ನಾಪೊಕ್ಲು, ಜು. 19: ಪಾರಾಣೆ-ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಎರಡು ಸ್ಥಳಗಳು ಸೀಲ್‍ಡೌನ್ ಆಗಿದ್ದು ಜನಪ್ರತಿನಿಧಿಗಳ ಜೊತೆ ಗ್ರಾಮಸ್ಥರು ಕೈಜೋಡಿಸಿ ಕಾಲೋನಿ ಮಂದಿಗೆ ಆಹಾರ ಕಿಟ್ ವಿತರಿಸಿದರು.

ಪಾರಾಣೆ-ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದ್ದಂಡ ಕಾಲೋನಿಗೆ 33 ಆಹಾರದ ಕಿಟ್‍ಗಳನ್ನು ಹಾಗೂ ಕಿರುಂದಾಡು ಗ್ರಾಮದ ತಕ್ಕುಡಿಗೆ 10 ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸದಸ್ಯರುಗಳು ಗ್ರಾಮಸ್ಥರ ನೆರವಿನೊಂದಿಗೆ ಕಾಲೋನಿಯ 43 ಮಂದಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮಾತನಾಡಿ, ಎರಡು ಸ್ಥಳಗಳಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ವಾಸವಾಗಿದ್ದು, ಆಹಾರ ಇಲಾಖೆ ವತಿಯಿಂದ ಪಡಿತರ, ಧವಸಧಾನ್ಯ ವಿತರಿಸಲಾಗಿದೆ. ಗ್ರಾಮಸ್ಥರು ಉದಾರವಾಗಿ ಆಹಾರ ಕಿಟ್ ವಿತರಿಸಲು ಸಹಕರಿಸಿದ್ದಾರೆ ಎಂದರು. ಬಿದ್ದಂಡ ಕಾಲೋನಿಯ ಪ್ರಮುಖ ರವಿ ಮಾತನಾಡಿ, ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಅಪ್ಪನೆರವಂಡ ರಾಜಾ ಪೂವಯ್ಯ, ಗ್ರಾಮಸ್ಥರಾದ ಪಾಡೆಯಂಡ ಕಟ್ಟಿ ಕುಶಾಲಪ್ಪ, ಚೊಟ್ಟೆಯಂಡ ಕಾರ್ಸನ್, ಬಿದ್ದಂಡ ಪ್ರತಾ ಪೆಮ್ಮಯ್ಯ, ಬೊಳ್ಳಂಡ ಹರ್ಷ, ಚೊಟ್ಟೆಯಂಡ ಮಿಥುನ್, ವಿನಾಯಕ, ಅನಿಲ್, ಪೊಲೀಸ್ ಸಿಬ್ಬಂದಿಗಳಾದ ರವಿ, ಮಹೇಶ್, ಉಪಸ್ಥಿತರಿದ್ದರು.