ಸುಂಟಿಕೊಪ್ಪ, ಜು. 19: ವರ್ಕ್‍ಶಾಪ್ ಯೂನಿಯನ್ ವತಿಯಿಂದ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಕ್‍ಶಾಪ್ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆಗಳಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ 40 ವರ್ಕ್‍ಶಾಪ್‍ಗಳಿಗೆ ಭಿತ್ತಿಪತ್ರ ವಿತರಿಸಿ ಮಾತನಾಡಿದ ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ಕೊರೊನಾ ಮಹಾಮಾರಿಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಇದನ್ನು ನಿಯಂತ್ರಿಸುವಂತೆ ವಾಹನ ಮಾಲೀಕರು, ಚಾಲಕರು ವರ್ಕ್‍ಶಾಪ್‍ಗಳಲ್ಲಿ ಸಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರೊಂದಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದರು. ಈ ಸಂದರ್ಭ ವರ್ಕ್‍ಶಾಪ್ ಮಾಲೀಕರ ಸಂಘದ ಕಾರ್ಯದರ್ಶಿ ಹೂವೇಗೌಡ, ಮಾಜಿ ಕಾರ್ಯದರ್ಶಿ ಪಿ.ಆರ್. ಸುನಿಲ್‍ಕುಮಾರ್, ಸಮಿತಿ ಸದಸ್ಯರುಗಳು ಇದ್ದರು.