ಭಾಗಮಂಡಲ, ಜು. 17: ಎಲ್‍ಕೆಜಿಯಿಂದ 10ನೇ ತರಗತಿಯವರೆಗೆ ಆನ್‍ಲೈನ್ ಶಿಕ್ಷಣ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೆ, ಇತ್ತ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಆನ್‍ಲೈನ್ ಶಿಕ್ಷಣಕ್ಕೆ ಅನುಮತಿ ನೀಡಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ಪ್ರಯೋಜನಕಾರಿಯಲ್ಲ ಎಂಬ ಅಂಶ ಹಲವು ಪೋಷಕರಿಂದ ವ್ಯಕ್ತವಾಗುತ್ತಿದೆ.
ಆನ್‍ಲೈನ್ ಶಿಕ್ಷಣಕ್ಕಾಗಿ ಅತ್ಯಗತ್ಯವಾಗಿರುವುದು ಸ್ಮಾರ್ಟ್ ಮೊಬೈಲ್ ಫೋನ್ ಗ್ರಾಮೀಣ ಪ್ರದೇಶದ ಹಲವರ ಬಳಿ ಅಂತಹ ಫೋನ್‍ಗಳಿಲ್ಲ. ವಿದ್ಯಾರ್ಥಿಗಳು ಪೋಷಕರ ಫೋನ್‍ಗಳನ್ನು ಅವಲಂಬಿಸಬೇಕು. ಪೋಷಕರು ಕೆಲಸಕ್ಕೆಂದು ತೆರಳುವಾಗ ಫೋನ್ ಕೊಂಡೊಯ್ದರೆ ಮಕ್ಕಳ ಆನ್‍ಲೈನ್ ಕಲಿಕೆ ಹೇಗೆ ಸಾಧ್ಯ? ಇನ್ನು ನೆಟ್‍ವರ್ಕ್ ಸಮಸ್ಯೆಯಂತೂ ಬಳಕೆದಾರರನ್ನು ಹೈರಾಣಾಗಿಸುತ್ತಿದೆ. ಈಗಾಗಲೇ ನೆಟ್‍ವರ್ಕ್ ಅವಲಂಬಿತರು ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳ ಪಾಡೇನು? ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತ್ತಿರುತ್ತದೆ. ಟವರ್‍ಗಳು ವಿದ್ಯುತ್ ಇಲ್ಲದೆ ಕಾರ್ಯನಿರ್ವಹಿಸುವುದಿಲ್ಲ. ಬಹುತೇಕ ಕಡೆಗಳಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ಇಂಧನ ಪೂರೈಕೆ ಇಲ್ಲದೆ ನೆಟ್‍ವರ್ಕ್ ಇರುವುದಿಲ್ಲ. ಹೀಗಾಗಿ ಆನ್‍ಲೈನ್ ಶಿಕ್ಷಣ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯೇ ಸರಿ.
ಶಿಕ್ಷಕವೃಂದವೂ ಆನ್‍ಲೈನ್ ಪಠ್ಯ ಬೋಧಿಸಲು ಸಜ್ಜುಗೊಳ್ಳಬೇಕಾಗಿದೆ. ಕೇವಲ ವಿಷಯಗಳನ್ನು ಎಲ್ಲೆಲ್ಲಿಂದಲೋ ಸಂಗ್ರಹಿಸಿ ಫಾರ್ವರ್ಡ್ ಮಾಡುವುದರಿಂದ ಉದ್ದೇಶ ಈಡೇರುವುದಿಲ್ಲ ಎನ್ನುತ್ತಾರೆ ಅನುಭವಿ ಶಿಕ್ಷಕರು. ಒಟ್ಟಿನಲ್ಲಿ ಕೊರೊನಾ ಸೃಷ್ಟಿಸಿರುವ ತಲ್ಲಣದ ಈ ದಿನಗಳಲ್ಲಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಹೇರುವುದು ಸೂಕ್ತವಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಮಸ್ಯೆಯ ಸುಳಿಗೆ ಸಿಲುಕಿದಂತಾಗುತ್ತದೆ. ಪ್ರಜ್ಞಾವಂತರು ಈ ಬಗ್ಗೆ ಯೋಚಿಸುವುದು ಅಗತ್ಯ.