ಮಡಿಕೇರಿ, ಜು. 12: ಕೊಡಗು ಜಿಲ್ಲೆಯಾದ್ಯಂತ ಭಾನುವಾರ ದಿನ ನಿಶಬ್ಧ ವಾತಾವರಣ ಎಲ್ಲೆಡೆ ಕಂಡುಬಂತು. ರಾಜ್ಯ ಸಾರಿಗೆ ಸಂಸ್ಥೆ ಬಸ್‍ಗಳು ಸೇರಿದಂತೆ ಯಾವುದೇ ಖಾಸಗಿ ವಾಹನಗಳು, ಆಟೋ ಸಹಿತ ದ್ವಿಚಕ್ರ ವಾಹನಗಳ ಓಡಾಟ ಅವಶ್ಯಕ ಗೋಚರಿಸಲಿಲ್ಲ. ಬೆಳಿಗ್ಗೆ ಹಾಲು, ಪತ್ರಿಕೆ, ಔಷಧಿ ಸಹಿತ ತರಕಾರಿ, ಮೀನು, ಮಾಂಸದಂತಹ ಅನಾವಶ್ಯಕ ವಸ್ತುಗಳ ಮಾರಾಟವಷ್ಟೇ ನಿರ್ಧಿಷ್ಟ ಸಮಯದಲ್ಲಿ ಕಂಡುಬಂತು.ಇನ್ನುಳಿದಂತೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮೀಣ ಭಾಗಗಳಾದ ಮೂರ್ನಾಡು, ಮರಗೋಡು, ನಾಪೋಕ್ಲು, ಭಾಗಮಂಡಲ, ಚೇರಂಬಾಣೆ, ಕರಿಕೆ, ಸಂಪಾಜೆ ಸಹಿತ ಎಲ್ಲ ಗಡಿಭಾಗಗಳು; ಗ್ರಾಮೀಣ ಪ್ರದೇಶಗಳಲ್ಲಿ ಜನರು ಮನೆಬಿಟ್ಟು ಹೊರಗೆ ಸುಳಿದಾಡಿದ್ದು ವಿರಳವಿತ್ತು. ಉತ್ತರ ಕೊಡಗಿನಲ್ಲಿ ಸೋಮವಾರಪೇಟೆ ತಾಲೂಕು ಕೇಂದ್ರ ಸೇರಿದಂತೆ ಕೊಡ್ಲಿಪೇಟೆ, ಶನಿವಾರಸಂತೆ, ಕುಶಾಲನಗರ, ಶಿರಂಗಾಲ, ಹೆಬ್ಬಾಲೆ, ಸುಂಟಿಕೊಪ್ಪ, ಮಾದಾಪುರ ಹಾಗೂ ಇತರ ಗ್ರಾಮಾಂತರ ಭಾಗಗಳಲ್ಲಿ ಜನಜೀವನ ಸ್ತಬ್ಧಗೊಂಡಿತ್ತು.

(ಮೊದಲ ಪುಟದಿಂದ) ಕೈ ಬೆರಳೆಣಿಕೆ ವಾಹನಗಳಷ್ಟೇ ಅನಿವಾರ್ಯವೆಂಬಂತೆ ಓಡಾಟವಿತ್ತು. ಅಗತ್ಯ ವಸ್ತುಗಳ ವಹಿವಾಟು ಬೆಳಗಿನ ಕೆಲಸಮಯ ಗೋಚರಿಸಿತು.

ವೀರಾಜಪೇಟೆ ತಾಲೂಕು ಕೇಂದ್ರ, ಸಿದ್ದಾಪುರ, ಪಾಲಿಬೆಟ್ಟ, ಅಮ್ಮತ್ತಿ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ, ಬಾಳೆಲೆ, ಬಿರುನಾಣಿ, ಕುಟ್ಟ, ಕಾನೂರು ಸೇರಿದಂತೆ ಎಲ್ಲೆಡೆ ಲಾಕ್‍ಡೌನ್ ಕಂಡುಬಂತು. ಎಲ್ಲಿಯೂ ವಾಹನಗಳ ಸಹಿತ ಸಾರ್ವಜನಿಕರ ಸಂಚಾರವಿಲ್ಲದೆ ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕರ್ತವ್ಯ ನಿಮಿತ್ತ ಓಡಾಟವಿತ್ತು.

ಜಿಲ್ಲೆಯಾದ್ಯಂತ ಮಳೆಯೂ ಬಿಡುವು ನೀಡುವುದರೊಂದಿಗೆ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮದೊಂದಿಗೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿ ಇತ್ತು.

