ಶೌನಕಾದಿ ಮಹರ್ಷಿಗಳು ಸೂತ ಪುರಾಣಿಕನÀನ್ನು ಕೇಳುತ್ತಾರೆ: ಜಗತ್ಪಾವನೆಯೂ ಸಕಲ ತೀರ್ಥ ಸ್ವÀರೂಪಿಣಿಯೂ ಆದ ಕಾವೇರಿಯು ಸರ್ವರ ಒಳಿತಿಗಾಗಿ ಜನ್ಮ ತಳೆದಳು ಎಂಬದು ನಿಜಕ್ಕೂ ಅದ್ಭುತ. ಅದೇ ಪ್ರದೇಶದಲ್ಲಿ ಅಗಸ್ತ್ಯರಿಂದ ಪ್ರತಿಷ್ಠಾಪಿತನಾದ ಶಿವನು ಭಕ್ತರ ಪಾಪ ಪುಂಜವನ್ನು ನಾಶÀ ಮಾಡುತ್ತಾ ಸರ್ವ ಕಾಲದಲ್ಲಿಯೂ ವಾಸಿಸುತ್ತಿರುವದು ಮತ್ತೂ ವಿಶೇಷ. ಬ್ರಹ್ಮರ್ಷಿಗಳಿಗೆ ಬೀಡಾದ ಬ್ರಹ್ಮಗಿರಿ, ಜೊತೆಯಲ್ಲಿ ಅಗ್ನಿಗಿರಿ, ಗಜರಾಜಗಿರಿಗಳ ಅಸ್ತಿತ್ವವೂ ಮಹತ್ವ ಪಡೆದಿದೆ. ಅದೇ ರೀತಿ ಪೂಜ್ಯನೂ ನಾಶ ರಹಿತನೂ ಆದ ವಿಷ್ಣುವೂ ಭಗಂಡ ಕ್ಷೇತ್ರದಲ್ಲಿ ಸನ್ನಿಹಿತನಾಗಿದ್ದಾನೆ. ಬಹು ಭಾಗ್ಯಶಾಲಿಯಾದ ಭಗಂಡ ಮಹಾ ಮುನಿಯು ತಪಗೈದ ಸ್ಥಳದಲ್ಲಿ ಸುರಾಧಿಪನೂ, ಮೋಕ್ಷದಾಯಕನೂ ಆದ ಸುಬ್ರಹ್ಮಣ್ಯನು ಭಗಂಡ ಮುನಿಗೆ ಅನುಗ್ರಹಿಸಿ ಅಲ್ಲಿಯೇ ನೆಲೆ ನಿಂತಿದ್ದಾನೆ. ಇದೇ ಪ್ರದೇಶದಲ್ಲಿ ಸುಜ್ಯೋತಿ, ಕನ್ನಿಕೆಯರೊಡನೆ ಕಾವೇರಿಯು ಸಂಗಮವಾಗಿದ್ದಾಳೆ. ಇಂತಹ ಪ್ರದೇಶವನ್ನು ಶಿವನು ಪಾರ್ವತಿಗೆ ಪ್ರತ್ಯಕ್ಷವಾಗಿ ತೋರಿಸಿದ್ದಾನೆ. ಕಾವೇರಿಯ ಎರಡೂ ದಡಗಳಲ್ಲಿ ಸಮಸ್ತ ದೇವತೆಗಳೂ, ಮುನಿಗಳೂ ತಮ್ಮ ನಿಜರೂಪವನ್ನು ಮರೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಮುಂದೆ ಸಾಗಿದಂತೆ ವಲಂಬುರಿ (ಬಲಮುರಿ) ಎಂಬ ಪುಣ್ಯ ಕ್ಷೇತ್ರವೂ ಇದೆ. ಭೂಮಂಡಲಕ್ಕೇ ತಿಲಕಪ್ರಾಯವಾಗಿರುವಂತಹ ಕಾವೇರಿಯ ಮೂಲ ಪುಣ್ಯ ಪ್ರದೇಶವು ಕಮಲದಂತಿರುವ ಭೂ ಚಕ್ರದಲ್ಲಿ ಯಾವ ಪ್ರದೇಶದಲ್ಲಿದೆ. ಆ ಪ್ರದೇಶದ ಹೆಸರೇನು ? ಆ ಹೆಸರು ಬರಲು ಹಿನ್ನೆಲೆಯೇನು? ಪೂರ್ವಾದಿ ದಿಕ್ಕುಗಳಲ್ಲಿ ಆ ಪ್ರದೇಶವು ಎಲ್ಲಿಯವರೆಗೆ ಹಬ್ಬಿದೆ? ಆ ಪ್ರದೇಶದ ಜನರ ರೂಪ ಹೇಗಿದೆ? ಯಾವ ಜಾತಿ ಜನಾಂಗಕ್ಕೆ ಸೇರಿದವರು? ಅಂತಹ ಪುಣ್ಯ ಪ್ರದೇಶದಲ್ಲಿ ಇನ್ನೇನೆಲ್ಲ ವಿಶೇಷತೆಗಳಿವೆ? ತಿಳಿಯಪಡಿಸು ಎಂದು ಶೌನಕಾದಿ ಮಹರ್ಷಿಗಳು ಅತೀ ಕುತೂಹಲದಿಂದ ಸರ್ವ ಪುರಾಣೇತಿಹಾಸಗಳನ್ನು ಚಾಚೂ ತಪ್ಪದೆ ಬಲ್ಲವನಾದ ಸೂತ ಪುರಾಣಿಕನಲ್ಲಿ ವಿವರವಾಗಿ ಪ್ರಶ್ನಿಸುತ್ತಾರೆ. ಋಷಿಗಳ ಈ ಕೋರಿಕೆಗೆÉ ಮನ್ನಣೆಯಿತ್ತು ರಹಸ್ಯವಾದ ಪುರಾಣ ವಿಷಯಗಳನ್ನು ತಿಳಿದಿರುವ ಸೂತ ಪುರಾಣಿಕನು ತ್ರಿಕಾಲ ಜ್ಞಾನಿಗಳಾದ ವ್ಯಾಸ ಮಹರ್ಷಿಗಳನ್ನು ಮನಸಾ ಧ್ಯಾನಿಸುತ್ತಾನೆ. ಬಳಿಕ ಪ್ರೀತಿಯಿಂದ ಕಾವೇರಿಯ ತವರೂರಿನ ಕತೆಯನ್ನು ಹೇಳಲು ಉಪಕ್ರಮಿಸುತ್ತಾನೆ.

‘ಎಲೈ ಋಷಿಗಳೇ, ಏಕಾಗ್ರ ಚಿತ್ತರಾಗಿ ನಾನು ಹೇಳುವದನ್ನು ಕೇಳುವಂತಹವರಾಗಿ. ಈ ಹಿಂದೆ ಇದೇ ವಿಚಾರದ ಕುರಿತು ದಾಲ್ಭ್ಯನೆಂಬ ಮುನಿಯು ಧರ್ಮವರ್ಮನೆಂಬ ರಾಜನಿಗೆ ವಿವರವಾಗಿ ಹೇಳಿದ್ದಾನೆ. ಅದನ್ನೇ ನಾನು ನಿಮಗೆ ತಿಳಿಸುವೆನು. ಇದನ್ನು ಕೇಳುವದರಿಂದ ಪಾಪವು ನಾಶವಾಗುವದು. ಅನೇಕ ಕ್ಷೇತ್ರಗಳಿಂದಲೂ, ನದಿಗಳಿಂದಲೂ ಕೂಡಿದ ಬ್ರಹ್ಮನಿಂದ ನಿರ್ಮಿತವಾದ ಭೂಮಂಡಲದ ಭಾಗವೊಂದರಲ್ಲಿ ಸದಾ ಭೂಮಿಯು ಗೋರೂಪವನ್ನು ತಾಳಿದ್ದಾಳೆ. ಅಲ್ಲಿ ದಶರಥ ಪುತ್ರ ಶ್ರೀರಾಮನು ಶಿವನನ್ನು ಸ್ಥಾಪಿಸಿದ್ದಾನೆ. ಅದೇ ರಾಮನಾಥಪುರ ಕ್ಷೇತ್ರÀ(ಈಗಿನ ಹಾಸನ ಜಿಲ್ಲೆಯಲ್ಲಿದೆ). ಈ ಕ್ಷೇತ್ರದ ಪಶ್ಚಿಮಕ್ಕೆ, ಪರಶುರಾಮಕ್ಷೇತ್ರಕ್ಕಿಂತ(ಈಗಿನ ದಕ್ಷಿಣ ಕನ್ನಡ) ಉತ್ತರ ಭಾಗದಲ್ಲ್ಲಿರುವ, ಪಶ್ಚಿಮ ಸಮುದ್ರಕ್ಕಿಂತ ಚತುರ್ಯೋಜನ ದೂರದ ಅನಂತರ ಪೂರ್ವಭಾಗದಲ್ಲಿರುವ ಅತಿ ಪವಿತ್ರವಾದ ಕಣ್ವಾಶ್ರಮಕ್ಕಿಂತ ದಕ್ಷಿಣ ದಿಕ್ಕಿನಲ್ಲಿರುವ ಅಂದರೆ, ಸಾರಾಂಶವಾಗಿ ಇವುಗಳ ಮಧ್ಯಭಾಗ ದಲ್ಲಿ ನೆಲೆನಿಂತಿರುವ ಪ್ರದೇಶವೇ ನೀವು ಹೇಳಿದ ಕಾವೇರಿಯ ಮೂಲ ಸ್ಥಳವಾಗಿದೆ. ಈ ಪ್ರದೇಶದ ಉದ್ದವು ಪೂರ್ವದಿಂದ ಪಶ್ಚಿಮಕ್ಕೆ ಆರು ಯೋಜನ ವಿಸ್ತೀರ್ಣವಿದೆ. ದಕ್ಷಿಣದಿಂದ ಉತ್ತರಕ್ಕೆ ಮೂರು ಯೋಜನ ಉದ್ದವಿದೆ. ಇಂತಹ ಪಾವನವಾದ ಪ್ರದೇಶಕ್ಕೆ ಭೂಲೋಕದಲ್ಲಿ ಸುಂದರವೂ ಪಾವನವೂ ಆದ ಮೂರು ಹೆಸರುಗಳಿವೆ. ಅವುಗಳ ಪೈಕಿ ಮೊದಲನೆ ಹೆಸರು ಬ್ರಹ್ಮಕ್ಷೇತ್ರ, ಎರಡನೆಯದು ಮಾತ್ಸ್ಯದೇಶ, ಮೂರನೆಯದು ಕ್ರೋಡ ದೇಶ (ಇದರಿಂದಲೇ ಕೊಡಗು ಎನ್ನುವ ಹೆಸರು ಬಂದಿದೆ) ಎಲೈ ಋಷಿಗಳೇ, ಆ ಪ್ರದೇಶದ ಈ ಮೂರು ಹೆಸರುಗಳನ್ನು ಕೇಳುವದರಿಂದ ಪಾಪ ಪರಿಹಾರವೂ, ಮನನದಿಂದ ಕಲ್ಯಾಣವೂ, ಕೀರ್ತನದಿಂದ ಮೋಕ್ಷವೂ ದೊರಕುತ್ತದೆ. ಸರ್ವರಿಗೂ ಕ್ಷೇಮವನ್ನುಂಟುಮಾಡುವ ಈ ಪ್ರಶ್ನಾಧ್ಯಾಯವನ್ನು ಕೇಳುವವರೂ ಪಠನ ಮಾಡುವವರೂ ಉತ್ತಮ ಗತಿಯನ್ನು ಹೊಂದುವರು.

