ಮಡಿಕೇರಿ, ಜು.21: ಆಕೆ 55 ರ ಪ್ರಾಯದ ಗೃಹಿಣಿ. ಮೂರ್ನಾಡುವಿನಲ್ಲಿ ತನ್ನ ಪತಿ ಮತ್ತು ತೋಟ ಮಾಲೀಕರೊಬ್ಬರ ಬಳಿ ಚಾಲಕನಾಗಿರುವ ಮಗನೊಂದಿಗೆ ವಾಸಿಸುತ್ತಿದ್ದಾರೆ. ನಿನ್ನೆ ದಿನ ನಡೆದ ಒಂದು ಘಟನೆ ವೀಡಿಯೋ ವೈರಲ್ ಆಗಿ ಸಾಮಾಜಿಕ ಜಾಲ ತಾಣಗಳಲ್ಲಿ ಇಂದು ಓಡಾಡಿತು. ಆ ಮಹಿಳೆ ನಿನ್ನೆ ಸಂಜೆ ಸುಮಾರು 4.30 ರ ವೇಳೆ ಬಲಮುರಿಯ ಕಾವೇರಿ ಹೊಳೆ ದಡದಲ್ಲಿ ನಡೆದಾಡುತ್ತಿರುವದು ಕಂಡುಬಂದಿತು. ಬಲಮುರಿಯ ಕೆಲವು ಯುವಕರು ತಮ್ಮ ಮೊಬೈಲ್‍ನಲ್ಲಿ ಬಲಮುರಿ ಸೇತುವೆ ಬಳಿ ನಿಂತು ನದಿಯ ಚಿತ್ರಣವನ್ನು ವೀಡಿಯೋಕರಿ ಸುತ್ತ್ತಿದ್ದಾಗ ಈ ಮಹಿಳೆ ನದೀ ದಡದಲ್ಲಿ ವಿಚಿತ್ರವಾಗಿ ಓಡಾಡುತ್ತಿದ್ದುದನ್ನು ನೋಡಿ ಅದನ್ನೂ ಚಿತ್ರೀಕರಿಸಿದ್ದಾರೆ. ಆ ಯುವಕರು ನೋಡ ನೋಡುತ್ತ್ತಿದ್ದಂತೆಯೇ ಮಹಿಳೆ ನದಿ ನೀರಿನ ಮಡುವಿನಲ್ಲಿ ಜಿಗಿದೇ ಬಿಟ್ಟರು. ಅಷ್ಟರಲ್ಲಿ ನೋಡುತ್ತಿದ್ದವರು ಬೊಬ್ಬೆ ಹಾಕಿದರು. ಅದೃಷ್ಟವಶಾತ್ ನದಿ ಸನಿಹ ಮಾತನಾಡುತ್ತ ಕುಳಿತಿದ್ದ ಬಲಮುರಿಯ ನಿವಾಸಿಗಳಾದ ಚಂಗಂಡ ಸೂರಜ್, ಬೊಳ್ತಂಡ ಕಿರಣ್ ಹಾಗೂ ಅರ್ಚಕರಾದ ಚಂದ್ರಶೇಖರ್ ಐತಾಳ್ ತ್ರಿಮೂರ್ತಿಗಳಂತೆ ನದಿಗಿಳಿದು ಮಹಿಳೆಯನ್ನು ರಕ್ಷಿಸಿ ಮಾನವೀಯತೆ ಮೆರೆದರು. ಬಳಿಕ ಆಕೆಯ ದೇಹದಲ್ಲಿದ್ದ ನೀರನ್ನು ಹೊರ ಹಾಕಿ ಮನೆಯೊಂದರಲ್ಲಿ ಉಪಚರಿಸಿ ಮೂರ್ನಾಡುವಿನ ಆಕೆಯ ಮನೆಗೆ ತಲುಪಿಸಿದರು. ಆಕೆಯನ್ನು ಬಳಿಕ ಮಡಿಕೇರಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ಮನೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಬಲಮುರಿ ಶ್ರೀ ಅಗಸ್ತ್ಯೇಶ್ವರ ದೇಗುಲದ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ ಅವರ ಪ್ರಕಾರ ನದಿಯ ಸುಳಿಯಲ್ಲಿಯೂ ಸಿಲುಕಿ ಈ ಮಹಿಳೆ ಬದುಕುಳಿರುವದು ಪವಾಡ ಸದೃಶವೆನಿಸಿದೆ. ಸ್ಥಳೀಯ ಯುವಕರ ಸಕಾಲಿಕ ರಕ್ಷಣಾ ಕಾರ್ಯವೂ ಮೆಚ್ಚುವಂತಹದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗಿಲ್ಲ.