*ಗೋಣಿಕೊಪ್ಪಲು, ಜು. 8: ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗಿರುತ್ತಿರುವ ಹಿನ್ನೆಲೆಯಲ್ಲಿ ತಿತಿಮತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಕರೆ ನೀಡಿರುವುದರಿಂದ ಸ್ಥಳೀಯರು ವಾಹನಗಳ ಓಡಾಟಕ್ಕೆ ಅಡ್ಡಿ ಪಡಿಸಿದ ಪ್ರಸಂಗ ಎದುರಾಯಿತು.
ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು, ಅಳ್ಳೂರು, ಪಂಚವಳ್ಳಿ ಮೊದಲಾದ ಕಡೆಯಿಂದ ಬಾಡಿಗೆ ವಾಹನ ಚಾಲಕರು ಕಾರ್ಮಿಕರನ್ನು ಕಾಫಿ ತೋಟಕ್ಕೆ ಕರೆ ತರುತ್ತಿದ್ದರು. ಈ ವಾಹನಗಳನ್ನು ತಡೆಗಟ್ಟಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್, ಮುಖಂಡ ಅನೂಪ್, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಅವುಗಳನ್ನು ಹಿಂದಕ್ಕೆ ಕಳುಸಿದರು.
ಕೊಡಗಿಗೆ ಕೂಲಿಕೆಲಸಕ್ಕೆಂದು ಬೆಳಿಗ್ಗೆ ಬಂದು ಮತ್ತೆ ಮರಳಿ ಸಂಜೆ ಊರಿಗೆ ತೆರಳುವ ಕಾರ್ಮಿಕರಿಗೆ ಅನಾನುಕೂಲವಾಯಿತು. ಕೂಲಿ ಕೆಲಸವಿಲ್ಲದೆ ಕೆಲವು ಕಾರ್ಮಿಕರು ಬಾಡಿದ ಮುಖದಲ್ಲಿ ಮರಳಿದರು.
ಸೀಲ್ ಡೌನ್ ನಿವಾಸಿಗಳ ಬವಣೆ
ತಾಲೂಕು ಆರೋಗ್ಯಾಧಿಕಾರಿಗೆ ಮಂಗಳವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ನೇತಾಜಿ ಬಡಾವಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಇಲ್ಲಿನ ನಿವಾಸಿಗಳು ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುವುದಕ್ಕೆ ಬವಣೆ ಅನುಭವಿಸುವಂತಾಗಿದೆ.
ಸೀಲ್ ಡೌನ್ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ಯಾರೂ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ಹಾಲು, ಔಷಧಿ ಮತ್ತಿತರ ಅಗತ್ಯವಸ್ತುಗಳನ್ನು ತಂದು ಕೊಡುವುದಕ್ಕೆ ಆಶಾ ಕಾರ್ಯಕರ್ತೆ ಯರಾಗಲಿ, ಕಂದಾಯ ಇಲಾಖೆಯ ಅಧಿಕಾರಿಗಳಾಗಿ ಸುಳಿದು ನೋಡುತ್ತಿಲ್ಲ ಎಂದು ಸೀಲ್ ಡೌನ್ ನಿವಾಸಿಗಳು ನೋವು ತೋಡಿಕೊಂಡಿದ್ದಾರೆ.
ಇತ್ತ ಆಶಾ ಕಾರ್ಯಕರ್ತೆಯರಿಗೂ ಯಾವುದೇ ಬಗೆಯ ರಕ್ಷಣಾ ಕವಚಗಳನ್ನು ನೀಡದೆ ಇರುವುದರಿಂದ ಸೀಲ್ ಡೌನ್ ಪ್ರದೇಶದತ್ತ ತೆರಳಲು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
- ಎನ್.ಎನ್. ದಿನೇಶ್