ಕುಶಾಲನಗರ, ಜು. 13: ಕೊಡಗು-ಮೈಸೂರು ಗಡಿಭಾಗದ ಕುಶಾಲನಗರ ಸಮೀಪ ಕೊಪ್ಪ ಬಳಿ ಬ್ರಿಟೀಷರ ಕಾಲದಲ್ಲಿ ಕಾವೇರಿ ನದಿಗೆ ನಿರ್ಮಾಣಗೊಂಡಿರುವ ಐತಿಹಾಸಿಕ ‘ಫ್ರೆಸರ್‍ಪೇಟೆ ಸೇತುವೆ’ ನಿರ್ವಹಣೆಯ ಕೊರತೆಯಿಂದ ಅಪಾಯದ ಅಂಚಿಗೆ ತಳ್ಳಲ್ಪಟ್ಟಿದೆ. 1846 ರಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಪಕ್ಕದಲ್ಲಿ ಕಳೆದ 20 ವರ್ಷಗಳ ಹಿಂದೆ ಪರ್ಯಾಯವಾಗಿ ನೂತನ ಸೇತುವೆ ನಿರ್ಮಾಣ ಗೊಂಡಿದ್ದು ಹಳೆಯ ಸೇತುವೆ ಕಾಲುದಾರಿಯಾಗಿ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆದರೆ ಬಹಳ ಸುಂದರ ವಿಶಿಷ್ಠ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯ ಬಗ್ಗೆ ಸಂಬಂಧಿಸಿದ ಇಲಾಖೆಗಳು ತಲೆಕೆಡಿಸಿಕೊಳ್ಳದ ಕಾರಣ ಶಿಥಿಲಗೊಳ್ಳುತ್ತಿರುವ ದೃಶ್ಯ ಗೋಚರಿಸಿದೆ.
ಈ ಸೇತುವೆಯಲ್ಲಿರುವ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿರುವ ಫಲಕ ತನ್ನ ಇತಿಹಾಸವನ್ನು ದಾರಿಹೋಕರಿಗೆ ನೆನಪಿಸುತ್ತಿದೆ. ಸತತ 174 ವರ್ಷಗಳ ಕಾಲ ನದಿಯಲ್ಲಿ ಹರಿದ ನೀರು, ಪ್ರವಾಹ, ಬಿಸಿಲು, ಮಳೆಗೆ ಮೈಯೊಡ್ಡಿ ನಿಂತಿರುವ ಈ ಪುರಾತನ ಸೇತುವೆಯನ್ನು ನೂತನ ಸೇತುವೆ ನಿರ್ಮಾಣ ಸಂದರ್ಭ ಸ್ಥಳೀಯರ ಮನವಿ ಮೇರೆಗೆ ಕೆಡವದೆ ಉಳಿಸಿಕೊಂಡಿರುವುದನ್ನು ಸ್ಮರಿಸಬಹುದು. ಒಂದಿಷ್ಟೂ ಪ್ರಮಾಣದ ಸಿಮೆಂಟ್ ಬಳಸದೆ ಗಾರೆ, ಮೊಟ್ಟೆಯ ಅಂಶಗಳನ್ನು ಬಳಸಿ ಇಟ್ಟಿಗೆಯೊಂದಿಗೆ ನಿರ್ಮಿಸಿರುವ ಈ ಸೇತುವೆಯನ್ನು ಸಂರಕ್ಷಿಸಬೇಕಾಗಿದೆ.
- ಚಂದ್ರಮೋಹನ್