*ಸಿದ್ದಾಪುರ, ಜು. 19: ಕಣ್ಣಿಗೆ ಕಾಣದ ಕೊರೊನಾ ಸೋಂಕಿನ ದಾಳಿಯಿಂದ ಬೆದರಿರುವ ಗಾಮೀಣ ಜನ ಸ್ವಯಂ ನಿಯಂತ್ರಣಕ್ಕೆ ಒಳಪಟ್ಟು ಲಾಕ್‍ಡೌನ್, ಸೀಲ್‍ಡೌನ್‍ನ ನಡುವೆ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದ್ಯಾವುದರ ಅರಿವಿಲ್ಲದ ಕಾಡಾನೆಗಳು ರಾಜಾರೋಷವಾಗಿ ನಾಡಿಗೆ ಲಗ್ಗೆ ಇಟ್ಟು ಕಣ್ಣೆದುರೇ ಆತಂಕವನ್ನು ಸೃಷ್ಟಿಸುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಗ್ರಾಮಸ್ಥರಿದ್ದಾರೆ.

ಕೊಡಗಿನ ಅರಣ್ಯ ಪ್ರದೇಶವನ್ನು ಸರ್ವೆಗೆ ಒಳಪಡಿಸಿದರೆ ಯಾವುದೇ ಕಾಡಾನೆಗಳು ಪತ್ತೆಯಾಗಲು ಸಾಧ್ಯವಿಲ್ಲ. ಕಾಡಿನ ಬದಲಿಗೆ ಆನೆಗಳೆಲ್ಲವೂ ನಾಡಿನ ತೋಟಗಳಲ್ಲಿ ಆಶ್ರಯ ಪಡೆದಿರುವುದು ಖಾತ್ರಿಯಾಗಲಿದೆ. ಈ ಜಟಿಲ ಪರಿಸ್ಥಿತಿಯನ್ನು ಅರಣ್ಯ ಇಲಾಖೆಯೇ ನಿಭಾಯಿಸಬೇಕಾಗಿದೆ. ಆದರೆ ವಾಲ್ನೂರು, ತ್ಯಾಗತ್ತೂರು, ಅಭ್ಯತ್‍ಮಂಗಲ, ನೆಲ್ಲಿಹುದಿಕೇರಿ, ಸಿದ್ದಾಪುರ ಸುತ್ತಮುತ್ತಲ ಭಾಗದ ಗ್ರಾಮಗಳನ್ನು ಕಾಡಾನೆಗಳಿಗಾಗಿಯೇ ಮೀಸಲಿಟ್ಟಂತೆ ಭಾಸವಾಗುತ್ತಿದೆ.

ಪ್ರತಿದಿನ ಸುಮಾರು 30-40 ಕಾಡಾನೆಗಳ ಹಿಂಡು ರಾಜಮಾರ್ಗದಲ್ಲೇ ಸಂಚರಿಸಿದರೂ, ಸಿಕ್ಕ ಸಿಕ್ಕ ತೋಟಗಳಲ್ಲೇ ಅಡ್ಡಾಡಿದರೂ ಏನೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಗ್ರಾಮಸ್ಥರು ಬಡವಾಗಿದ್ದಾರೆ. ಪ್ರಾಕೃತಿಕ ವಿಕೋಪ ಮತ್ತು ಹವಾಗುಣ ವೈಪರೀತ್ಯದ ನಡುವೆಯೂ ರೈತರು ಹಾಗೂ ಬೆಳೆಗಾರರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಭಾಗದ ಎಲ್ಲಾ ಗದ್ದೆ, ತೋಟಗಳಿಗೆ ಲಗ್ಗೆ ಇಟ್ಟಿರುವ ವನ್ಯಜೀವಿಗಳು ಸಾಕಷ್ಟು ಹಾನಿ ಉಂಟು ಮಾಡಿವೆ. ತೋಟಗಳನ್ನೇ ಆವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿರುವ ಆನೆಗಳು ಅರಣ್ಯದ ಕಡೆ ಮುಖ ಮಾಡುತ್ತಿಲ್ಲ. ಬೆಳೆ ನಾಶ ಮಾತ್ರವಲ್ಲದೆ ಮಾನವ ಜೀವಹಾನಿಯನ್ನು ಕೂಡ ಮಾಡಿವೆ.

