ಮಡಿಕೇರಿ, ಜು. 9: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನವು ತಾ. 13 ರಿಂದ ಒಂದು ವಾರಗಳ ಕಾಲ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ತಿಳಿಸಿದ್ದಾರೆ.

ಜಿಲ್ಲೆಯ ಆರು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದ್ದು, 6 ಮಂದಿ ಜಂಟಿ ಮೌಲ್ಯಮಾಪಕರು, 6 ಮಂದಿ ವ್ಯವಸ್ಥಾಪಕರು, 74 ಮಂದಿ ಮುಖ್ಯ ಮೌಲ್ಯಮಾಪಕರು ಸೇರಿದಂತೆ 650 ಮಂದಿ ಮೌಲ್ಯಮಾಪಕರನ್ನು ನಿಯೋಜಿಸಲಾಗಿದೆ. ಮೌಲ್ಯಮಾಪನ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮೋ ಸ್ಕ್ಯಾನ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಕೆಲವು ವಿನಾಯಿತಿ ಗಳನ್ನು ಸಹಾಯಕ ಮೌಲ್ಯಮಾಪಕರಿಗೆ ನೀಡಿದ್ದರೂ ಅದನ್ನು ನೆಪವಾಗಿಸದೆ, ಎಲ್ಲರೂ ಮೌಲ್ಯಮಾಪನ ಕಾರ್ಯದಲ್ಲಿ ಧೈರ್ಯವಾಗಿ ಭಾಗಿಯಾಗುವಂತೆ ಮಚ್ಚಡೊ ತಿಳಿಸಿದ್ದಾರೆ.

ಸಾವಿರಾರು ಮಕ್ಕಳಲ್ಲಿ ಧೈರ್ಯ ತುಂಬಿದ ಶಿಕ್ಷಕರು, ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಂಡು ಮಕ್ಕಳು ತೋರಿದ ಧೈರ್ಯಕ್ಕೆ, ವಿಶ್ವಾಸಕ್ಕೆ ಗೌರವ ತೋರಿಸಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವ ಸುರಕ್ಷತೆಗೆ ಆದ್ಯತೆ ನೀಡಿ ಮೌಲ್ಯಮಾಪನ ಕಾರ್ಯದಲ್ಲಿ ಅನುಪಾಲನೆಯೊಂದಿಗೆ ಪಾಲ್ಗೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.