ಚೆಯ್ಯಂಡಾಣೆಯಲ್ಲಿ ಸಭೆ

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ನರಿಯಂದಡ, ಚೇಲಾವರ, ಕೋಕೇರಿ, ಕರಡ, ಅರಪಟ್ಟು, ಎಡಪಾಲ, ಪೊದವಾಡ ಗ್ರಾಮಸ್ಥರು ಅರಪಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಕಟ್ಟಡದ ಸಭಾಂಗಣದಲ್ಲಿ ವರ್ತಕರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಕೋವಿಡ್-19ರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಭೆ ನಡೆಸಿದರು. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿ - ಮುಂಗಟ್ಟುಗಳನ್ನು ತೆರೆದು ವ್ಯಾಪಾರ ನಡೆಸುವಂತೆ ಮತ್ತು ಭಾನುವಾರ ಸರ್ಕಾರದ ಆದೇಶದಂತೆ ಸಂಪೂರ್ಣವಾಗಿ ಬಂದ್ ಮಾಡುವಂತೆ ನಿರ್ಧರಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರದ ಬೇರೆ ಯಾವುದೇ ಆದೇಶಗಳು ಬಂದಲ್ಲಿ ಅದನ್ನು ಪಾಲಿಸುವಂತೆ ಮತ್ತು ತಮ್ಮ ಅಂಗಡಿಗಳ ಸುತ್ತಲು ಹಾಗೂ ಮೇಲಿನ ಗ್ರಾಮಸ್ಥರು ವಾಸಿಸುವ ತಮ್ಮ ಮನೆಗಳ ಸುತ್ತಲು ಸ್ವಚ್ಛತೆಯನ್ನು ಕಾಪಾಡುವಂತೆ, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಮನೆಯಿಂದ ಹೊರಗಡೆ ಬರುವಾಗ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸಿಕೊಂಡು ಬರುವಂತೆ ಮಕ್ಕಳು ಮತ್ತು ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ, ಎಲ್ಲೆಂದರಲ್ಲಿ ಕಸಗಳನ್ನು ಹಾಕುವುದನ್ನು ನಿರ್ಬಂಧಿಸುವಂತೆ ತೀರ್ಮಾನಿಸಿದರು.

ಗ್ರಾ.ಪಂ. ಆಡಳಿತಾಧಿಕಾರಿ ದಯಾನಂದ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಟಿ. ಕಿರಣ್ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೆಳಿಯಂಡ್ರ ರತೀಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ಕೊಡೀರ ತಮ್ಮಯ್ಯ ಪ್ರಸನ್ನ, ಕೆ.ಜೆ. ಪ್ರಕಾಶ್, ರಂಜು ಚಂಗಪ್ಪ ಮೊದಲಾದವರು ಹಾಜರಿದ್ದರು.

ವೀರಾಜಪೇಟೆಯಲ್ಲಿ ಪೂರ್ಣ ಬಂದ್

ವೀರಾಜಪೇಟೆ : ರಾಜ್ಯ ಸರಕಾರದ ಆದೇಶದಂತೆ ಕೊರೊನ ವೈರಸ್ ನಿರ್ಬಂಧದ ಲಾಕ್‍ಡೌನ್‍ನಂತೆ ವೀರಾಜಪೇಟೆಯಲ್ಲಿರುವ ಔಷಧಿ ಅಂಗಡಿಗಳನ್ನು ಹೊರತುಪಡಿಸಿದಂತೆ ಎಲ್ಲ ಅಂಗಡಿ - ಮುಂಗಟ್ಟುಗಳು ಪೂರ್ಣವಾಗಿ ಬಂದ್ ಆಗಿದ್ದವು.

ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಆಜು ಬಾಜಿನ ರಸ್ತೆಗಳಲ್ಲು ಬಂದೋಬಸ್ತ್ ಕಂಡುಬಂತು. ಪೊಲೀಸರು ಜನ ಹಾಗೂ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು. ಪಟ್ಟಣದ ವಿವಿಧೆಡೆಗಳಲ್ಲಿ ಸಂಚರಿಸಿ ಮನೆಯಿಂದ ಜನರು ಹೊರಗೆ ಬಾರದಂತೆ ನಿಗಾ ಇರಿಸಲಾಗಿತ್ತು. ಇಲ್ಲಿನ ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಭಾನುವಾರವಾದ ಕಾರಣ ಪಟ್ಟಣದ ಕೆಲವು ಮಾಂಸ ಹಾಗೂ ಕೋಳಿ ಮಾಂಸದ ಅಂಗಡಿಗಳು ಬೆಳಗ್ಗಿನಿಂದ ಸುಮಾರು ಎರಡು ಗಂಟೆಗಳ ಕಾಲ ತೆರೆದು ನಂತರ ಲಾಕ್‍ಡೌನ್‍ಗೆ ಬೆಂಬಲಿಸಿತು.

