ಕಣಿವೆ, ಜು. 12: ತಾ. 5 ರಂದು ಬರಬೇಕಿದ್ದ ಪುನರ್ವಸು ಮಳೆ ಕೂಡ ಈ ಬಾರಿ ಕೈಕೊಟ್ಟಂತೆ ಕಾಣುತ್ತಿದೆ. ಏಕೆಂದರೆ ಕಳೆದ ಒಂದು ವಾರದಿಂದಲೂ ಕುಶಾಲನಗರ ಹೋಬಳಿಯ ಯಾವುದೇ ಕಡೆಯೂ ಸರಿಯಾದ ಮಳೆಯಾಗದ ಕಾರಣ ರೈತರು ಬೆಳೆದಿರುವ ಬೆಳೆಗಳು ಮತ್ತೆ ಬಾಡಲು ಆರಂಭಿಸಿವೆ. ಕಳೆದ ಜೂನ್ 24 ರಂದು ಹುಟ್ಟಿದ ಆರಿದ್ರಾ ಮಳೆ ಕೂಡ ಈ ಭಾಗದ ಜನರಿಗೆ ಸಂತಸದ ಬದಲು ಸಂಕಟ ನೀಡಿತ್ತು. ಇದೀಗ ಪುನರ್ವಸು ಕೂಡ ಅದೇ ಸಂಕಟವನ್ನು ಉಂಟುಮಾಡುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬೇಸಿಗೆಯ ಬಿಸಿಲನ್ನೇ ನಾಚಿಸುವಂತಹ ಮಾದರಿಯ ಬಿಸಿಲು ಈ ಮಳೆಗಾಲದಲ್ಲಿ ಗೋಚರವಾಗುತ್ತಿದ್ದು ರೈತರು ಅತೀ ಹೆಚ್ಚು ಪ್ರಮಾಣದಲ್ಲಿ ಬೆಳೆದ ಶುಂಠಿ, ಜೋಳ, ದ್ವಿದಳ ಧಾನ್ಯ ಬೆಳೆಗಳೂ ಸೇರಿದಂತೆ ಇನ್ನೂ ಅನೇಕ ಬೆಳೆಗಳು ಹೊಲಗದ್ದೆಗಳಲ್ಲಿ ಬಿಸಿಲಿನ ತಾಪಕ್ಕೆ ಬಾಡಲಾರಂಭಿಸಿವೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು ಬಾಡುತ್ತಿರುವ ಬೆಳೆಗಳಿಗೆ ನೀರನ್ನು ಸಿಂಪಡಿಸಿಕೊಳ್ಳುತ್ತಿದ್ದಾರೆ. ಇನ್ನು ನೀರಾವರಿ ಮೂಲ ಇಲ್ಲದವರು ಮಳೆಗಾಗಿ ಕಾಯುತ್ತಿದ್ದಾರೆ. ಪುನರ್ವಸು ಮಳೆ ಏನಾದರೂ ಆರಿದ್ರಾ ಮಳೆಯ ರೀತಿ ಕೈಕೊಟ್ಟರೆ ಮೊದಲೇ ಕೊರೊನಾದಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತಾಪಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅದಕ್ಕೂ ಮುನ್ನಾ ವರುಣದೇವ ಕೃಪೆ ತೋರಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ. - ಮೂರ್ತಿ