ವೀರಾಜಪೇಟೆ, ಜು. 13 : ಕೋವಿಡ್-19 ಸೋಂಕು ಜಿಲ್ಲೆಯಾದ್ಯಾಂತ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ವೀರಾಜಪೇಟೆ ಪೊಲೀಸ್ ಠಾಣೆಗಳ ಸಮುಚ್ಚಯ ದಲ್ಲಿ ಸಹಾಯ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಠಾಣೆಗಳ ಆವರಣ ದಲ್ಲಿ ನಗರ ಆರಕ್ಷಕ ಠಾಣೆ, ಗ್ರಾಮಾಂತರ ಆರಕ್ಷಕ ಠಾಣೆ, ವೀರಾಜಪೇಟೆ ವೃತ್ತ ನಿರೀಕ್ಷಕರ ಕಚೇರಿ, ವೀರಾಜಪೇಟೆ ಉಪ ವಿಭಾಗ ಆರಕ್ಷಕ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದೆ. ದಿನನಿತ್ಯ ಕಚೇರಿಗೆ ಹಾಗೂ ದೂರು ನೀಡಲು ಸಾರ್ವಜನಿಕರು ಠಾಣೆಗಳಿಗೆ ಭೇಟಿ ನೀಡುತ್ತಾರೆ. ಕಚೇರಿ ಮತ್ತು ಠಾಣೆಗಳಲ್ಲಿ ಸುಮಾರು 100ಕ್ಕಿಂತ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವ ಹಿಸುತ್ತಿದ್ದಾರೆ. ಠಾಣಾ ಕಚೇರಿಗಳಿಗೆ ಪ್ರವೇಶ ಮಾಡುವ ಮತ್ತು ಪೊಲೀಸ್ ಸಿಬ್ಬಂದಿಗಳ ವಸತಿಗೃಹಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸಹಾಯ ಕೇಂದ್ರದಲ್ಲಿ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜರ್ ನಂತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಸಾರ್ವಜನಿಕರು ಸಹಾಯ ಕೇಂದ್ರಕ್ಕೆ ಮೊದಲು ಭೇಟಿ ನೀಡಿ ಮಾಹಿತಿ ನೀಡಬೇಕಾಗಿದೆ. ದೂರುಗಳನ್ನು ಕೇಂದ್ರದಲ್ಲೇ ಪಡೆದು ನಂತರದಲ್ಲಿ ವಿಂಗಡಿಸಿ ಆಯಾ ಠಾಣೆಗಳಿಗೆ ನೀಡಲಾಗುತ್ತದೆ. ಠಾಣೆಗಳಿಗೆ ದೂರು ನೀಡುವ ಒಬ್ಬ ವ್ಯಕ್ತಿಗೆ ಮಾತ್ರ ಠಾಣೆಗೆ ಪ್ರವೇಶ ಕಲ್ಪಿಸಲಾಗಿದೆ. ಡಿ.ವೈ.ಎಸ್ಪಿ ಜಯಕುಮಾರ್ ಮತ್ತು ವೃತ್ತ ನಿರೀಕ್ಷಕ ರಾದ ಕ್ಯಾತೆಗೌಡ ನಿರ್ದೇಶನದ ಮೇರೆಗೆ ತಾತ್ಕಾಲಿಕ ಕೇಂದ್ರವನ್ನು ತೆರೆಯಲಾಗಿದೆ ಎಂದು ನಗರ ಠಾಣಾಧಿಕಾರಿ ಹೆಚ್.ಎಸ್ ಭೋಜಪ್ಪ ಮಾಹಿತಿ ನೀಡಿದರು.