ವೀರಾಜಪೇಟೆ ಪಟ್ಟಣದಲ್ಲಿ ಸ್ಥಳೀಯ ಪೊಲೀಸರು, ಹೋಮ್ ಗಾಡ್ರ್ಸ್‍ಗಳು ಬಂದೋಬಸ್ತ್‍ನಲ್ಲಿ ನಿರತರಾಗಿದ್ದರು.

ಉತ್ತಮ ಬೆಂಬಲ

ಸೋಮವಾರಪೇಟೆ : ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟಲು ಸರ್ಕಾರವೇ ವಿಧಿಸಿರುವ ಭಾನುವಾರದ ಲಾಕ್‍ಡೌನ್‍ಗೆ ಸೋಮವಾರಪೇಟೆಯಲ್ಲಿ ಉತ್ತಮ ಬೆಂಬಲ ಕಂಡುಬಂತು.

ಪಟ್ಟಣದಲ್ಲಿ ಮೆಡಿಕಲ್, ಹಾಲು ಮಾರಾಟ ಕೇಂದ್ರಗಳು, ಪೆಟ್ರೋಲ್ ಬಂಕ್‍ಗಳು ಎಂದಿನಂತೆ ತೆರೆದಿದ್ದವು. ಕೆಲವೊಂದು ದಿನಸಿ ಅಂಗಡಿಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಅಂಗಡಿಗಳು ಬೆಳಗ್ಗಿನಿಂದಲೇ ಬಂದ್ ಆಗಿದ್ದವು.

ಪಟ್ಟಣದ ಮೀನು, ಮಾಂಸ ಮಾರಾಟದ ಅಂಗಡಿಗಳು ಬೆಳಗ್ಗೆಯಿಂದಲೇ ತೆರೆದಿದ್ದರೂ, ಗ್ರಾಹಕರ ಆಗಮನ ಅಷ್ಟಾಗಿ ಇರಲಿಲ್ಲ. ಸರ್ಕಾರವೇ ಲಾಕ್‍ಡೌನ್ ಘೋಷಿಸಿರುವದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂತು.

ಪಟ್ಟಣದಲ್ಲಿ ಜನಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಕೆಲವೊಮ್ಮೆ ಆಗಮಿಸುತ್ತಿದ್ದ ವಾಹನಗಳನ್ನು ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ತಡೆದು ವಿಚಾರಣೆ ನಡೆಸುತ್ತಿದ್ದರು. ಅನಾವಶ್ಯಕವಾಗಿ ಓಡಾಡದಂತೆ ತಾಕೀತು ಮಾಡುತ್ತಿದ್ದ ಘಟನೆ ಕಂಡುಬಂದವು.

ಸಿದ್ದಾಪುರ

ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಸಂಪೂರ್ಣ ಬಂದ್ ಆಗಿತ್ತು. ಸಿದ್ದಾಪುರದಲ್ಲಿ ಬೆಳಿಗ್ಗೆ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದವು ಆದರೆ ವಾಹನಗಳ ಸಂಚಾರ, ಪಟ್ಟಣದಲ್ಲಿ ಜನರ ಓಡಾಟ ಇಲ್ಲದೆ ಬಿಕೋ ಎನ್ನುತ್ತಿತ್ತು ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದ ಸಹಕಾರ ಸಂಘಗಳ ಬ್ಯಾಂಕುಗಳು ಕೂಡ ಮುಚ್ಚಿದ್ದವು. ಸಿದ್ದಾಪುರದಲ್ಲಿ ಮಾಂಸದ ಅಂಗಡಿಗಳು ತೆರೆದಿದ್ದವು ಆದರೆ ಗ್ರಾಹಕರಿಲಿಲ್ಲ.

