ಮಡಿಕೇರಿ, ಜು. 17: ವೀರಾಜಪೇಟೆ ವಲಯ ಕಚೇರಿಯ ಅಬಕಾರಿ ನಿರೀಕ್ಷಕರ ಸುಪರ್ದಿಯಲ್ಲಿರುವ ಅಬಕಾರಿ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಹಾಗೂ ನವೀಕರಣಗೊಳ್ಳದೇ ಇರುವ ಸನ್ನದಿನಲ್ಲಿದ್ದ ಮದ್ಯವನ್ನು ಇಲಾಖಾ ವಶಕ್ಕೆ ಪಡೆಯಲಾಗಿತ್ತು. ಈ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ನಾಶಪಡಿಸಲು ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ ಅವರು ಆದೇಶ ಹೊರಡಿಸಿದ್ದಾರೆ.
ಇದರಂತೆ ಸ್ವದೇಶಿ ಮದ್ಯ 740.160 ಲೀಟರ್, ಬಿಯರ್ 32.150 ಲೀಟರ್, ಕಳ್ಳಭಟ್ಟಿ ಸಾರಾಯಿ 25.570 ಲೀಟರ್, ಲ್ಯಾಬ್ 41 ಲೀಟರ್ ಹಾಗೂ ವೈನ್ 8.250 ಲೀಟರ್ ಈ ಸ್ವತ್ತುಗಳನ್ನು ತಾ. 15 ರಂದು ವೀರಾಜಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು, ಕಂದಾಯ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಹಾಗೂ ಕೆ.ಎಸ್.ಬಿ.ಸಿ.ಎಲ್.ನ ಮ್ಯಾನೇಜರ್ ಹಾಗೂ ಅಬಕಾರಿ ನಿರೀಕ್ಷಕರಾದ ಭಾಗ್ಯ, ವೀರಾಜಪೇಟೆ ವಲಯ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ಬಿ.ಎಸ್. ಮೋಹನ್ ಕುಮಾರ್ ಹಾಗೂ ಸಿಬ್ಬಂದಿಯವರ ಸಮಕ್ಷಮದಲ್ಲಿ ನಾಶಪಡಿಸಲಾಯಿತು.
ಮದ್ಯ ಹಾಗೂ ಬಿಯರ್‍ನ ಈಗಿನ ಅಂದಾಜು ಮೊತ್ತ ಸುಮಾರು 4.5 ಲಕ್ಷ ಎಂದು ವೀರಾಜಪೇಟೆ ವಲಯ ಅಬಕಾರಿ ನಿರೀಕ್ಷಕರು ತಿಳಿಸಿದ್ದಾರೆ.