ಗೋಣಿಕೊಪ್ಪಲು, ಜು. 11: ಕಂಟೈನ್‍ಮೆಂಟ್ ವಲಯದಲ್ಲಿರುವ ಅವರು ದಿನನಿತ್ಯ ಕೂಲಿ ಕೆಲಸ ಮಾಡಿ ಅಂದಿನ ದಿನವನ್ನು ಕಳೆಯುವವರು ನಾವಾಗಿದ್ದೇವೆ. ಕೊರೊನಾ ಪಾಸಿಟಿವ್ ಪ್ರಕರಣದ ಮನೆಗೂ ಇತರರು ಇರುವ ಮನೆಗೂ ಅತ್ಯಂತ ದೂರವಿದೆ. ಆದರೂ ಇದನ್ನು ಮನಗಾಣದ ಇಲಾಖೆಯು ಸಂಪೂರ್ಣ ಏರಿಯಾವನ್ನು ಕಂಟೈನ್ ಮೆಂಟ್ ವಲಯಗಳಾಗಿ ಪರಿವರ್ತಿಸಿ ರುವುದರಿಂದ ನಮ್ಮ ಬದುಕು ದುಸ್ಥರಗೊಂಡಿದೆ. ನಮ್ಮ ಕಷ್ಟ ಆಲಿಸುವವರು ಯಾರು ಇಲ್ಲದಂತಾಗಿದೆ ಎಂದು ತಾಲೂಕು ತಹಶೀಲ್ದಾರ್ ಮುಂದೆ ಇಲ್ಲಿನ ನಾಗರಿಕರು ತಮ್ಮ ಅಳಲನ್ನು ತೋಡಿ ಕೊಂಡರು. ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 6ನೇ ವಿಭಾಗದ ಹರಿಶ್ಚಂದ್ರಪುರದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟ ನಂತರ ಕಳೆದ 4 ದಿನಗಳ ಹಿಂದೆ ಈ ಭಾಗದ 300ಕ್ಕೂ ಅಧಿಕ ಮನೆಗಳನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಕಂಟೈನ್‍ಮೆಂಟ್ ವಲಯಗಳನ್ನಾಗಿ ಮಾರ್ಪಡಿಸ ಲಾಗಿತ್ತು. ಬಹುತೇಕ ಕೂಲಿ ಕಾರ್ಮಿಕರೇ ಈ ಭಾಗದಲ್ಲಿ ವಾಸಿಸುತ್ತಿರುವುದರಿಂದ ಇಲ್ಲಿನ ಜನರ ದೈನಂದಿನ ಕೂಲಿ ಕೆಲಸಕ್ಕೆ ಹೊರಗೆ ಹೋಗಲು ಸಾಧ್ಯ ವಾಗಿರಲಿಲ್ಲ. ನ್ಯಾಯಬೆಲೆ ಅಂಗಡಿ ಗಳಿಂದ ಕನಿಷ್ಟ ಪಡಿತರ ವಸ್ತುಗಳನ್ನು ಪಡೆಯಲಾರದ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಇಲ್ಲಿಯ ಜನರು ತಹಶೀಲ್ದಾರ್ ನಂದೀಶ್ ಕುಮಾರ್ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಂಡರು.

ಸೀಲ್‍ಡೌನ್ ಆದ ಕಾರಣ ಮನೆಯಿಂದ ಯಾರು ಕೂಡ ಹೊರ ಬಾರಲಾರದ ಪರಿಸ್ಥಿತಿ ನಿರ್ಮಾಣ ಗೊಂಡಿದ್ದರಿಂದ ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ನ್ಯಾಯ ಬೆಲೆ ಅಂಗಡಿಯಿಂದ ಸಿಗುವ ಅಕ್ಕಿ ಖರೀದಿಸಲು ಹೊರಗೆ ಹೋಗಲು ಇಲಾಖೆಯ ಅನುಮತಿ ಇಲ್ಲ. ಅಡುಗೆ ಸಿಲಿಂಡರ್ ಕೂಡ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವ್ಯವಸ್ಥೆ ಕಲ್ಪಿಸಬೇಕೆಂದು ಈ ಭಾಗದ ಜನರು ನೋವನ್ನು ತೋಡಿಕೊಂಡರು.

ನಾಗರಿಕರ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರ್ ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಕಂಟೈನ್‍ಮೆಂಟ್ ವಲಯಗಳನ್ನಾಗಿ ಮಾಡುವುದು ನಾಗರಿಕರಿಗೆ ಕಷ್ಟ ಕೊಡುವ ಉದ್ದೇಶವಲ್ಲ. ಬದಲಾಗಿ ಕೊರೊನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಾಗ ಅಂತವರಿಂದ ಬೇರೆಯವರಿಗೆ ಸೋಂಕು ಹರಡ ಬಾರದು ಎಂಬ ಉದ್ದೇಶವಾಗಿದೆ. ಕನಿಷ್ಟ 14 ದಿನಗಳವರೆಗೆ ಸರ್ಕಾರದ ನಿಯಮಗಳನ್ನು ತಾವುಗಳು ಪಾಲಿಸಲೇಬೇಕಾದ ಅನಿವಾರ್ಯತೆ ಯಿದೆ ಎಂದರು.

ಈ ನಿಟ್ಟಿನಲ್ಲಿ ಅವಶ್ಯವಿರುವ ಪಡಿತರ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳಿಂದ ತಮ್ಮ ಮನೆಗಳಿಗೆ ನೇರವಾಗಿ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇದನ್ನೆ ಉದ್ದೇಶವಿಟ್ಟುಕೊಂಡು ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಹೊರ ಬರುವ ಪ್ರಯತ್ನ ನಡೆಸಿದರೆ ಅಂತಹವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಿದರು.

ಭೇಟಿಯ ಸಂದರ್ಭ ರೆವೆನ್ಯೂ ಅಧಿಕಾರಿ ರಾಧಕೃಷ್ಣ ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಪಿಡಿಒ ಶ್ರೀನಿವಾಸ್, ಗ್ರಾಮಲೆಕ್ಕಿಗ ಮಂಜುನಾಥ್, ಗ್ರಾಮ ಸಹಾಯಕ ಸುನೀಲ್, ಗ್ರಾಮ ಪಂಚಾಯ್ತಿ ಸದಸ್ಯ ಪ್ರಮೋದ್ ಗಣಪತಿ ಮೊದಲಾದವರು ಹಾಜರಿದ್ದರು.