ವೀರಾಜಪೇಟೆ, ಜು. 19: ಡಾ. ಬಿ.ಅರ್. ಅಂಬೇಡ್ಕರ್ ನಿವಾಸದ ಮೇಲೆ ಹಾನಿ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯ ಆವರಣದಲ್ಲಿ ಅಂಬೇಡ್ಕರ್ ಅವರ ಮುಂಬೈ ನಿವಾಸ ರಾಜಗೃಹದ ಮೇಲೆ ಹಾನಿ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿದರು. ಈ ಸಂದರ್ಭ ಮಾತನಾಡಿದ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ವಿ.ಕೆ. ಸತೀಶ್‍ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಎಸ್. ಮತೀನ್, ಮಾಜಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ್, ವಿಶ್ವನಾಥ್, ರಾಕೇಶ್, ಸಾಗರ್ ಮತ್ತು ಸಂಘಟನೆಯ ಸದಸ್ಯರು ಹಾಜರಿದ್ದರು.
ಜಿಲ್ಲಾ ಎನ್.ಎಸ್.ಯು.ಐ ಖಂಡನೆ
ಮಡಿಕೇರಿ: ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಂಬೈನ ವಾಸದ ಮನೆಯ ರಾಜಗೃಹವನ್ನು ತಾ. 7 ರಂದು ದುಷ್ಕರ್ಮಿಗಳು ಮನೆಗೆ ನುಗ್ಗಿ ಅಲ್ಲಿ ಇರುವಂತಹ ವಸ್ತುಗಳನ್ನು ಧ್ವಂಸ ಮಾಡಿ ಹಾನಿಗೊಳಿಸಿರುವ ಪ್ರಕರಣವನ್ನು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಜಿಲ್ಲಾ ಎನ್.ಎಸ್.ಯು.ಐ. ಖಂಡಿಸಿದೆ.
ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಸಿರಾಜ್ ಪರವಂಡ ಒತ್ತಾಯಿಸಿದ್ದಾರೆ.
ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ತ್ರಿನೇಶ್, ಎನ್.ಎಸ್.ಯು.ಐ. ಕರ್ನಾಟಕ ರಾಜ್ಯ ಕೌನ್ಸಿಲರ್ ಹಾಗೂ ಜಿಲ್ಲಾ ಸಂಚಾಲಕ ರಾಝಿಕ್ ಸುಂಟಿಕೊಪ್ಪ, ಜಿಲ್ಲಾ ಎನ್.ಎಸ್.ಯು.ಐ. ಉಪಾಧ್ಯಕ್ಷ ಹಾರಿಸ್ ಸುಂಟಿಕೊಪ್ಪ ಅವರುಗಳು ಘಟನೆಯನ್ನು ಖಂಡಿಸಿದ್ದಾರೆ.
ಯುವ ಕಾಂಗ್ರೆಸ್ ಖಂಡನೆ
ಡಾ. ಬಿ.ಆರ್. ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ. ದೇವಪ್ಪ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೂವಯ್ಯ ಖಂಡಿಸಿದ್ದಾರೆ.
ಈ ಕುರಿತು ಬಿಡುಗಡೆ ಮಾಡಿರುವ ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ. ದೇವಪ್ಪ, ಡಾ. ಅಂಬೇಡ್ಕರ್ ನಿವಾಸದ ಮೇಲೆ ದಾಳಿ ಅಕ್ಷಮೀಯ ಅಪರಾಧವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು. ಈ ಘಟನೆಯನ್ನು ಭಾರತೀಯರು ಸಹಿಸುವುದಿಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೂವಯ್ಯ ತಿಳಿಸಿದ್ದಾರೆ.
ಕಿಡಿಗೇಡಿಗಳನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ. ದೇವಪ್ಪ ಹಾಗೂ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೂವಯ್ಯ ಒತ್ತಾಯ ಮಾಡಿದ್ದಾರೆ.