ಸೋಮವಾರಪೇಟೆ,ಜು.19: ‘ಶಕ್ತಿ’ ಪತ್ರಿಕೆಯ ವರದಿಗಾರರಾಗಿದ್ದ ದಿ. ಸಿ.ಎನ್. ಸುನಿಲ್ಕುಮಾರ್ ಅವರ ಪುತ್ರಿ, ಪ್ರಸ್ತುತ ಕೇರಳದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸುಶ್ಮಿನಿ, ಕೇರಳ ರಾಜ್ಯದ ಸರ್ಕಾರಿ ಶಾಲೆಯಲ್ಲಿ ಓದಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.100 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ತೋರಿದ್ದಾಳೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 660 ಅಂಕಗಳಿಗೆ 660 ಅಂಕಗಳನ್ನು ಪಡೆದು ಸಾಧನೆ ಮಾಡಿರುವ ಈಕೆ, ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯ ಸಾಂದೀಪನಿ ಶಾಲೆಯಲ್ಲಿ ಪ್ರಾರಂಭಿಸಿದ್ದು, 2ನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭ ತಂದೆ ಸುನಿಲ್ಕುಮಾರ್ ನಿಧನರಾದ ನಂತರ ಕೇರಳದ ಮಟ್ಟನೂರಿನ ತನ್ನ ತಾಯಿಯ ಮನೆಯಲ್ಲಿ ನೆಲೆಸಿ ಅಲ್ಲಿ ವಿದ್ಯಾಭ್ಯಾಸ ಮುಂದುವರಿಸಿದಳು.
ಕನ್ನಡ ಮಾಧ್ಯಮದಿಂದ ಮಲಯಾಳಂ ಮಾಧ್ಯಮಕ್ಕೆ ತೆರಳಿದ ಸುಶ್ಮಿನಿ, ಹತ್ತನೇ ತರಗತಿಯಲ್ಲಿ ಶೇ.98 ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಳು. ನಂತರ ಕಣ್ಣಾನೂರು ಜಿಲ್ಲೆಯ ಮಟ್ಟನೂರು ಸಮೀಪದ ಚಾವಶೇರಿಯ ಸರ್ಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳಲ್ಲಿ 120ಕ್ಕೆ 120 ಅಂಕ, ಗಣಿತಶಾಸ್ತ್ರ, ಪ್ರಥಮ ಮತ್ತು ದ್ವಿತೀಯ ಭಾಷೆಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾಳೆ.
ಐಎಎಸ್ ಮಾಡುವ ಗುರಿ: ಸತತ ಪರಿಶ್ರಮದಿಂದ ಸರ್ಕಾರಿ ಶಾಲೆಯಲ್ಲಿ ಓದಿ ಶೇ. 100 ಅಂಕಗಳನ್ನು ಪಡೆದಿದ್ದೇನೆ. ತಂದೆಯವರ ಆಶಯದಂತೆ ಪದವಿ ಪಡೆದ ನಂತರ ಐಎಎಸ್ ಮಾಡುವ ಇಚ್ಛೆ ಇದೆ. ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಬಂದ ನಂತರ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸಿಗೆ ಸೇರಿಕೊಳ್ಳುವೆ. ನನ್ನ ವಿದ್ಯಾ ಜೀವನಕ್ಕೆ ತಾಯಿ ಶೈಜ ಸುನಿಲ್ ಮತ್ತು ಕುಟುಂಬದವರ ಪ್ರೋತ್ಸಾಹ ಅಪಾರ. ಅಲ್ಲದೇ ನನ್ನ ವಿದ್ಯಾ ಸಾಧನೆಗೆ ಆರ್ಥಿಕ ನೆರವು ನೀಡಿ ಸತತವಾಗಿ ಪ್ರೋತ್ಸಾಹಿಸುತ್ತಿರುವ ಸೋಮವಾರಪೇಟೆ ತಾಲೂಕಿನ ಪತ್ರಕರ್ತರ ಸಹಾಯಕ್ಕೆ ಚಿರಋಣಿಯಾಗಿದ್ದೇನೆ ಎಂದು ಸುಶ್ಮಿತ ಅಭಿಪ್ರಾಯಿಸಿದ್ದಾಳೆ.