ಆನೆ ದಾಳಿಗೆ ಸಿಲುಕಿ ಶಾಶ್ವತ ಅಂಗವೈಕಲ್ಯತೆಗೆ ಒಳಗಾದ ಅನೇಕ ಪ್ರಕರಣಗಳು ಕಣ್ಣಮುಂದೆಯೇ ಇದೆ. ಆದರೆ ಯಾರ ಬಗ್ಗೆಯೂ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಕರುಣೆಯೇ ಬರುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಟಾಚಾರಕ್ಕೆ ಸಸಿಗಳನ್ನು ನೆಡುವ ನರ್ಸರಿಗಳನ್ನು ನಿರ್ವಹಣೆ ಮಾಡುತ್ತಿರುವ ಅರಣ್ಯ ಇಲಾಖೆ ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಯಾವುದೇ ಪ್ರಯೋಜನಕ್ಕೆ ಬಾರದ ಸಸಿಗಳನ್ನು ಅಭಿವೃದ್ಧಿಪಡಿಸಿ ವನ್ಯಜೀವಿಗಳಿಗೆ ಆಹಾರದ ಕೊರತೆಯನ್ನು ಸೃಷ್ಟಿಸಲಾಗುತ್ತಿದೆ. ಅರಣ್ಯದಲ್ಲಿ ಆಹಾರ ಸಿಗದೆ ಇರುವುದರಿಂದಲೇ ಕಾಡಾನೆಗಳು ಹಿಂಡು ಹಿಂಡಾಗಿ ತೋಟಗಳಲ್ಲಿ ನೆಲೆ ನಿಲ್ಲಲು ಕಾರಣವೆಂದು ಬೆಳೆಗಾರರು ಅಭಿಪ್ರಾಯಪಡುತ್ತಾರೆ.

ಅರಣ್ಯ ಪ್ರದೇಶದಲ್ಲಿ ಹಲಸು ಸೇರಿದಂತೆ ವಿವಿಧ ಬಗೆಯ ಹಣ್ಣಿನ ಮರಗಳನ್ನು ಬೆಳೆಸುವ ಮೂಲಕ ವನ್ಯಜೀವಿಗಳಿಗೆ ಶಾಶ್ವತ ಆಹಾರವನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಅರಣ್ಯ ಇಲಾಖೆಯ ಮೂಲಕ ಸಾಕಾರಗೊಳಿಸಿದಾಗ ಮಾತ್ರ ಭವಿಷ್ಯದಲ್ಲಿ ಕೊಡಗಿನಲ್ಲಿ ರೈತರು ಹಾಗೂ ಬೆಳೆಗಾರರು ಉಳಿಯಲು ಸಾಧ್ಯ. ನಿರ್ಲಕ್ಷ್ಯ ವಹಿಸಿದರೆ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗಿ ಕೃಷಿಯನ್ನೇ ನಂಬಿರುವ ಕುಟುಂಬಗಳು ಜಿಲ್ಲೆಯನ್ನೇ ತೊರೆಯುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗಟ್ಟುವ ‘ಡ್ರಾಮಾ’ ಮಾಡುತ್ತಿದ್ದಾರೆಯೇ ಹೊರತು ಈ ಕಾರ್ಯಾಚರಣೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ತೋಟದಿಂದ ತೋಟಕ್ಕೆ ಆನೆ ಹಿಂಡಿನ ಸಂಚಾರವಾಗುತ್ತಿದ್ದು, ಅಧಿಕಾರಿಗಳು ನೈಪುಣ್ಯದಿಂದ ಯೋಜನೆ ರೂಪಿಸುತ್ತಿಲ್ಲ ಮತ್ತು ಕಾಡಿಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲವೆಂದು ಗ್ರಾಮಸ್ಥರು ಟೀಕಿಸಿದ್ದಾರೆ. - ಸುಧಿ