ಶನಿವಾರಸಂತೆ

ಶನಿವಾರಸಂತೆ ಗುಡುಗಳಲೆ ಸಂಪೂರ್ಣ ಬಂದ್ ಆಗಿತ್ತು. ನಗರದಲ್ಲಿ ಜನಸಂಚಾರ ಇಲ್ಲದೆ ಬಿಕೋ ಎನ್ನುತ್ತಿತ್ತು. ಹಾಲು ವಿತರಣಾ ಅಂಗಡಿ, ಬೈಪಾಸ್ ರಸ್ತೆಯಲ್ಲಿ ಕುರಿ, ಕೋಳಿ ಮಾಂಸ, ಹಸಿಮೀನಿನ ಅಂಗಡಿಗಳು, ಪೆಟ್ರೋಲ್ ಬಂಕ್, ಎ.ಟಿ.ಎಂ. ತೆರೆದಿದ್ದವು. ಆಟೋ, ಬಸ್‍ಗಳ ಸಂಚಾರವಿರಲಿಲ್ಲ. ಖಾಸಗಿ ವಾಹನಗಳ ಸಂಚಾರವೂ ಕಡಿಮೆಯಾಗಿತ್ತು.

ಸುಂಟಿಕೊಪ್ಪ

ಸುಂಟಿಕೊಪ್ಪ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಿಗ್ಗೆಯಿಂದ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೆಲ ವಿವಾಹ ಕಾರ್ಯಕ್ರಮಗಳ ವಾಹನಗಳು ಮಾತ್ರ ರಸ್ತೆಯಲ್ಲಿ ಓಡಾಡುತ್ತಿದ್ದವು.

ಕಡಂಗ

ಕಡಂಗದಲ್ಲಿ ಅಗತ್ಯ ಸೇವೆಗಳಾದ ಮೆಡಿಕಲ್, ಹಾಲು, ದಿನಪತ್ರಿಕೆ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿತ್ತು. ಜನರಿಲ್ಲದೇ ಪಟ್ಟಣ ಬಿಕೋ ಎನ್ನುತ್ತಿತ್ತು.

ನಾಪೆÇೀಕ್ಲು

ಲಾಕ್‍ಡೌನ್ ಹಿನ್ನೆಲೆ ನಾಪೆÇೀಕ್ಲು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಪೆÇಲೀಸರು ಯಾವದೇ ವಾಹನ ಓಡಾಟಕ್ಕೆ ಅವಕಾಶ ನೀಡಲಿಲ್ಲ.

ಕೊಡ್ಲಿಪೇಟೆ

ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯಲ್ಲಿ ಭಾನುವಾರ ಲಾಕ್‍ಡೌನ್ ಹಿನ್ನೆಲೆ ವಾರದ ಸಂತೆ ರದ್ದಾಗಿರುವ ಕಾರಣ ಜನರು ಹಾಗೂ ವಾಹನ ಸಂಚಾರವಿಲ್ಲದೆ ಸಂಪೂರ್ಣ ಬಂದ್ ಆಗಿದ್ದು, ಬಿಕೋ ಎನ್ನುತ್ತಿತ್ತು.

ಕೂಡಿಗೆ ಬಂದ್

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೂಡಿಗೆ ಸೇರಿದಂತೆ ಕೂಡುಮಂಗಳೂರು, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಮುಳ್ಳುಸೋಗೆ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಈ ವಾಪ್ತಿಯಲ್ಲಿ ಔಷಧಿಯ ಅಂಗಡಿಗಳು, ಕೋಳಿ ಮಾಂಸ, ತರಕಾರಿ ಅಂಗಡಿಗಳು ತೆರೆದಿದ್ದವು.

ಕೂಡಿಗೆಯಲ್ಲಿ ಲಾಠಿ ಏಟು

ಕೂಡಿಗೆಯ ಡೈರಿ ಸರ್ಕಲ್‍ನ ಸಮೀಪದಲ್ಲಿ ಕೋಳಿ ಮಾಂಸ ಮಾರಾಟದ ಅಂಗಡಿಯಲ್ಲಿ ಸಮಯ 12 ಗಂಟೆ ಕಳೆದರೂ ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಕುಶಾಲನಗರ ಪೆÇೀಲಿಸರು ಅಂಗಡಿ ಮಾಲೀಕನಿಗೆ ಸೇರಿದಂತೆ ಕೆಲಸಗಾರರಿಗೆ ಲಾಠಿ ಏಟು ತೋರಿಸಿದ್ದಾರೆ.

