ಸೋಮವಾರಪೇಟೆ,ಜು.13: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆ ವಾರದ ಸಂತೆಯನ್ನು ರದ್ದುಗೊಳಿಸಿ ದ್ದರೂ ಸಹ, ಪಟ್ಟಣದ ರಸ್ತೆ ಬದಿಗಳಲ್ಲಿ ಸಂತೆಯನ್ನೂ ಮೀರಿಸುವಂತೆ ವ್ಯಾಪಾರ ವಹಿವಾಟು ನಡೆಯಿತು.

ಸೋಮವಾರದ ಸಂತೆಯನ್ನು ರದ್ದುಗೊಳಿಸಿ ಇಲ್ಲಿನ ಪ.ಪಂ. ಹೈಟೆಕ್ ಮಾರುಕಟ್ಟೆಗೆ ದಿಗ್ಬಂಧನ ವಿಧಿಸಿದ್ದರಿಂದ ರಸ್ತೆ ಬದಿಯಲ್ಲೇ ದಿನಸಿ, ತರಕಾರಿ ವ್ಯಾಪಾರ ನಡೆಯಿತು. ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಸಾರ್ವಜನಿಕರು ರಸ್ತೆ ಬದಿಯಲ್ಲಿಯೇ ದಿನಸಿ, ತರಕಾರಿ, ಮೀನು ಮಾಂಸ ಖರೀದಿಸಿದರು.

ಕೊರೊನಾ ಹರಡುವ ಭೀತಿಯಿದ್ದರೂ ಸಹ ಪಟ್ಟಣದಲ್ಲಿ ಸಾಮಾಜಿಕ ಅಂತರ ಮರೆತು ಸಾರ್ವಜನಿಕರು ಓಡಾಟ ನಡೆಸಿದರು. ಬೆರಳೆಣಿಕೆಯಷ್ಟಿದ್ದ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು, ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿ ಸುಸ್ತಾದರು. ಇದರೊಂದಿಗೆ ಸಂತೆ ಸೇರದಂತೆ ತಡೆಯಲು ಪ.ಪಂ. ಸಿಬ್ಬಂದಿಗಳು ಹರಸಾಹಸ ನಡೆಸಿದರು.

ನಿಯಂತ್ರಿತ ವಲಯದಲ್ಲಿ ಏರಿಕೆ: ಸೋಮವಾರಪೇಟೆ ಪಟ್ಟಣ ಸಮೀಪದ ಕರ್ಕಳ್ಳಿ ಬಳಗುಂದ ಗ್ರಾಮವನ್ನು ಕಂಟೈನ್‍ಮೆಂಟ್ ವಲಯದಿಂದ ವಿಮುಕ್ತಿಗೊಳಿಸಿದ ಬೆನ್ನಲ್ಲೇ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ನಿಯಂತ್ರಿತ ವಲಯಗಳನ್ನು ಘೋಷಿಸಲಾಗುತ್ತಿದೆ.

ಕೊರೊನಾ ಪಾಸಿಟಿವ್ ಕಂಡುಬಂದ ಹಳ್ಳದಿಣ್ಣೆ ಗ್ರಾಮವನ್ನು ಈಗಾಗಲೇ ಸೀಲ್‍ಡೌನ್ ಮಾಡಿದ್ದು, ಇಂದು ಕಕ್ಕೆಹೊಳೆಯಿಂದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಕಚೇರಿವರೆಗೆ ಸೀಲ್‍ಡೌನ್ ಮಾಡಲಾಗಿದೆ. ನ್ಯಾಯಾಲಯದ ಸಿಬ್ಬಂದಿಯೋರ್ವರಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆ, ಮಹಿಳೆ ವಾಸವಿದ್ದ ಪಿ.ಜಿ.ಯನ್ನು ಸೀಲ್‍ಡೌನ್ ಮಾಡಿ, ಪಿ.ಜಿ.ಯ ಮಾಲೀಕರೂ ಸೇರಿದಂತೆ 8 ಮಂದಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.

ಇದರೊಂದಿಗೆ ತಲ್ತರೆಶೆಟ್ಟಳ್ಳಿ, ಬಳಗುಂದ, ಅಬ್ಬೂರುಕಟ್ಟೆಯ ನೇರಳೆ, ಬೇಳೂರು ರಸ್ತೆಯ ಹೊಸಬಡಾವಣೆ, ಕಾರೇಕೊಪ್ಪ ವ್ಯಾಪ್ತಿಯಲ್ಲೂ ಕಂಟೈನ್‍ಮೆಂಟ್ ವಲಯ ವಿಧಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಂದಿಗೆ ಹೋಂ ಕ್ವಾರೆಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಂದಿಯ ಆರೋಗ್ಯ ತಪಾಸಣೆಗೆ ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗದೇ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ತಪ್ಪದೇ ಮಾಸ್ಕ್ ಧರಿಸಬೇಕೆಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.

ಬ್ಯಾಂಕ್ ಸೀಲ್‍ಡೌನ್: ಪಟ್ಟಣದ ಬ್ಯಾಂಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈರ್ವರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆ ಬ್ಯಾಂಕ್‍ನ್ನು ಸೀಲ್‍ಡೌನ್ ಮಾಡಲಾಗಿದ್ದು, ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ.

ತಾಲೂಕು ಆಡಳಿತದ ಸಿಬ್ಬಂದಿಗಳು, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿದ್ದು, ಮುಂದಿನ 7 ದಿನಗಳ ಕಾಲ ಬ್ಯಾಂಕ್‍ನ ಎಲ್ಲಾ ಸಿಬ್ಬಂದಿಗಳಿಗೂ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಇದರೊಂದಿಗೆ ಪಟ್ಟಣ ವ್ಯಾಪ್ತಿಯಲ್ಲಿ ಇಂದು ಪ.ಪಂ. ವತಿಯಿಂದ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಸಾರ್ವಜನಿಕರು ಪಟ್ಟಣದಲ್ಲಿ ಓಡಾಡುವ ಸಂದರ್ಭ ಅಗತ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.

-ವಿಜಯ್