ಸೋಮವಾರಪೇಟೆ,ಜು.20: ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಗಂಭೀರವಾಗಿ ಪರಿಗಣಿಸದಿರುವದು ಕಂಡುಬರುತ್ತಿದೆ.
ಪಟ್ಟಣಕ್ಕೆ ಸಮೀಪದಲ್ಲೇ ಎರಡು ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಿದ್ದು, ಸೋಮವಾರದಂದು ನಡೆಯುವ ಸಂತೆಯನ್ನು ರದ್ದುಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಪಟ್ಟಣದಲ್ಲಿ ಹೆಚ್ಚು ಜನರು ಸೇರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದರೂ ಸಹ ಕೆಲ ವರ್ತಕರು ರಸ್ತೆ ಬದಿ, ಚರಂಡಿಯ ಮೇಲೆ ದಿನಸಿ ತರಕಾರಿ ಅಂಗಡಿಗಳನ್ನು ತೆರೆದು ಬೆಳಗ್ಗಿನಿಂದಲೇ ವ್ಯಾಪಾರದಲ್ಲಿ ತೊಡಗಿದ್ದರು.
ಹೈಟೆಕ್ ಮಾರುಕಟ್ಟೆಗೆ ತೆರಳುವ ದಾರಿಯನ್ನು ಬಂದ್ ಮಾಡಿದ ಹಿನ್ನೆಲೆ, ಮಾರುಕಟ್ಟೆ ಆವರಣದ ಹೊರಗೆ ತರಕಾರಿ ಮಾರಾಟಕ್ಕೆ ಮುಂದಾದ ವ್ಯಾಪಾರಿಗಳನ್ನು ತರಕಾರಿ ಸಹಿತ ಪೊಲೀಸರು ತೆರವು ಗೊಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಹಾಗೂ ಆರೋಗ್ಯ ನಿರೀಕ್ಷಕ ಉದಯ ಕುಮಾರ್ ಅವರ ಸೂಚನೆಯಂತೆ ಬೆಳಿಗ್ಗೆ ಮಾರುಕಟ್ಟೆಯ ಎಲ್ಲಾ ದ್ವಾರಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದನ್ನು ಕಂಡ ತರಕಾರಿ, ದಿನಸಿ ವ್ಯಾಪಾರಿಗಳು ರಸ್ತೆಯ ಬದಿಗಳಲ್ಲಿ ಮಾರಾಟಕ್ಕೆ ಮುಂದಾದರು. ಜನ ಸಂದಣಿ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಅಂಗಡಿಗಳನ್ನು ತೆರವುಗೊಳಿಸಿದರು. ತರಕಾರಿ ವ್ಯಾಪಾರಸ್ಥರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ, ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದ ದೊಡ್ಡ ಸಮಸ್ಯೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಅಸಹಾಯಕತೆ ವ್ಯಕ್ತಪಡಿಸಿದರು. ಅಂಗಡಿಗಳನ್ನು ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿದ್ದ ಕೆಲ ವರ್ತಕರು, ಪೊಲೀಸರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ಗ್ರಾಹಕರಿಗೆ ಪೊಲೀಸರು ಲಾಠಿ ಬೀಸಿದರು.