ಗೋಣಿಕೊಪ್ಪ ವರದಿ, ಜು. 8 : ಕೃಷಿಪಂಡಿತ, ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ ಯಾಂತ್ರೀಕೃತ ನಾಟಿ ಬಗ್ಗೆ ಕೊಂಗಾಣ ಗ್ರಾಮದಲ್ಲಿ ಬುಧವಾರ ಜಾಗೃತಿ ಮೂಡಿಸಿದರು.
ಅಲ್ಲಿನ ಮನೆಯಪಂಡ ದೇವಿಕ ಚಿಟ್ಯಪ್ಪ ರಾವ್ ಅವರ ಗದ್ದೆಯಲ್ಲಿ ಭತ್ತ ಕೃಷಿಯಲ್ಲಿ ಮ್ಯಾಟ್ ಪದ್ಧತಿಯ ಬಿತ್ತನೆ ಕಾರ್ಯ ಆರಂಭಿಸಿದ್ದ ಅವರು ಇಂದು ನಾಟಿ ಕಾರ್ಯದ ಮೂಲಕ ಸ್ಥಳೀಯರಿಗೆ ಪ್ರಾತ್ಯಕ್ಷಿಕೆ ನೀಡಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜು ಜಾರ್ಜ್ ಪಾಲ್ಗೊಂಡಿದ್ದರು. ವಿಜ್ಞಾನಿ ಡಾ. ವೀರೇಂದ್ರಕುಮಾರ್, ಕೆವಿಕೆ ಕೃಷಿ ಹವಾಮಾನ ಘಟಕ ವೀಕ್ಷಕ ಸಣ್ಣುವಂಡ ಕೆ. ಚಂಗಪ್ಪ, ಗ್ರಾಮದ ಕೃಷಿಕರು, ಕೃಷಿ ಕಾರ್ಮಿಕರು ಪಾಲ್ಗೊಂಡು, ನಾಟಿಯಲ್ಲಿನ ಸುಲಭ ವಿಧಾನ ಅರಿತುಕೊಂಡರು. ಸುಮಾರು 5 ಎಕರೆ ಗದ್ದೆಯಲ್ಲಿ ನಾಟಿ ಮಾಡಲಾಯಿತು. ಈ ಸಂದರ್ಭ ಮಾಹಿತಿ ನೀಡಿದ ಸೋಮೇಂಗಡ ತಿಮ್ಮಯ್ಯ, ಬಿತ್ತನೆ ನಂತರ 17 ದಿನಗಳಲ್ಲಿ ನಾಟಿ ಕಾರ್ಯ ನಡೆಸಲಾಗುತ್ತಿದೆ.
ಪೈರು ಕೀಳುವ ಸಂದರ್ಭ ಸಸಿ ತುಂಡಾಗಿ ನಷ್ಟವೇ ಹೆಚ್ಚಾಗುತ್ತದೆ. ಹಿಂದಿನ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಸಿಮಡಿ ತಯಾರಿಸಲು ಎಕರೆಯೊಂದಕ್ಕೆ 50 ಕೆ.ಜಿ. ಬಿತ್ತನೆ ಬೀಜ ಬೇಕಾಗುತ್ತದೆ. ಆದರೆ ಈ ಪದ್ಧತಿಯಿಂದ 15 ರಿಂದ 20 ಕೆ. ಜಿ. ಬಿತ್ತನೆ ಬೀಜ ಸಾಕಾಗುತ್ತದೆ. ಬಿತ್ತನೆ ಬೀಜ ಲಾಭ, ಸಮಯ ವ್ಯರ್ಥವಾಗುವುದಿಲ್ಲ. ಹೆಚ್ಚು ಇಳುವರಿಗೆ ಸಹಕಾರಿ ಎಂದರು. ಮಾಸ್ಕ್ ಹಾಕಿಕೊಂಡು ಕೃಷಿ ಚಟುವಟಿಕೆ ನಡೆಸಲಾಯಿತು.