ನಾಪೋಕ್ಲು, ಜು. 9: ಕೊಡಗಿನಲ್ಲಿ ಮುಂಗಾರು ಮಳೆಯ ಭೋರ್ಗರೆತದೊಂದಿಗೆ ಹಲವು ಜಲಪಾತಗಳು ಮನಸೆಳೆಯುತ್ತವೆ. ಅವುಗಳಲ್ಲಿ ಚೇಲಾವರ ಜಲಪಾತದ ಚೆಲುವು ಮನಮೋಹಕ. ಜಿಲ್ಲೆಯ ಚೆಯ್ಯಂಡಾಣೆ ನರಿಯಂದಡ ಗ್ರಾಮಪಂಚಾಯತಿ ವ್ಯಾಪ್ತಿಯ ಚೇಲಾವರ ಚೇಲಾವರ ಜಲಪಾತ ಮನಮೋಹಕ. ಬಂಡೆಗಲ್ಲುಗಳ ಮೇಲಿನಿಂದ ಧುಮ್ಮಿಕ್ಕುವ ಪ್ರಮುಖ ಜಲಪಾತ.
ಮಡಿಕೇರಿಯಿಂದ ಸುಮಾರು 50 ಕಿ.ಮೀ.ಅಂತರ ವಿರಾಜಪೇಟೆ ಯಿಂದ ಸುಮಾರು 26ಕಿ.ಮೀ. ದೂರದಲ್ಲಿರುವ ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 5 ಕಿ.ಮೀ. ದೂರಕ್ಕೆ ಸಾಗಿದರೆ ನಿಸರ್ಗದ ನಡುವಿನ ಅಪೂರ್ವ ಜಲಧಾರೆಗಳ ಸೊಬಗು ಸವಿಯಬಹುದು. ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ ಶ್ವೇತ ವೈಭವದಿಂದ ಕಂಗೊಳಿಸುತ್ತಿದೆ. ಎಚ್ಚರಿಕೆಯಿಂದ ಇದ್ದರೆ ಆರಾಮವಾಗಿ, ಸಂತೋಷದಿಂದ ಜಲಧಾರೆಯ ಸೊಬಗು ಸವಿಯಬಹುದು.
ಅದರೆ ಕೋವಿಡ್ 19 ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದ ಈ ಸಂದರ್ಭ ಸೊಗಸಾದ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಸಾಧ್ಯವಿಲ್ಲದಾಗಿದೆ.
ಚೇಲಾವರ ಜಲಪಾತಕ್ಕೆ ತೆರಳುವ ರಸ್ತೆಯಲ್ಲಿ ಸೂಚನಾಫಲಕಗಳ ಕೊರತೆಯಿದೆ. ಜಲಪಾತದ ಸಮೀಪ ಕಾಫಿ ತೋಟದ ಬದಿಯಲ್ಲಿ ಜಲಪಾತದೆಡೆಗೆ ತೆರಳಲು ಮೆಟ್ಟಿಲುಗಳಿಲ್ಲ. ನಿಧಾನವಾಗಿ ಕಾಲು ದಾರಿಯಲ್ಲಿ ಇಳಿಯಬೇಕು. ಜಿಲ್ಲಾಡಳಿತ ಒಂದಷ್ಟು ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ನೀರಿನಲ್ಲಿ ಚೆಲ್ಲಾಟವಾಡಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿದ್ದು ಚೆಲುವಿನ ಹಿಂದೆ ಕರಾಳ ಮುಖವೂ ಇದೆ ಎಂಬುದನ್ನು ಮರೆಯಬಾರದು.
- ದುಗ್ಗಳ ಸದಾನಂದ