಲಿ ಹಾರಬಾರದು ಎಂದು ಅವುಗಳ ಮೇಲೆ ಮರದ ಕೊಂಬೆಗಳನ್ನು ಹೇರದೇ ಜೋಪಾನವಾಗಿ ನೋಡಿಕೊಳ್ಳುವ ವಾತಾವರಣ ಸೃಷ್ಟಿಯಾಗಬೇಕಿದೆ. ಮೂಕ ಪ್ರಾಣಿಗಳನ್ನು ಹಿಂಸಿಸಿ ಸಲಹುವುದು ಅದೊಂದು ರೀತಿ ಪರೋಕ್ಷವಾಗಿ ಕಟುಕತನಕ್ಕೆ ಸಮನಾದುದು ಎಂದು ತಿಳಿದು ಈಗಾಗಲೇ ಮೈ ಮೇಲೆ ಭಾರ ಹೇರಿರುವ ಕಟ್ಟುಗಳನ್ನು ಹಸು ಕರುಗಳ ಮೇಲಿಂದ ತೆರವುಗೊಳಿಸಿ ಮುಕ್ತವಾಗಿಸಬೇಕೆಂಬುದು ಈ ಲೇಖನದ ಆಶಯ ಅಷ್ಟೆ.
- ಕೆ.ಎಸ್. ಮೂರ್ತಿ