ಗೋಣಿಕೊಪ್ಪಲು, ಜು. 9: ರೈತರ ಜಾನುವಾರುಗಳನ್ನು ಹುಲಿಯು ತಿಂದು ಹಾಕುತ್ತಿರುವ ಸಂದರ್ಭ ಅರಣ್ಯ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ಹತ್ತು ಸಾವಿರ ಪರಿಹಾರ ಸಾಕಾಗುವುದಿಲ್ಲ .ಇದನ್ನು ಗರಿಷ್ಠ ಪ್ರಮಾಣದಲ್ಲಿ ವಿತರಿಸುವಂತೆ ಒತ್ತಾಯಿಸಿ ರೈತ ಸಂಘ ಪ್ರತಿಭಟನೆ ನಡೆಸಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸುಳುಗೋಡುವಿನಲ್ಲಿ ದಿಗ್ಭಂದನಕ್ಕೆ ಒಳಪಡಿಸಿ, ಮುಂಜಾನೆಯಿಂದಲೇ ಪ್ರತಿಭಟನೆ ನಡೆಸಲಾಯಿತು.

ಕಳೆದ ಮೂರು ದಿನಗಳ ಹಿಂದೆ ಬಾಳೆಲೆ ಹೋಬಳಿಯ ಸುಳುಗೋಡು ಗ್ರಾಮದ ರೈತ ಮುದ್ದಿಯಡ ಅಣ್ಣು ನಂಜಪ್ಪ ಅವರ ಸಿಂದಿ ಹಸುವನ್ನು ಹುಲಿಯು ಎಳೆದೊಯ್ದು ಕೊಂದು ಹಾಕಿತ್ತು. ಈ ಸಂದರ್ಭ ಹಸು ಕಳೆದುಕೊಂಡ ರೈತನ ಕುಟುಂಬಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ರೈತ ಸಂಘದ ಮುಖಂಡರುಗಳಿಗೆ ಭರವಸೆ ನೀಡಿದ್ದರು.

ಆದರೆ ದಿನಗಳು ಕಳೆದರೂ ರೈತ ಕುಟುಂಬಕ್ಕೆ ಪರಿಹಾರ ತಲುಪಿಸುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲ ರಾಗಿದ್ದರು.ಈ ಧೋರಣೆಯನ್ನು ಖಂಡಿಸಿ ರೈತ ಸಂಘದ ಮುಖಂಡರು ಅನಿವಾರ್ಯವಾಗಿ ಗುರುವಾರ ಇಲಾಖೆಯ ಅಧಿಕಾರಿಗಳನ್ನು ದಿಗ್ಭಂದನಕ್ಕೆ ಒಳಪಡಿಸಿ ಪರಿಹಾರಕ್ಕೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿ ನೂರಾರು ಜಾನುವಾರುಗಳು ಹುಲಿಯ ಬಾಯಿಗೆ ಆಹಾರವಾಗಿವೆ.

ಹಲವಾರು ಬಾರಿ ಮನವಿ, ಪ್ರತಿಭಟನೆ ನಡೆಸಿ ಒತ್ತಾಯ ಮಾಡಲಾಗಿದೆ.ಆದರೆ ಹೆಚ್ಚಿನ ಪರಿಹಾರ ಇನ್ನೂ ಸಿಕ್ಕಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಸಿಗದೇ ಇದ್ದಲ್ಲಿ ಜಾನುವಾರುಗಳನ್ನು ನಂಬಿ ಬದುಕು ಸಾಗಿಸುವ ರೈತರು ಮುಂದೆ ಜೀವನ ಸಾಗಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಹೆಚ್ಚಿನ ಪರಿಹಾರ ನೀಡುವ ತನಕ ಪ್ರತಿಭಟನೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು.

