ವೀರಾಜಪೇಟೆ, ಜು. 15: ಮಹಾರಾಷ್ಟ್ರದ ಮುಂಬೈನ ದಾದರ್‍ನಲ್ಲಿರುವ ಡಾ. ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ಇಬ್ಬರು ಕಿಡಿಗೇಡಿಗಳು ದಾಳಿ ಮಾಡಿ ಮನೆ ಧ್ವಂಸ ಮಾಡಿರುವುದರಿಂದ ತಕ್ಷಣ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಡಿ.ಎಸ್.ಎಸ್. ಸಂಚಾಲಕ ವಿ.ಆರ್. ರಜನಿಕಾಂತ್ ನೇತೃತ್ವದಲ್ಲಿ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಡಾ. ಅಂಬೇಡ್ಕರ್ ಅವರು ರೂಪಿಸಿದ ನಮ್ಮ ದೇಶದ ಸಂವಿಧಾನವು ಪ್ರಪಂಚದಲ್ಲಿ ಶ್ರೇಷ್ಠ ಸಂವಿಧಾನವಾಗಿದೆ. ಆ ರೀತಿ ಸಂವಿಧಾನ ಬರೆದ ಮಹಾನ್ ವ್ಯಕ್ತಿಯ ನಿವಾಸಕ್ಕೆ ಸೂಕ್ತ ರಕ್ಷಣೆ ಇಲ್ಲದಾಗಿರುವುದು ವಿಪರ್ಯಾಸ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಡಿ.ಎಸ್.ಎಸ್. ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸತೀಶ್, ಸಮಿತಿ ಸದಸ್ಯರಾದ ಕೃಷ್ಣ, ಲೋಕೇಶ್, ಪರಶುರಾಮ, ಮಲ್ಲಿಕಾರ್ಜುನಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಮಹ್ಮದ್ ರಾಫಿ, ರಾಜೇಶ್ ಹಾಗೂ ಆಗಸ್ಟಿನ್ ಬೆನ್ನಿ ಮತ್ತಿತರರು ಹಾಜರಿದ್ದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಅಸಮಾಧಾನ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಿವಾಸ ಧ್ವಂಸ ಮಾಡಿರುವ ಕಿಡಿಗೇಡಿಗಳ ಕೃತ್ಯವನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟವು ಬಲವಾಗಿ ಖಂಡಿಸುತ್ತದೆ.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮತ್ತು ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿ.ಕೆ. ಸತೀಶ್‍ಕುಮಾರ್ ಮಾತನಾಡಿ, ಸಂವಿಧಾನವನ್ನು ರಚನೆ ಮಾಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿವಾಸವನ್ನು ಧ್ವಂಸ ಮಾಡಿರುವುದು ಖಂಡನೀಯ. ರಾಜ್ಯ ಮತ್ತು ಕೇಂದ್ರ ಸರಕಾರಗಳು ನಾಯಕರ ಮನೆಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಅಲ್ಲದೆ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.ಜೆಡಿಎಸ್ ಜಿಲ್ಲಾ ಘಟಕದಿಂದ ಖಂಡನೆ
ಆಲೂರು-ಸಿದ್ದಾಪುರ/ಮುಳ್ಳೂರು: ಮುಂಬಯಿಯಲ್ಲಿ ಅಂಬೇಡ್ಕರ್ ನಿವಾಸ ರಾಜಗೃಹದ ಮೇಲೆ ಕಿಡಿಗೇಡಿಗಳಿಂದ ಧ್ವಂಸ ಪ್ರಕರಣವನ್ನು ಜೆಡಿಎಸ್ ಪಕ್ಷದ ಕೊಡಗು ಜಿಲ್ಲಾ ಘಟಕ ಖಂಡಿಸಿದ್ದು ಕೇಂದ್ರ ಸರಕಾರ ಧ್ವಂಸ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದೆ.
ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಆದಿಲ್‍ಪಾಷ, ವಿಶ್ವ ನಾಯಕರಾದ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಂಬಯಿಯಲ್ಲಿರುವ ವಾಸದ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿರುವ ಪ್ರಕರಣ ಅತ್ಯಂತ ಖಂಡನೀಯ. ವಿಶ್ವವೇ ಹೆಮ್ಮೆಪಡುತ್ತಿರುವ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ವಾಸವಾಗಿದ್ದ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿರುವ ಪ್ರಕರಣ ಸಂವಿಧಾನಕ್ಕೆ ಮಾಡಿದಷ್ಟೆ ಅವಮಾನವಾಗುತ್ತದೆ ಎಂದರು.
ಮಾಜಿ ಜಿ.ಪಂ. ಅಧ್ಯಕ್ಷೆ ಜೆಡಿಎಸ್ ಜಿಲ್ಲಾ ಘಕದ ಸದಸ್ಯೆ ಹೆಚ್.ಬಿ. ಜಯಮ್ಮ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಮೇಲೆ ಅವಮಾನವಾಗುತ್ತಿರುವುದು ಹಾಗೂ ಸಂವಿಧಾನದ ಮೇಲೆ ಅವಮಾನವಾಗುತ್ತಿರುವ ಪ್ರಕರಣದಿಂದ ದೇಶವೆ ತಲೆ ತಗ್ಗಿಸುವಂತಾಗುತ್ತಿದೆ. ಸರಕಾರ ಇಂತಹ ಪ್ರಕರಣ ನಡೆಯುವ ಸಂದರ್ಭದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕೆಂದರು.
ಕೇಂದ್ರ ಸರಕಾರ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಈ ಬಗ್ಗೆ ಜೆಡಿಎಸ್ ಪಕ್ಷ ಹೋರಾಟಕ್ಕೆ ಸಿದ್ಧವಿದೆ ಎಂದರು. ಜೆಡಿಎಸ್ ಜಿಲ್ಲಾ ಘಟಕದ ಮುಖಂಡ ಎಂ.ಎನ್. ರಾಜಪ್ಪ ಮಾತನಾಡಿದರು. ಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಮುಖಂಡ ಅಬ್ದುಲ್ ಶುಕುರ್, ಜೆಡಿಎಸ್ ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿ ಹೇಮಾವತಿ ಹಾಜರಿದ್ದರು.