ಮಡಿಕೇರಿ, ಜು. 20: ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಊರುಬೈಲು - ಸಂಪಾಜೆ ಗ್ರಾಮಕ್ಕೆ ಗ್ರಾಮ ಸಡಕ್ ರಸ್ತೆಯ ಅಡ್ಡಲಾಗಿ ಹರಿಯುತ್ತಿರುವ ಪಯಸ್ವಿನಿ ನದಿಗೆ ಸುಮಾರು 9 ವರ್ಷಗಳ ಹಿಂದೆ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಕೊಡಗಿನಲ್ಲಾದ ಪ್ರಾಕೃತಿಕ ದುರಂತದಲ್ಲಿ ಈ ಸೇತುವೆ ಭಾಗಶ: ಕೊಚ್ಚಿಹೋಗಿತ್ತು. ಇದರಿಂದಾಗಿ ಊರುಬೈಲು ಗ್ರಾಮಸ್ಥರು ತಮ್ಮ ದೈನಂದಿನ ವ್ಯವಹಾರಕ್ಕೆ ಮುಖ್ಯರಸ್ತೆಗೆ ಬರಲು ಸುಮಾರು 8 ಕಿ.ಮೀ. ಬರುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೊಪಯ್ಯ ಅವರ ಪ್ರಯತ್ನ ದಿಂದ ನಬಾರ್ಡ್ ಯೋಜನೆಯಲ್ಲಿ ಸೇತುವೆ ಮಂಜೂರಾತಿ ದೊರೆತಿತ್ತು. ಆದರೂ ಕಾರಣಾಂತರದಿಂದ ಕಾಮಗಾರಿ ಪ್ರಾರಂಭವಾಗಿರಲಿಲ್ಲ, ಹೀಗಾಗಿ ಮಳೆಗಾಲ ಮುಗಿದಂತೆ ಸೇತುವೆ ಕುಸಿದ ಭಾಗಕ್ಕೆ ಮಣ್ಣು ತುಂಬಿಸಿ ಇಲ್ಲವೇ ತಾತ್ಕಾಲಿಕ ಕಾಲುಸೇತುವೆ ನಿರ್ಮಿಸಿಕೊಂಡು ಗ್ರಾಮಸ್ಥರೇ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಈ ಸಮಸ್ಯೆಯನ್ನು ಸ್ಥಳೀಯ ನಾಯಕರು ಶಾಸಕ ಕೆ.ಜಿ. ಬೋಪಯ್ಯ ಅವರ ಗಮನಕ್ಕೆ ತಂದಾಗ ಶಾಸಕರು ಅತೀ ಶೀಘ್ರವಾಗಿ ಈ ಸೇತುವೆ ನಿರ್ಮಾಣಕ್ಕೆ ಸೂಚನೆ ನೀಡಿದ್ದರು.
ಹಾಗಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾದ ಕಾಮಗಾರಿಯನ್ನು ಗುತ್ತಿಗೆದಾರರು ತ್ವರಿತಗತಿಯಲ್ಲಿ ಕೈಗೊಂಡಿದ್ದರೂ, ನಂತರ ಕೊರೊನಾ ಸೋಂಕಿನ ಹಿನ್ನೆಲೆ ಘೋಷಿಸಿದ ಲಾಕ್‍ಡೌನ್ ಸಂದರ್ಭ ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ನಂತರ ಲಾಕ್‍ಡೌನ್ ಸಡಿಲಿಕೆ ಬಳಿಕ ಮತ್ತೆ ಪ್ರಾರಂಭವಾದ ಸೇತುವೆ ಕಾಮಗಾರಿ ಸುಮಾರು ಶೇ. 80 ರಷ್ಟು ಮುಗಿಯುವ ವೇಳೆ ಮತ್ತು ಮುಂಗಾರು ತೀವ್ರವಾಗಿ ಪಯಸ್ವಿನಿ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾದ ಹಿನ್ನೆಲೆ ಈಗ ಮತ್ತೊಮ್ಮೆ ಸ್ಥಗಿತಗೊಂಡಿದೆ. ಊರುಬೈಲು ಗ್ರಾಮಸ್ಥರ ಸಂಕಷ್ಟ ಅರಿತಿದ್ದ ಕೆ.ಜಿ. ಬೋಪಯ್ಯ ಅವರು ಸೇತುವೆಗೆ ನಿಗದಿಯಾದ ಮೊತ್ತ ಕಡಿಮೆಯಾದ ಹಿನ್ನೆಲೆ ಅಗತ್ಯ ಹೆಚ್ಚುವರಿ ಅನುದಾನದ ವ್ಯವಸ್ಥೆ ಮಾಡಿ ಸೇತುವೆ ಕಾಮಗಾರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಈಗ ಮಳೆಯ ಕಾರಣ ಕಾಮಗಾರಿ ನಿಂತಿರುವುದು ಗ್ರಾಮಸ್ಥರಲ್ಲಿ ನಿರಾಸೆ ಮೂಡಿಸಿದೆ. ಈ ಹಿನ್ನೆಲೆ ಮತ್ತೊಮ್ಮೆ ಊರುಬೈಲು ಗ್ರಾಮಸ್ಥರು ಸ್ಥಳೀಯ ನಾಯಕ ಎನ್.ಸಿ. ಅನಂತ ಅವರ ಮುಂದಾಳತ್ವದಲ್ಲಿ ಮತ್ತೊಮ್ಮೆ ತಾತ್ಕಾಲಿಕ ಕಾಲುಸೇತುವೆ ನಿರ್ಮಿಸಿಕೊಂಡಿದ್ದಾರೆ.
- ಶಭರೀಶ್ ಕುದ್ಕುಳಿ, ಸಂಪಾಜೆ.