ಮಡಿಕೇರಿ, ಜು. 10: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಮುಂದಿನ ತಾ. 18 ಹಾಗೂ 25ರ ಶನಿವಾರ ಮತ್ತು 19 ಹಾಗೂ 26ರ ಭಾನುವಾರ ಗಳಂದು ಸಂಪೂರ್ಣ ಲಾಕ್‍ಡೌನ್ ಮಾಡಲು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ತೀರ್ಮಾನ ಕೈಗೊಂಡಿದೆ.ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ನಗರದ ವರ್ತಕರು, ಸಾರ್ವಜನಿಕರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸ್ವ-ನಿರ್ಬಂಧಕ್ಕೊಳಗಾಗಿ ಸ್ವಯಂ ಲಾಕ್‍ಡೌನ್‍ನ್ನು ಪಾಲಿಸುತ್ತ ಚೇಂಬರ್‍ನ ಮನವಿಗೆ ಸಹಕರಿಸುವಂತೆ ನಗರ ಚೇಂಬರ್ ಅಧ್ಯಕ್ಷ ಎಂ. ಧನಂಜಯ, ಪ್ರಧಾನ ಕಾರ್ಯದರ್ಶಿ ಸಂತೋಷ್ ಅಣ್ವೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಲ್ಲದೆ ಮುಂದಿನ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ರಿಂದ ಸಂಜೆ 4 ಗಂಟೆವರೆಗೆ ವಹಿವಾಟು ನಡೆಯಲಿದೆ. ಸರಕಾರದ ಆದೇಶದಂತೆ ಪ್ರತಿನಿತ್ಯ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಕಫ್ರ್ಯೂ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಮೂರ್ನಾಡು - ವಾರಾಂತ್ಯ ಲಾಕ್‍ಡೌನ್
ಮೂರ್ನಾಡು: ಮೂರ್ನಾಡಿನ ಎಲ್ಲಾ ಸಂಘ-ಸಂಸ್ಥೆಗಳು ಮತ್ತು ಚೇಂಬರ್ ಆಫ್ ಕಾಮರ್ಸ್ ಮತ್ತು ಗ್ರಾಮ ಪಂಚಾಯಿತಿ ಮೂರ್ನಾಡು ಇದರ ಸಹಕಾರದೊಂದಿಗೆ ತಾ. 11 ರಿಂದ 26 ತಾರೀಖಿನವರೆಗೆ ಶನಿವಾರ ಮತ್ತು ಆದಿತ್ಯವಾರ ಸಂಪೂರ್ಣವಾಗಿ ವ್ಯಾಪಾರ ವಹಿವಾಟುಗಳು ಸ್ವಯಂಪ್ರೇರಿತರಾಗಿ ಬಂದ್ ಆಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ವ್ಯಾಪಾರ ವ್ಯವಹಾರ ನಡೆಯಲಿವೆ. ಈ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಚೇಂಬರ್ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು ತಿಳಿಸಿದ್ದಾರೆ.
ನಾಪೆÇೀಕ್ಲು ಸಂತೆ ಬಂದ್
ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಸೋಮವಾರದ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಅದನ್ನು ಇನ್ನೂ ಎರಡು ವಾರ ಮುಂದುವರಿಸಲು ನಾಪೆÇೀಕ್ಲು ವಲಯ ವರ್ತಕರ ಸಂಘ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸೋಮವಾರ ಒಂದು ದಿನ ಮಾತ್ರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಂಗಳವಾರದಿಂದ ಶನಿವಾರದವರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮಾತ್ರ ವ್ಯಾಪಾರ ಮತ್ತು ಖರೀದಿಗೆ ಅವಕಾಶವಿದೆ. ಭಾನುವಾರ ಸಂಪೂರ್ಣ ಪಟ್ಟಣ ಲಾಕ್‍ಡೌನ್ ಮಾಡಲಾ ಗುವದು. ಆ ದಿನ ಹಾಲು, ಪೇಪರ್ ಸೇರಿದಂತೆ ಅಗತ್ಯ ವಸ್ತುಗಳು ಮಾರಾಟ ಮಾತ್ರ ಮಾಡುವ ಬಗ್ಗೆ ನಿರ್ಧರಿಸಲಾಯಿತು.
