ಗೋಣಿಕೊಪ್ಪಲು,ಜು.13: ಆ ಗ್ರಾಮದಲ್ಲಿ 300ಕ್ಕೂ ಅಧಿಕ ಮನೆಗಳಿದ್ದು, ಸಾವಿರಾರು ಮಂದಿ ವಾಸಿಸುತ್ತಿದ್ದಾರೆ. ವಾಣಿಜ್ಯ ನಗರ ಗೋಣಿಕೊಪ್ಪದಿಂದ ಅನತಿ ದೂರದಲ್ಲಿರುವ ಈ ನಗರವು ಅರುವತೊಕ್ಲು ಪಂಚಾಯ್ತಿ ವ್ಯಾಪ್ತಿಗೆ ಸೇರಿದ್ದು ಈ ನಗರಕ್ಕೆ ಮೈಸೂರಮ್ಮ ನಗರ ಎಂದು ನಾಮಕರಣ ಮಾಡಲಾಗಿದೆ. ವಿವಿಧ ಧರ್ಮ ಜನಾಂಗದವರು ವಾಸಿಸುವ ಈ ಗ್ರಾಮದಲ್ಲಿ ಪ್ರತಿಯೊಬ್ಬ ನಾಗರಿಕನು ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಾ ನೆಮ್ಮದಿ ಕಂಡುಕೊಂಡಿದ್ದಾರೆ.

ಈ ಭಾಗದ ಜನರಿಗೆ ಯಾವುದೇ ಸಮಸ್ಯೆ ಎದುರಾದಾಗ ಒಟ್ಟಾಗಿ ಸೇರಿ ಇವರ ಕಷ್ಟ ಸುಖಗಳಲ್ಲಿ ಪಾಲ್ಗೊಳ್ಳುವುದು ಈ ಗ್ರಾಮದ ಜನತೆಯ ವಿಶೇಷ. ರಾಷ್ಟ್ರೀಯ ಹಬ್ಬಗಳು ಸೇರಿದಂತೆ ವಿವಿಧ ಧರ್ಮದ ಹಬ್ಬಗಳನ್ನು ಒಟ್ಟಾಗಿ ಆಚರಿಸಿ ಕೋಮು ಸೌಹಾದರ್Àತೆಗೆ ಸಾಕ್ಷಿಯಾಗಿದ್ದಾರೆ. ನೂರಾರು ಯುವಕರು ಈ ಗ್ರಾಮದಲ್ಲಿ ನೆಲೆಸಿದ್ದು ಯಾವುದೇ ಸಮಸ್ಯೆಗಳು ಎದುರಾದಾಗ ಗ್ರಾಮದ ಹಿರಿಯರ ಸಲಹೆ ಪಡೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.

ಈ ಯುವಕರೆಲ್ಲರೂ ಸೇರಿ ಹಲವು ವರ್ಷಗಳ ಹಿಂದೆಯೇ ಗ್ರಾಮದ ಅಭಿವೃದ್ಧಿಗಾಗಿ ಅನುಗ್ರಹ ಯುವಕ ಸಂಘ ಎಂಬ ಸಂಘವನ್ನು ಹುಟ್ಟು ಹಾಕಿಕೊಂಡು ಸಂಘದ ಮೂಲಕ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಯುವಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಗ್ರಾಮದ ಹಿರಿಯರು ಸಾಥ್ ನೀಡುತ್ತಿದ್ದರು. ಇದೀಗ ಈ ಸಂಘ ಪ್ರಾರಂಭಗೊಂಡು 20 ವರ್ಷಗಳು ಕಳೆದಿವೆ.

ಇದೀಗ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಈ ಅನುಗ್ರಹ ಯುವಕರು ಒಟ್ಟಾಗಿ ಸೇರಿ ಗ್ರಾಮಕ್ಕೆ ಬರುವ ಜನರನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಿ, ಸ್ಯಾನಿಟೈಸರ್ ಸಿಂಪಡಿಸಿ, ಇವರ ಮಾಹಿತಿಗಳನ್ನು ನೋಂದಾಯಿಸಿ ಕೊಂಡು ನಂತರ ಗ್ರಾಮಕ್ಕೆ ಪ್ರವೇಶ ನೀಡುತ್ತಿದ್ದಾರೆ. ಅಲ್ಲದೆ ಪ್ರತಿ ಮನೆಗಳಿಗೆ ತೆರಳಿ ಮನೆಯಲ್ಲಿರುವ ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಮನೆಯವರೆಲ್ಲರಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಿ ಜಾಗೃತಿ ಮೂಡಿಸುತ್ತಿದ್ದಾರೆ.

ಗ್ರಾಮದ ಹೆಬ್ಬಾಗಿಲಿನಲ್ಲಿ ಪ್ರತಿನಿತ್ಯ ಯುವಕರು ತಂಡಗಳನ್ನು ರಚಿಸಿಕೊಂಡು ಮುಂಜಾನೆಯಿಂದ ಸಂಜೆಯವರೆಗೂ ಗ್ರಾಮಕ್ಕೆ ಬರುವ ಗ್ರಾಮಸ್ಥರನ್ನು ತಪಾಸಣೆಗೊಳಪಡಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಥರ್ಮಲ್ ಸ್ಕ್ಯಾನಿಂಗ್‍ನಲ್ಲಿ ಹೆಚ್ಚಾಗಿ ಉಷ್ಣಾಂಶ ಕಂಡುಬಂದಲ್ಲಿ ಅಂತಹವರನ್ನು ಧೈರ್ಯ ತುಂಬಿ ಆಸ್ಪತ್ರೆಗೆ ಕಳುಹಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಯುವಕರು ಮಾಡುತ್ತಿರುವ ಉತ್ತಮ ಕೆಲಸಕ್ಕೆ ಗ್ರಾಮದ ಹಿರಿಯರು ತಾವಾಗಿಯೇ ಮುಂದೆ ಬಂದು ಥರ್ಮಲ್ ಸ್ಕ್ಯಾನಿಂಗ್,ಸ್ಯಾನಿಟೈಸರ್,ಮಾಸ್ಕ್‍ಗಳನ್ನು ಉಚಿತವಾಗಿ ನೀಡಿದ್ದಾರೆ. ಯುವಕರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಕೊರೊನಾ ಮಹಾಮಾರಿಯನ್ನು ಹತೋಟಿಗೆ ತರಲು ಮೊದಲ ಬಾರಿಗೆ ಮೈಸೂರಮ್ಮ ನಗರದ ಅನುಗ್ರಹ ಯುವಕರು ಇಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಗ್ರಾಮದ ಜನತೆಗೆ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವ ಮೂಲಕ ಇಲಾಖೆ ಮಾಡಬೇಕಾದ ಕರ್ತವ್ಯವನ್ನು ತಾವೇ ಮಾಡುತ್ತಿದ್ದಾರೆ.

-ಹೆಚ್.ಕೆ.ಜಗದೀಶ್