ಶೌನಕಾದಿ ಋಷಿಗಳು ಕೇಳುತ್ತಾರೆ: ಕರುಣಾ ಸಮುದ್ರನಾದ ಸೂತ ಪುರಾಣಿಕನೇ, ದಯವಿಟ್ಟು ಆ ಪ್ರದೇಶಕ್ಕೆ ಈ ಹೆಸರುಗಳು ಬರಲು ಕಾರಣವೇನೆಂಬುದನ್ನು ವಿಸ್ತಾರ ವಾಗಿ ಹೇಳು, ಕಾತರರಾಗಿದ್ದೇವೆ. ಪುಣ್ಯಕರವಾದ ಕತೆಗಳನ್ನು ವರ್ಣಿಸುವದರಲ್ಲಿ ಆಸಕ್ತನಾಗಿರು ವಂತಹ ಸೂತನು ಎಲ್ಲ ಋಷಿ ಗಳನ್ನೂ ಸಂಬೋಧಿಸಿ ವಿವರಿಸು ತ್ತಾನೆ:-ಮೊದಲನೆಯ ಹೆಸರು ಬರಲು ಕಾರಣವೇನೆಂದು ಈಗ ತಿಳಿಸುತ್ತೇನೆ. ಕಾವೇರಿಯು ಭುವಿ ಗಿಳಿದು ಬಂದು ತೀರ್ಥರೂಪಿಣಿ ಯಾಗಿ ಹರಿಯುವ ಮುನ್ನವೇ ಬ್ರಹ್ಮನು ಭೂಮಿಗಿಳಿದು ಒಂದು ಪ್ರದಕ್ಷಿಣೆ ಹೊರಡುತ್ತಾನೆ. ದೇವಾಧೀಶನಾದ ಸಾಕ್ಷಾತ್ ಬ್ರಹ್ಮನು ಭೂಮಿಯಲ್ಲಿ ವಿಹರಣಾರ್ಥವಾಗಿ ಬರುತ್ತಾನೆ. ಆ ಸಂದರ್ಭ ಪ್ರಕಾಶಮಾನವಾದ ಗೈರಕಾದಿ ಧಾತುಗಳಿಂದ ಕೂಡಿರುವ, ಅನೇಕ ಉತ್ತಮ ಮರಗಳಿಂದ ದಟ್ಟವಾಗಿದ್ದ ಬ್ರಹ್ಮರ್ಷಿಗಳ ಗುಂಪಿನಿಂದ ವ್ಯಾಪ್ತವಾಗಿದ್ದ ಪರ್ವತಕ್ಕೆ ತೆರಳಿದನು.

ಧಾತೀಂದ್ರುಂ ಪ್ರಥಮಂ ದೃಷ್ಟ್ವಾ ಶಂಖ ಚಕ್ರ ಗದಾಧರಂ

ವಿಷ್ಣುಸ್ವರೂಪಮಾಲೋಕ್ಯ ಪುನರ್ಧಾತ್ರೀ ಸ್ವರೂಪಕಂ

ಆ ಗಿರಿಯಲ್ಲಿ ಬಗೆ ಬಗೆಯ ಮರಗಿಡಗಳನ್ನು ಕಂಡು ಸಂಚರಿಸುತ್ತಿದ್ದಾಗ ಒಂದು ವಿಚಿತ್ರ ಚಿತ್ರಣವನ್ನು ನೋಡಿ ಆಕರ್ಷಿತನಾದನು. ಸುಂದರವಾದ ಹಣ್ಣು ಗಳಿಂದ ನಿಬಿಡವಾಗಿದ್ದ ನೂರಾರು ಕೊಂಬೆಗಳಿದ್ದ ನೆಲ್ಲ್ಲಿ ಮರದ ರೂಪವನ್ನು ನೋಡಿದನು. ಆದರೆ ಕ್ಷಣಮಾತ್ರದಲ್ಲಿ ನೆಲ್ಲಿ ಮರದ ರೂಪದ ಬದಲು ಶಂಖ ಚಕ್ರ ಗದಾಧಾರಿಯಾದ ಮಹಾವಿಷ್ಣುವಿನ ಸ್ವರೂಪ ಕಣ್ಮುಂದೆ ನಿಂತಿತು. ಮತ್ತೊಮ್ಮೆ ದೃಷ್ಟಿಸಿದಾಗ ನೆಲ್ಲಿ ಮರದ ರೂಪವೇ ಗೋಚರವಾಗಿ ಬ್ರಹ್ಮನು ಈ ದೃಶ್ಯಗಳಿಂದ ಮೋಹಗೊಂಡನು. ಬಳಿಕ ಅಂತರ್ಮುಖನಾದ ಭಗವಾನ್ ಬ್ರಹ್ಮನು ಪರಾತ್ಪರನೂ, ಪೂಜ್ಯನೂ, ನಾಶರಹಿತನೂ ಆದ ವಿಷ್ಣುವೇ ಆ ನೆಲ್ಲಿ ಮರದಲ್ಲಿರುವನೆಂದು ಅರಿತುಕೊಂಡನು. ಬಳಿಕ ಗಂಧ ಪುಷ್ಪಾಕ್ಷತೆಗಳಿಂದಲೂ, ವನ್ಯ ಫಲಗಳಿಂದಲೂ, ಷೋಡಷೋಪಚಾರ ಸಹಿತವಾಗಿ ವಿಷ್ಣು ನೆಲೆ ನಿಂತ ಆ ನೆಲ್ಲಿ ಮರಕ್ಕೆ ಪೂಜೆ ಸಲ್ಲ್ಲಿಸಿದನು. ವಿರಜಾ ನದಿಯ ತೀರ್ಥದಿಂದ ತುಂಬಿದ ಕಮಂಡಲು ಜಲದಿಂದ ವಿಷ್ಣು ಸ್ವರೂಪಿಯಾದ ಆ ಮರಕ್ಕೆ ಭಕ್ತಿಯಿಂದ ಅಭಿಷೇಚಿಸಿದನು. ಆರಾಧನೆಗೈದು, ಪ್ರದಕ್ಷಿಣೆ ಮಾಡಿ ಬಾರಿ ಬಾರಿಗೂ ನಮಸ್ಕಾರ ಮಾಡಿದನು. ಆಗಿನ ಪುಣ್ಯ ಮುಹೂರ್ತ ಸಂದರ್ಭವೇ ಮಾತೆ ಕಾವೇರಿಯ ಆವೀರ್ಭಾವವಾಯಿತು. ಅಗಸ್ತ್ಯ ಮಹರ್ಷಿಯು ತನ್ನ ಕಮಂಡಲುವಿನಲ್ಲಿ ಜಲ ರೂಪಿಣಿಯಾಗಿ ಆಕೆಯನ್ನು ಶಿಷ್ಯರ ಬಳಿ ಇರಿಸಿದ್ದು ಕನ್ನಿಕೆಯಲ್ಲಿ ಸ್ನಾನಾದಿ ನಿತ್ಯ ಕರ್ಮಕ್ಕಾಗಿ ತೆರಳಿದ್ದರು. ಆಕೆ ವಿಷ್ಣು ಸ್ವರೂಪಿಯಾದ ಸ್ವತಃ ಬ್ರಹ್ಮನೇ ಪೂಜೆ ಮಾಡಿದ ಆ ಧಾತ್ರೀ ವೃಕ್ಷದ ಸಂಬಂಧದಿಂದ ಸಾಕ್ಷಾತ್ ಬ್ರಹ್ಮನ ಕಲಶದಿಂದ ಪರಿಶುದ್ಧವಾಗಿ ಪ್ರವÀಹಿಸುತ್ತಿದ್ದ ತೀರ್ಥಗಳೊಡಗೂಡಿ ಪಾವನೆಯಾದ ಕಾವೇರಿಯು ಅಗಸ್ತ್ಯನ ಕಲಶದಿಂದ ಜಲರೂಪಿಣಿಯಾಗಿ ಹೊರ ಹೊರಟಳು. ಅವಳು ಬ್ರಹ್ಮನ ಕಲಶದಿಂದ ಹರಿಯುತ್ತಿದ್ದ ಇತರ ತೀರ್ಥಗಳೊಡಗೂಡಿ ಜನರನ್ನು ಪವಿತ್ರೀಕರಿಸುತ್ತ ಸಮುದ್ರ ರಾಜನೆಡೆಗೆ ಸಾಗಿದಳು. ಆ ಸಂದರ್ಭ ಈ ದೃಶ್ಯವನ್ನು ನೋಡುತ್ತಿದ್ದ ಬ್ರಹ್ಮರ್ಷಿಗಳು ಆ ಮಹಾ ಆಶ್ಚರ್ಯಕರ ಘಟನಾವಳಿಗಳಿಗೆ ಸಾಕ್ಷಿ ಯಾದರು. ಅಲ್ಲದೆ ಸ್ವತಃ ದರ್ಶನಾನುಭವಗಳಿಂದ ವಿಸ್ಮಿತರಾದರು. ಈ ಪ್ರದೇಶದಲ್ಲಿ ಬ್ರಹ್ಮನ ಉಪಸ್ಥಿತಿಯಿದ್ದುದರಿಂದಲೂ, ಆತನೇ ಈ ಘಟನಾವಳಿಗಳನ್ನು ನೋಡಿದುದ್ದರಿಂದಲೂ, ತಾನೆ ಸ್ವತ: ವಿಷ್ಣುವಿನ ಪೂಜೆಗೈದಿದ್ದುದರಿಂದಲೂ, ಬ್ರಹ್ಮನು ತನ್ನ ಕಮಂಡುಲವಿನ ಜಲದಿಂದ ಆ ಪ್ರದೇಶವನ್ನು ನೆನೆಸಿದ್ದುದರಿಂದಲೂ ಬ್ರಹ್ಮನು ಆ ಪ್ರದೇಶದಲ್ಲಿ ಸಂಚರಿಸಿದ್ದುದರಿಂದಲೂ ಬ್ರಹ್ಮನ ಕಮಂಡಲುವಿನ ಜಲದೊಡನೆ ಕಾವೇರಿಯು ಸೇರಿ ಸಂಚರಿಸಿದ್ದುದ ರಿಂದಲೂ ಅತ್ಯದ್ಭುತ ಸನ್ನಿವೇಶ ಮೂಡಿತು. ಇಷ್ಟೇ ಅಲ್ಲದೆ, ಬ್ರಹ್ಮನಿಗೆ ಈ ಪ್ರದೇಶದಲ್ಲಿ ವಿಶೇಷ ಪ್ರೀತಿಯುಂಟಾದುದ ರಿಂದಲೂ ಈ ಪ್ರದೇಶವು ಬ್ರಹ್ಮರ್ಷಿಗಳಿಗೆ ಆಶ್ರಯ ಕಲ್ಪಿಸಿದ್ದುದ ರಿಂದಲೂ ಈ ನಾಡನ್ನು ಬ್ರಹ್ಮ ಕ್ಷೇತ್ರವೆಂದೂ, ಬೆಟ್ಟವನ್ನು ಬ್ರಹ್ಮಗಿರಿ ಯೆಂದೂ ಪರಿಗಣಿಸಿ ಸ್ವತಃ ಬ್ರಹ್ಮರ್ಷಿಗಳೇ ಅದೇ ರೀತಿಯ ಹೆಸರನ್ನಿಟ್ಟರು. ಈ ನಾಡಿಗೆ ಬ್ರಹ್ಮಕ್ಷೇತ್ರವೆಂದು ಹೆಸರು ಬರಲು ಕಾರಣವಾದ ಈ ಚರಿತ್ರೆಯು ಮೋಕ್ಷಪ್ರದವಾದುದು.

(ಕೃಪೆ ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೈ.

ಕನ್ನಡಕ್ಕೆ ಅನುವಾದಕರು : ದಿ.ಟಿ.ಪಿ. ನಾರಾಯಣಾಚಾರ್ಯರು)