ಸಭೆಯಲ್ಲಿ ವಲಯ ವರ್ತಕರ ಸಂಘದ ಅಧ್ಯಕ್ಷ ಬಿದ್ದಾಟಂಡ.ಎಸ್.ತಮ್ಮಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ವರ್ತಕರಾದ ಮಾಚೆಟ್ಟಿರ ಕುಶು ಕುಶಾಲಪ್ಪ, ಎಂ.ಎ.ಮನ್ಸೂರ್ ಅಲಿ, ಕೇಲೇಟಿರ ದೀಪು ದೇವಯ್ಯ, ಹರಿದಾಸ್, ಯೂನಿಸ್, ಮತ್ತಿತರರು ಇದ್ದರು.
(ಮೊದಲ ಪುಟದಿಂದ)
ಜೆಡಿಎಸ್ ಒತ್ತಾಯ
ಮಡಿಕೇರಿ : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಕೊರೊನಾ ಸಂಕ್ರಮಣ ತಡೆಗೆ ಮತ್ತೆ 14 ದಿನಗಳ ಲಾಕ್ ಡೌನ್ ಮಾಡುವಂತೆ ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಕೊರೊನಾ ಮಹಾಮಾರಿ ಜಿಲೆಯಲ್ಲಿ ವ್ಯಾಪಕವಾಗಿ ಪಸರಿಸದೆ ಇರುವ ಹಂತದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ಸುಮಾರು ಎರಡೂವರೆ ತಿಂಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಆದರೆ, ಇದೀಗ ಸೋಂಕು ವ್ಯಾಪಕವಾಗಿ ಹರಡುವ ಹಂತದಲ್ಲಿ ಸರ್ಕಾರಗಳು ಮೌನ ವಹಿಸಿರುವುದು ದುರಂತವೆಂದು ವಿಷಾದಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಕೊಡಗು ಜಿಲ್ಲೆಗೆ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರನ್ನು ಗಡಿ ಪ್ರದೇಶದಲ್ಲಿ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿ 14 ದಿನಗಳ ಕ್ವಾರಂಟೈನ್‍ಗೆ ಕಳುಹಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಟ 14 ದಿನಗಳ ಲಾಕ್ ಡೌನ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ವಾರಾಂತ್ಯದ ಲಾಕ್ ಡೌನ್‍ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಈ ದಿನಗಳಲ್ಲೂ ಮಾಂಸ, ತರಕಾರಿ, ದಿನಸಿ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿದೆ. ಹಾಗಿದ್ದ ಮೇಲೆ ಈ ಲಾಕ್ ಡೌನ್ ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಗಣೇಶ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಮಡಿಕೇರಿ ತಾಲೂಕು ಕಾರ್ಯದರ್ಶಿ ಜಗದೀಶ್, ಮಡಿಕೇರಿ ನಗರ ಕಾರ್ಯದರ್ಶಿ ಪ್ರವೀಣ್ ಹಾಗೂ ನಗರಸಭೆ ಮಾಜಿ ಸದಸ್ಯ ಅಶ್ರಫ್ ಉಪಸ್ಥಿತರಿದ್ದರು.
ಭಾಗಮಂಡಲ ಬಂದ್
ಭಾಗಮಂಡಲ : ಭಾಗಮಂಡಲ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಮತ್ತು ಭಾಗಮಂಡಲದ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ತಾ. 11 ರಿಂದ 10 ದಿನಗಳವರೆಗೆ ಎಲ್ಲಾ ವ್ಯಾಪಾರ ಮಳಿಗೆಗಳನ್ನು ಮಧ್ಯಾಹ್ನ 1 ಗಂಟೆಯಿಂದ ಮುಚ್ಚುವಂತೆ ತೀರ್ಮಾನಿಸಲಾಗಿದೆ. ಕೋವಿಡ್ -19 ಮಹಾಮಾರಿ ಕಾಯಿಲೆ ವ್ಯಾಪಾಕವಾಗಿ ಹರಡುತ್ತಿರುವ ಕಾರಣ ಸುರಕ್ಷತೆಗಾಗಿ ವರ್ತಕರು ಮತ್ತು ಸಾರ್ವಜನಿಕರು ಸಹಕರಿಸಬೇಕಾಗಿ ಸಂಘಟನೆಗಳು ಕೋರಿವೆ.