ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮೌಲ್ಯಮಾಪನ
ಬೆಂಗಳೂರು, ಜು. 12: ಇತ್ತೀಚಿಗಷ್ಟೇ ಮುಕ್ತಾಯವಾದ 2020ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಸೋಮವಾರದಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭವಾಗಬೇಕಿದೆ. ಆದರೆ ರಾಜ್ಯ ಸರ್ಕಾರ ತಾ. 14 ರಿಂದ 22 ರವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳ ಮೌಲ್ಯಮಾಪನ ಕಾರ್ಯವು ನಿಗದಿಯಂತೆ ನಡೆಯಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಮೌಲ್ಯಮಾಪನ ಮುಂದೂಡಿಕೆಯಾಗಿದ್ದು, ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಬೊಮ್ಮನಹಳ್ಳಿ ವಲಯಕ್ಕೆ ಕೋವಿಡ್-19 ಸೋಂಕಿತ ರೋಗಿಗಳಿಗಾಗಿ ವಾರ್ಡ್‍ಗೆ ತಲಾ ಒಂದರಂತೆ ಎಲ್ಲಾ ವಾರ್ಡ್‍ಗಳಿಗೂ ಆಂಬುಲೆನ್ಸ್ ವಾಹನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್‍ಕುಮಾರ್ ತಿಳಿಸಿದ್ದಾರೆ. ಬೊಮ್ಮನಹಳ್ಳಿ ವಲಯ ಕೊರೊನಾ ಉಸ್ತುವಾರಿಗೆ ವಹಿಸಿಕೊಂಡಿರುವ ಸುರೇಶ್‍ಕುಮಾರ್ ಅವರು ಇಂದು ಬಿಬಿಎಂಪಿ ಜಂಟ ಆಯುಕ್ತರ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು.
30 ಕೈದಿಗಳನ್ನು ಕಾಡಿದ ಕೊರೊನಾ
ಬೆಂಗಳೂರು, ಜು. 12: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕೇವಲ ಪೊಲೀಸರಷ್ಟೇ ಅಲ್ಲ, ಅಪರಾಧ ಮಾಡಿ ಜೈಲು ಸೇರಿರುವ ಕೈದಿಗಳಿಗೂ ಮಹಾಮಾರಿಯಾಗಿ ವ್ಯಾಪಿಸಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸುಮಾರು 400 ವಿಚಾರಣಾಧೀನ ಕೈದಿಗಳ ಪೈಕಿ 150 ಮಂದಿಗೆ ರ್ಯಾಂಡಮ್ ಟೆಸ್ಟ್ ಮಾಡಿದ್ದ ವೇಳೆ 30 ಮಂದಿಗೆ ಕೊರೊನಾ ಇರುವುದು ಖಚಿತವಾಗಿದೆ. ಇದೀಗ ಸೋಂಕಿತ ಕೈದಿಗಳನ್ನು ಪ್ರತ್ಯೇಕ ಐಸೋಲೇಟೆಡ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರಿದ್ದ ಜೈಲಿನ ಭಾಗಗಳನ್ನು ಸ್ಯಾನಿಟ್ರೇಷನ್ ಮಾಡಲಾಗುತ್ತಿದೆ. ಇನ್ನು ಕಳೆದ ವಾರವೂ ಪರಪ್ಪನ ಅಗ್ರಹಾರ ಜೈಲಿನ 20 ವಿಚಾರಣಾಧೀನ ಕೈದಿಗಳಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು. ಇದೀಗ ಮತ್ತೆ ಮೂವತ್ತು ಕೈದಿಗಳಿಗೆ ಸೋಂಕು ತಗುಲಿರುವುದು ಜೈಲಿನ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.