ಗೋಣಿಕೊಪ್ಪಲು

ಸರಕಾರ ಭಾನುವಾರದಂದು ಲಾಕ್‍ಡೌನ್ ಮಾಡುವಂತೆ ಆದೇಶ ನೀಡಿದ ಮೇರೆಗೆ ಸಂತೆ ದಿನ ಗೋಣಿಕೊಪ್ಪಲುವಿನಲ್ಲಿ ಎರಡನೇ ಭಾನುವಾರ ಇಂದು ಕೂಡ ಸಂಪೂರ್ಣ ಬಂದ್ ಆಗಿತ್ತು. ವಾಹನ ಸಂಚಾರ, ನಾಗರಿಕರ ಓಡಾಟ ಅಷ್ಟಾಗಿ ಕಂಡು ಬರಲಿಲ್ಲ. ವೃತ್ತ ನಿರೀಕ್ಷಕ ರಾಮರೆಡ್ಡಿ ನೇತೃತ್ವದಲ್ಲಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮುಂಜಾನೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗಿತ್ತು. ನಾಗರಿಕರು ನಗರಕ್ಕೆ ಬರುವುದಕ್ಕೆ ಹಿಂದೇಟು ಹಾಕಿದರು. ಪೇಪರ್, ಹಾಲು, ಮೆಡಿಕಲ್, ಪೆಟ್ರೋಲ್ ಬಂಕ್ ಸೇವೆ ಮಾಮೂಲಿಯಾಗಿತ್ತು.

ಪೆÇನ್ನಂಪೇಟೆ ಸ್ತಬ್ಧ

ಭಾನುವಾರದ ಲಾಕ್‍ಡೌನ್‍ಗೆ ಪೆÇನ್ನಂಪೇಟೆ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲಾ ಅಂಗಡಿ - ಮುಂಗಟ್ಟುಗಳು ಬಂದ್ ಆಗಿದ್ದವು. ಬೆಳಿಗ್ಗೆ ತೆರೆದಿದ್ದ ಮೆಡಿಕಲ್ ಶಾಪ್‍ಗಳು ಕೂಡ ಗ್ರಾಹಕರಿಲ್ಲದೆ ಮಧ್ಯಾಹ್ನದ ನಂತರ ಮುಚ್ಚಲ್ಪಟ್ಟವು. ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಿಸಿದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಹಾಲು ಹಾಗೂ ದಿನಪತ್ರಿಕೆ ಮಾರಾಟ ಇತ್ತು. ಕೊರೊನಾ ಹರಡುವ ಭಯದಲ್ಲಿ ಸಾರ್ವಜನಿಕರು ಕೂಡ ರಸ್ತೆಗಿಳಿಯಲಿಲ್ಲ. ವಾಹನ ಸಂಚಾರ ವಿರಳವಾಗಿತ್ತು.

ಗಾಂಭೀರ್ಯತೆ ಕಳೆದುಕೊಂಡ ಸಂಡೇ ಲಾಕ್‍ಡೌನ್

ಅಮ್ಮತ್ತಿ: ಕಳೆದ ವಾದರ ಲಾಕ್‍ಡೌನ್‍ಗೆ ಇದ್ದ ಗಂಭೀರತೆ ಈ ವಾರ ಅಮ್ಮತ್ತಿಯ ಜನತೆಯಲ್ಲಿ ಕಡಿಮೆಯಾಗಿತ್ತು. ಕಳೆದವಾರ ಜನರೇ ಸ್ವಯಂ ಪ್ರೇರಿತರಾಗಿ ಮನೆಯಲ್ಲಿದ್ದರು ಆದರೆ ಈ ವಾರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೂ ಕೆಲವು ಜನರು ಲಾಕ್‍ಡೌನ್ ಕ್ಯಾರೆ ಅನ್ನದೆ ರಸ್ತೆಗಿಳಿದಿದ್ದರು.

ಪೆÇೀಲಿಸರು ಸುತ್ತು ಹಾಕುತ್ತಿದ್ದಂತೆ ಜನರು ಮೆಲ್ಲನೆ ಮಾಯವಾದರು. ರಸ್ತೆಬದಿಯಲ್ಲಿ ತರಕಾರಿ ಮಾರುತ್ತಿದ್ದ ವಾಹನವನ್ನು ಪೆÇಲೀಸರು ತೆರವುಗೊಳಿಸಿದರು. ವಾಹನ ಸಂಚಾರವು ಕಳೆದ ವಾರಕ್ಕಿಂತಲೂ ಹೆಚ್ಚಾಗಿತ್ತು.