ವೀರಾಜಪೇಟೆ, ಜು. 17: ಕೋವಿಡ್-19 ಸಮಯದಲ್ಲಿ ರಾಜ್ಯ ಸರಕಾರದ ನಿರ್ದೇಶನದಂತೆ ಕೆಲಸ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಸಿ.ಐ.ಟಿ.ಯು. ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಕೋವಿಡ್-19ರ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ನೌಕರಿ ಸುರಕ್ಷತೆಯನ್ನು ಒದಗಿಸಬೇಕು. ಸರಕಾರದ ಇತರ ಇಲಾಖೆಗಳ ನೌಕರರಿಗೆ ಇರುವ 50 ಲಕ್ಷ ರೂ.ಗಳ ವಿಮಾ ಸೌಲಭ್ಯ ಅಂಗನವಾಡಿ ಕಾರ್ಯಕರ್ತೆಯರಿಗೂ ದೊರೆಯುವಂತಾಗಬೇಕು.

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಸಕ್ತವಿರುವ ನಿವೃತ್ತಿ ವೇತನ ಪದ್ಧತಿಯಲ್ಲಿ ತಿದ್ದುಪಡಿ ತರಬೇಕು. ಈಗಾಗಲೇ ನಿವೃತ್ತಿ ಹೊಂದಿದ ಕಾರ್ಯಕರ್ತೆಯರಿಗೆ ವೇತನ-ಇಡಿಗಂಟನ್ನು ಕೂಡಲೇ ಇತ್ಯರ್ಥಪಡಿಸಿಕೊಡಬೇಕು. ಜೀವವಿಮಾ ನಿಗಮದ ಮುಖಾಂತರ ನಿವೃತ್ತಿ ವೇತನ ವಿಧಾನವನ್ನು ಅಳವಡಿಸಬೇಕು. ಮುಂತಾದ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಕಾರ್ಯಕರ್ತೆಯರು ತಹಶೀಲ್ದಾರ್ ನಂದೀಶ್‍ರವರ ಮೂಲಕ ಸರಕಾರಕ್ಕೆ ಸಲ್ಲಿಸಿದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ ವಿ.ಎಸ್. ಸುಮಿತ್ರಾ, ಕಾರ್ಯದರ್ಶಿ ನಳಿನಾಕ್ಷಿ ವಿ.ಸಿ., ಸದಸ್ಯರುಗಳಾದ ಚೇಂದೀರ ಕಾವೇರಮ್ಮ, ಚೋಂದಮ್ಮ, ಪುಷ್ಪ, ರಮ್ಯಾ ಹಾಗೂ ಎ.ಬಿ. ಕಾವೇರಮ್ಮ ಹಾಜರಿದ್ದರು.