ಪೆÇನ್ನಂಪೇಟೆ, ಜು. 12: ಕೊಡಗಿನಲ್ಲಿ ಕೋವಿಡ್-19 ದಿನೇದಿನೇ ಏರಿಕೆಯಾಗು ತ್ತಿದೆ. ಇದನ್ನು ಜಿಲ್ಲೆಯಲ್ಲಿ ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ, ಕೊಡಗು ಜಿ.ಪಂ. ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಅವರು, ಕೊಡಗಿನಲ್ಲಿ ಸೋಂಕಿನ ಭೀತಿ ಹೆಚ್ಚಾಗುತ್ತಿದ್ದರೂ ಆಡಳಿತಾರೂಢ ಪಕ್ಷದ ಶಾಸಕರು ಇದೀಗ ಮೌನವಹಿಸಿದ್ದಾರೆ. ಇದು ಸರ್ಕಾರದ ವೈಫಲ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕು ಪತ್ತೆ ಹಚ್ಚುವ ಕಾರ್ಯ ತ್ವರಿತವಾಗಿ ನಡೆಯುತ್ತಿಲ್ಲ. ತಪಾಸಣೆ ವೇಳೆ ವ್ಯಕ್ತಿಗಳಿಂದ ಮಾದರಿಗಳನ್ನು ಸಂಗ್ರಹಿಸಿದ 5ರಿಂದ 7 ದಿನಗಳ ನಂತರ ಫಲಿತಾಂಶ ಬರುತ್ತಿದೆ. ಜಿಲ್ಲೆಯಲ್ಲಿ ಇರುವ ಏಕೈಕ ಕೋವಿಡ್-19 ಪ್ರಯೋಗಾಲಯದ ಇಬ್ಬರು ಸಿಬ್ಬಂದಿಗಳಲ್ಲಿ ಇತ್ತೀಚೆಗೆ ಸೋಂಕು ಪತ್ತೆಯಾದ ಕಾರಣ ಮೂರು ದಿನ ಅಲ್ಲಿನ ಕೆಲಸಗಳನ್ನು ಸ್ಥಗಿತಗೊಳಿಸಲಾ ಗಿತ್ತು. ಈ ಮಧ್ಯೆ ಪ್ರಯೋಗಾಲಯದ ಯಂತ್ರಗಳಲ್ಲಿ ತಾಂತ್ರಿಕ ದೋಷವೂ ಎದುರಾಗು ತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆಯಾ ತಾಲೂಕು ಕೇಂದ್ರಗಳಲ್ಲಿ ಐಸೋಲೇಶನ್ ಘಟಕಗಳನ್ನು ಪ್ರಾರಂಭಿಸಬೇಕು. ಅದೇ ರೀತಿ ಕೋವಿಡ್-19 ಪ್ರಯೋಗಾಲಯ ಗಳನ್ನು ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಕೂಡಲೇ ಪ್ರಾರಂಭಿಸಿ ಒಂದೇ ದಿನದಲ್ಲಿ ಫಲಿತಾಂಶ ನೀಡಬೇಕು. ಇದಕ್ಕಾಗಿ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಿ ಹೆಚ್ಚುವರಿ ಸೇವೆಗಾಗಿ ಅವರನ್ನು ಸಿದ್ಧಗೊಳಿಸಬೇಕು. ಐಸೋಲೇಶನ್ ಕೇಂದ್ರಗಳಿಗಾಗಿ ಸರಕಾರದ ಅಧೀನದಲ್ಲಿರುವ ಬಾಳುಗೋಡಿನ ಏಕಲವ್ಯ ವಸತಿ ಶಾಲೆಗಳಂತಹ ಕಟ್ಟಡಗಳನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ.
ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕವಾದ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂಬ ದೂರಿದೆ. ಜಿಲ್ಲೆಯ ವಿವಿಧೆಡೆ ಜಾರಿಗೊಳಿಸಲಾಗಿರುವ ನಿಯಂತ್ರಿತ ವಲಯದಲ್ಲಿ ವಾಸಿಸುವ ಜನತೆಗೆ ಅಗತ್ಯ ವಸ್ತುಗಳು ಸರಿಯಾಗಿ ದೊರೆಯುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಈ ಕುರಿತ ಸಮಸ್ಯೆ ಪರಿಹರಿಸುವಲ್ಲಿ ಆಡಳಿತರೂಡ ಪಕ್ಷದ ಶಾಸಕರ ನಿಲುವೇನು? ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್ ಐಸೋಲೇಶನ್ ಕೇಂದ್ರಗಳನ್ನು ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸುವಂತೆ ಸರಕಾರದ ಮುಂದೆ ಬೇಡಿಕೆಗಳನಿಟ್ಟು ಮಹಾಮಾರಿ ಈ ಸೋಂಕನ್ನು ನಿಯಂತ್ರಿಸುವ ಬಗ್ಗೆ ಜಿಲ್ಲೆಯ ಬಿಜೆಪಿ ಶಾಸಕರು ವಿಶೇಷ ಮುತುವರ್ಜಿ ವಹಿಸಿ ತಮ್ಮ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಶಿವು ಮಾದಪ್ಪ ಆಗ್ರಹಿಸಿದ್ದಾರೆ.