ಮಡಿಕೇರಿ, ಜು. 10: ಕೊಡಗಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕೊರೊನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಡಿಯಲ್ಲಿ ತಪಾಸಣೆ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಯಾವದೇ ಮುಲಾಜಿಲ್ಲದೆ ಅಗತ್ಯ ಕ್ರಮವನ್ನು ಕೈಗೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚಿಸಿದರು.

ಜಿಲ್ಲಾ ಪಂಚಾಯತ್ ಭವನದಲ್ಲಿಂದು ನಡೆದ ಕೊರೊನಾ ಸಂಬಂಧದ ಸಭೆಯಲ್ಲಿ ಶಾಸಕರುಗಳಾದ ಅಪ್ಪಚ್ಚುರಂಜನ್ ಕೊಡಗಿನಲ್ಲಿ ಕೊರೊನಾ ಹೆಚ್ಚಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರಂಭದಲ್ಲಿ ಅನುಸರಿಸಿದಂತೆ ಗಡಿಗೇಟ್‍ಗಳಲ್ಲಿ ಹೊರಗಿನಿಂದ ಬಂದವರನ್ನು ತಪಾಸಣೆಗೊಳಪಡಿಸಿ ಸೀಲ್ ಹಾಕಿ ಕ್ವಾರಂಟೈನ್‍ಗೆ ಒಳಪಡಿಸುವ ಕ್ರಮವನ್ನು ಪುನರ್ ಆರಂಭಿಸುವದು ಸೂಕ್ತ ಎಂದು ಸಲಹೆಯಿತ್ತರು.ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ವೀಣಾ ಅಚ್ಚಯ್ಯ ಕೂಡ ಇದಕ್ಕೆ ಧನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಕೊರೊನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಡಿಗೇಟ್‍ಗಳಲ್ಲಿ ಹೊರಭಾಗದಿಂದ ಬರುವವರ ತಪಾಸಣೆ ಕೈಗೊಳ್ಳುವ ಸಂಬಂಧ ನಾಲ್ಕೈದು ದಿನ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಗಡಿಗೇಟ್‍ಗಳಲ್ಲಿ ತಪಾಸಣೆ ಅನಿವಾರ್ಯವೆನಿಸಿದರೆ ಆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಚರ್ಚಿಸಿ ತೀರ್ಮಾನ ತೆಗೆದುಕೊಂಡು ತನ್ನ ಗಮನಕ್ಕೆ ತರುವಂತೆ ಹೇಳಿದರಲ್ಲದೆ, ಸರ್ಕಾರದ ಮಟ್ಟದಲ್ಲಿ ನಿಮ್ಮ ತೀರ್ಮಾನಕ್ಕೆ ತಾನು ಅನುಮೋದನೆ ಕೊಡಿಸುವದಾಗಿ ಭರವಸೆಯಿತ್ತರು.

77 ವರ್ಷದ ರೋಗಿಯೊಬ್ಬರನ್ನು ನಿನ್ನೆ ದಿನ ಇಲ್ಲಿ ಚಿಕಿತ್ಸೆ ನೀಡಲಾಗದು ಎಂದು ಬೇರೆಡೆಗೆ ಕಳುಹಿಸಲಾಗಿದೆ. ಪ್ರಸ್ತುತದ ಸಂಕಷ್ಟದ ಸಂದರ್ಭದಲ್ಲಿ ಇದೆಷ್ಟು ಸರಿ ಎಂದು ಶಾಸಕ ಬೋಪಯ್ಯ ಪ್ರಶ್ನಿಸಿದರಲ್ಲದೆ, ಈ ಕ್ರಮ ಸರಿಯಲ್ಲ ಎಂದರು. ಈ ಬಗ್ಗೆ ಮಾತನಾಡಿದ ಸಚಿವ ಸೋಮಣ್ಣ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಕಡ್ಡಾಯವಾಗಿ ದಾಖಲು ಮಾಡಬೇಕು. ಯಾವದೇ ಕಾರಣಕ್ಕೂ ಬೇರೆಡೆಗಳಿಗೆ ಕಳುಹಿಸಬಾರದು ಎಂದು ಸೂಚಿಸಿದರು.

ಹೊರಗಿನಿಂದ ಬಂದವರ ಪತ್ತೆ ಕಾರ್ಯಕ್ಕಾಗಿ ಪ್ರತಿ ಪಂಚಾಯಿತಿಗೂ ವಾಹನ ಸೌಕರ್ಯ ನೀಡಬೇಕು. ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯ ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸೇರಿಸಿಕೊಂಡು ಜಿಲ್ಲಾಡಳಿತ ಕಾರ್ಯ ನಿರ್ವಹಿಸುವಂತಾಗಬೇಕೆಂದು ಬೋಪಯ್ಯ ಸಲಹೆಯಿತ್ತರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ ರಾಗುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡ ಲಾಗಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಿಂದಾಗಿ ಜಿಲ್ಲಾಮಟ್ಟದಲ್ಲಿ ಕೆಲಸ ಕಾರ್ಯಗಳು ವಿಳಂಬವಾಗುವ ಸಾಧ್ಯತೆಯಿದೆ. ಅಲ್ಲದೆ ಕೇಂದ್ರ ಸ್ಥಾನದಲ್ಲಿರುವ ಅಧಿಕಾರಿಗಳನ್ನು ದೂರ ದೂರದ ಪಂಚಾಯಿತಿ ಗಳಿಗೆ ನಿಯೋಜಿಸಲಾಗಿದ್ದು, ಇದನ್ನು ಸರಿಪಡಿಸುವಂತಾಗಬೇಕೆಂದು ಶಾಸಕ ಬೋಪಯ್ಯ ಹೇಳಿದರು. (ಮೊದಲ ಪುಟದಿಂದ) ಈ ಸಂಬಂಧ ಜಿ.ಪಂ. ಅಧ್ಯಕ್ಷರು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಸಚಿವ ಸೋಮಣ್ಣ ಜಿಲ್ಲಾಧಿಕಾರಿಗೆ ಸೂಚಿಸಿದರು.

ಕೋವಿಡ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಶಾಸಕ ರಂಜನ್ ಹೇಳಿದರು. ಶಾಸಕಿ ವೀಣಾ ಅಚ್ಚಯ್ಯ ಮಾತನಾಡಿ, ಪ್ರಕೃತಿ ವಿಕೋಪದಿಂದ ಮನೆಕಳೆದುಕೊಂಡು ಇನ್ನೂ ಮನೆ ಸಿಗದ ನಿರಾಶ್ರಿತರಿಗೆ ಕೂಡಲೇ ಮನೆಗಳನ್ನು ವಿತರಿಸುವಂತಾಗಬೇಕೆಂದರು. ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಕೋವಿಡ್ ಪರೀಕ್ಷಾ ವರದಿಯು ಆದಷ್ಟು ಶೀಘ್ರ ದೊರೆಯುವಂತಾಗಬೇಕು ಎಂದು ಅಭಿಪ್ರಾಯಿಸಿದರು. ಮಳೆಗಾಲವನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಸಚಿವ ಸೋಮಣ್ಣ, ಮಳೆಗಾಲದಲ್ಲಿ ಯಾವದೇ ಸಮಸ್ಯೆಗಳಾದರೂ ಅದನ್ನು ಪರಿಹರಿಸುವಲ್ಲಿ ಸರ್ಕಾರದಿಂದ ಅಗತ್ಯ ನೆರವುಕೊಡಿಸುವದಾಗಿ ಭರವಸೆಯಿತ್ತರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಇದ್ದರು.