ಎನ್‍ಕೌಂಟರ್‍ನಲ್ಲಿ ಓರ್ವ ಉಗ್ರ ಬಲಿ
ಬಾರಾಮುಲ್ಲಾ, ಜು. 12: ಉತ್ತರ ಕಾಶ್ಮೀರ ಜಿಲ್ಲೆಯಾದ ಬಾರಾಮುಲ್ಲಾದ ಸೊಪೋರ್‍ನಲ್ಲಿ ಭದ್ರತಾ ಪಡೆಗಳು ಭಾನುವಾರ ಆರಂಭಿಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಎನ್‍ಕೌಂಟರ್‍ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಕಾರ್ಯಾಚರಣೆ ತಂಡ (ಎಸ್‍ಒಜಿ), ಸಿಆರ್‍ಪಿಎಫ್ ಮತ್ತು ರಾಷ್ಟ್ರೀಯ ರೈಫಲ್ಸ್ ಪಡೆಗಳು ಜಂಟಿಯಾಗಿ ಭಾನುವಾರ ಬೆಳಗಿನ ಜಾವ ಸೊಪೋರ್ ಪಟ್ಟಣದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ರೆಬ್ಬಾನ್‍ನಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಒಂದು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿದ್ದಾಗ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಸೋಚ್ಛೆ ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಪರಸ್ಪರ ಗುಂಡಿನ ಚಕಮಕಿ ನಡೆದಿದೆ. ಇತ್ತೀಚಿನ ವರದಿಗಳು ಬಂದಾಗ ಕಾರ್ಯಾಚರಣೆ ಇನ್ನೂ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.
ಅಮಿತಾಬ್ ಸೊಸೆ, ಮೊಮ್ಮಗಳಿಗೆ ಸೋಂಕು
ಮುಂಬೈ, ಜು. 12: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಪುತ್ರಿ ಆರಾದ್ಯಾ ಬಚ್ಚನ್ ಅವರಿಗೂ ಕೊರೊನಾ ವಕ್ಕರಿಸಿದೆ. ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಈಗಾಗಲೇ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಹಾಗೂ ಮಾವನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಐಶ್ವರ್ಯ, ಪುತ್ರಿ ಆರಾಧ್ಯಾ ಹಾಗೂ ಅತ್ತೆ ಜಯಾ ಬಚ್ಚನ್ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಮೂವರ ವರದಿ ಬಂದಿದ್ದು, ಐಶ್ವರ್ಯಾ ಹಾಗೂ ಆರಾಧ್ಯಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜಯಾ ಬಚ್ಚನ್ ಅವರಿಗೆ ನೆಗಟಿವ್ ಬಂದಿದೆ. ಈ ನಡುವೆ ಅಮಿತಾಭ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ. ಸೌಮ್ಯ ಲಕ್ಷಣಗಳಷ್ಟೇ ಕಂಡು ಬಂದಿದೆ. ಪ್ರಸ್ತುತ ಆಸ್ಪತ್ರೆಯ ಐಸೋಲೇಷನ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಜಮಾತ್-ಇ-ಇಸ್ಲಾಮಿ ಸದಸ್ಯರ ಬಂಧನ
ಶ್ರೀನಗರ, ಜು. 12: ಪ್ರತ್ಯೇಕತಾವಾದಿ ಟೆಹ್ರೀಕ್ ಇ ಹುರ್ರಿಯತ್ ನಾಯಕ ಮೊಹಮ್ಮದ್ ಅಶ್ರಫ್ ಸೆಹ್ರಾಯ್ ಮತ್ತು ನಿಷೇಧಿತ ಜಮಾತ್-ಇ-ಇಸ್ಲಾಮಿ ಸಂಘಟನೆಯ ಕೆಲವು ಸದಸ್ಯರನ್ನು ಬಂಧಿಸಲಾಗಿದ್ದು, ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಕೇಸು ದಾಖಲಿಸಲಾಗುವುದು ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಪಾಕಿಸ್ತಾನ ಪರ ಟೆಹ್ರೀಕ್-ಇ-ಹುರ್ರಿಯತ್ ಸಂಘಟನೆಯ ಅಧ್ಯಕ್ಷ ಅಶ್ರಫ್ ಸೆಹ್ರಾಯ್ ಆಗಿದ್ದಾರೆ. ಆತನ ಜೊತೆಗೆ ಇನ್ನೂ ಅನೇಕ ಸಂಘಟನೆ ಸದಸ್ಯರನ್ನು ಕಸ್ಟಡಿಗೆ ಕರೆದೊಯ್ಯಲಾಗಿದೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಇಂದು ಬೆಳಿಗ್ಗೆ 5.30ರ ಹೊತ್ತಿಗೆ ಬರ್ಜುಲ್ಲಾ ಭಗತ್‍ನಲ್ಲಿರುವ ಸೆಹ್ರಾಯ್ ನಿವಾಸಕ್ಕೆ ತಲುಪಿದ ಪೊಲೀಸರು ಬಂಧಿಸಿದ್ದಾರೆ. ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರ ಸೆಹ್ರಾಯ್ ಕಳೆದ ಆಗಸ್ಟ್ 5 ರಿಂದ ಗೃಹಬಂಧನದಲ್ಲಿದ್ದರು. ರಾಜಕೀಯದಿಂದ ಸಂಪೂರ್ಣ ದೂರವಿರುವುದಾಗಿ ಪ್ರತ್ಯೇಕತಾವಾದಿ ಹಿರಿಯ ನಾಯಕ ಸೈಯದ್ ಆಲಿ ಶಾ ಗಿಲಾನಿ ಘೋಷಿಸಿದ ಕೆಲ ದಿನಗಳ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸಚಿವ ರವಿಗೆ 3ನೇ ಬಾರಿ ಟೆಸ್ಟ್
ಚಿಕ್ಕಮಗಳೂರು, ಜು. 12: ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಅವರು ಭಾನುವಾರ ಮೂರನೇ ಬಾರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸಚಿವರು ಒಂದು ವಾರದೊಳಗಿನ ಎರಡು ಟೆಸ್ಟ್‍ನಲ್ಲಿ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ, ಅದಕ್ಕಾಗಿ ನಾನು ಇಂದು 3ನೇ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್-ಗಾಗಿ ಕಾಯುತ್ತಿದ್ದೇನೆಎಂದಿದ್ದಾರೆ. ಇದಲ್ಲದೆ ಬೆಳಿಗ್ಗೆ ಸೂರ್ಯ ನಮಸ್ಕಾರ, ಅರ್ಧಕಟಿ ಚಕ್ರಾಸನ, ನಾಡಿ ಶುದ್ದಿ ಕ್ರಿಯೆಗಳು, ಅನುಲೋಮ ವಿಲೋಮ ಪ್ರಾಣಾಯಾಮ ಪೂರ್ಣಗೊಳಿಸಿದ್ದೇನೆ. ಒಂದು ಗಂಟೆಯ ವಿವಿಧ ಯೋಗಾಭ್ಯಾಸದ ನಂತರ 10 ನಿಮಿಷ ಶವಾಸನ ಹಾಕಿದ್ದೇನೆ. ಮೇಲ್ನೋಟಕ್ಕೆ ಯಾವುದೇ ವ್ಯತ್ಯಾಸ ನನಗೆ ಗೊತ್ತಾಗಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಇದಕ್ಕೆ ಹಿಂದೆ ತಮಗೆ ಕೊರೊನಾ ದೃಢಪಟ್ಟಿರುವ ಬಗ್ಗೆ ಟ್ವೀಟ್ ಮಾಡಿದ್ದ ಸಚಿವ ಸಿಟಿ ರವಿ, ನಾನು ಕ್ಷೇಮವಗಿದ್ದೇನೆ. ಕೊರೊನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್‍ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ ಎಂದು ಹೇಳಿದ್ದರು.
ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ ರಾಜೀನಾಮೆ
ಭೋಪಾಲ್, ಜು. 12: ಮಧ್ಯಪ್ರದೇಶದಲ್ಲಿ ಈಗಾಗಲೇ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‍ಗೆ ಮತ್ತೊಂದು ಹೊಡೆತ ಬಿದ್ದಿದೆ. ಬುಂದೇಲ್‍ಖಂಡ್ ಪ್ರದೇಶದ ಮಲ್ಹರಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಶಾಸಕ ಪ್ರದ್ಯುಮ್ನ ಸಿಂಗ್ ಲೋಧಿ ಅವರು ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ ನಂತರ ಶಾಸಕ ಲೋಧಿ ಅವರು ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರ ನೇತೃತ್ವದಲ್ಲಿ ಲೋಧಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ನನ್ನ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ. ಬಿಜೆಪಿಯಿಂದ ಮಾತ್ರ ನನ್ನ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ಸೇರಿದ ಬಳಿಕ ಲೋಧಿ ಹೇಳಿದ್ದಾರೆ.