ಘಟನಾ ಸ್ಥಳದಲ್ಲಿ ಕುಟ್ಟ ಸಿಪಿಐ ಪರಶಿವಮೂರ್ತಿ, ಗೋಣಿಕೊಪ್ಪ ಸಿಪಿಐ ರಾಮರೆಡ್ಡಿ, ಪೆÇನ್ನಂಪೇಟೆ ಎಸ್.ಐ.ಡಿ.ಕುಮಾರ್ ರೈತ ಮುಖಂಡರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರಾದರೂ ರೈತ ಮುಖಂಡರು ತಮ್ಮ ಪಟ್ಟು ಸಡಿಲಿಸಲಿಲ್ಲ.ನೀಡುವ ಗರಿಷ್ಠ ಪ್ರಮಾಣದ ಪರಿಹಾರದ ಮೊತ್ತವನ್ನು ಲಿಖಿತ ರೂಪದಲ್ಲಿ ನೀಡುವಂತೆ ಒತ್ತಾಯಿಸಿದರು. ಅರಣ್ಯ ಅಧಿಕಾರಿಗಳು ಲಿಖಿತ ರೂಪದಲ್ಲಿ ನೀಡಲು ಸಾದ್ಯವಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಇಬ್ಬರ ನಡುವಿನ ವಾಗ್ವಾದ ಸಂಜೆ 7.30 ಗಂಟೆಯವರೆಗೂ ನಡೆಯಿತು.

ಅಂತಿಮವಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಸಿ.ಸಿ.ಎಫ್.ಹೀರಲಾಲ್, ರೈತ ಸಂಘದ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದರು. ಕೂಡಲೇ ಪರಿಹಾರ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೇ ರೈತನ ಹಸುವಿನ ಕೊಟ್ಟಿಗೆಯನ್ನು ದುರಸ್ತಿ ಮಾಡಿಸಿ ಕೊಡುವ ಭರವಸೆ ನೀಡಿದರು.

ಹತ್ತು ದಿನಗಳ ಒಳಗೆ ರೈತರೊಂದಿಗೆ ಬಾಳೆಲೆ ಹೋಬಳಿಯಲ್ಲಿ ಅರಣ್ಯ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವ ಭರವಸೆ ಹಿನ್ನೆಲೆಯಲ್ಲಿ ಹೋರಾಟವನ್ನು ಕೈ ಬಿಡಲಾಯಿತು.ರೈತ ಮುಖಂಡರ ಸಮ್ಮುಖದಲ್ಲಿ ರೂ.20 ಸಾವಿರ ಪರಿಹಾರ ಚೆಕ್ ವಿತರಣೆ ಮಾಡಲಾಯಿತು.

ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ, ರೈತ ಮುಖಂಡರುಗಳಾದ ಚಪ್ಪುಡೀರ ರೋಷನ್, ಪುಚ್ಚಿಮಾಡ ಸಂತೋಷ್, ಪುಚ್ಚಿಮಾಡ ಅಶೋಕ್, ಕಳ್ಳಿಚಂಡ ರಕ್ಷಿತ್, ಚೆಟ್ಟಿಮಾಡ ಅಪ್ಪಣ್ಣ, ಕೊಂಗೆಂಗಡ ಮಂಜು, ಮಲ್ಲಂಡ ಪ್ರತಿಪ, ಕುಂದಾ ಗ್ರಾಮದ ಟಿ. ಪೂಣಚ್ಚ, ತೀತಮಾಡ ಗಣಪತಿ, ಮದ್ರಿರ ವಿಶು, ಮಲ್ಚಿರ ಗಿರೀಶ್, ತೀತರಮಾಡ ರಾಜ, ಮಾಯಮುಡಿಯ ಎಸ್.ಎಸ್. ಸುರೇಶ್, ಎಸ್.ಜಿ.ಮರಿಸ್ವಾಮಿ, ಅಜ್ಜಿಕುಟ್ಟೀರ ನಂಜಪ್ಪ ಅರಣ್ಯ ಇಲಾಖೆಯ ಅಧಿಕಾರಿಗಳಾದ ಮತ್ತಿಗೋಡು ವಲಯದ ಎಸಿಎಫ್ ಸತೀಶ್, ತಿತಿಮತಿ ಎ.ಸಿ.ಎಪ್. ಶ್ರೀಪತಿ, ಇಲಾಖೆಯ ಸಿಬ್ಬಂದಿಗಳಾದ ಕಿರಣ್ ಕುಮಾರ್, ಮುಂತಾದವರು ಹಾಜರಿದ್ದರು.