ವೀರಾಜಪೇಟೆ, ಜು. 8: ಮಡಿಕೇರಿಯ ಕೋಟೆ ಹಾಗೂ ಅರಮನೆ ಕಟ್ಟಡ ಶಿಥಿಲಗೊಂಡಿದ್ದು ಇದನ್ನು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ರಕ್ಷಿಸಿ ಶೀಘ್ರದಲ್ಲಿಯೇ ದುರಸ್ತಿಯನ್ನು ಪೂರ್ಣಗೊಳಿಸಬೇಕು, ಪುರಾತನ ಕೋಟೆ, ಅರಮನೆ ಕಟ್ಟಡಕ್ಕೆ ದುರಸ್ತಿಯ ಕಾಮಗಾರಿಯಲ್ಲಿ ಉಂಟಾಗಿರುವ ಕುಂದು ಕೊರತೆ, ಕಾಮಗಾರಿ ವಿಳಂಬದ ಕುರಿತು ತಾ:15ರಂದು ವಿವಾದಕ್ಕೆ ಸಂಬಂಧಿಸಿದ ರಿಟ್ ಅರ್ಜಿದಾರರಾದ ಜೆ.ಎಸ್. ವಿರೂಪಾಕ್ಷಯ್ಯ ನ್ಯಾಯಾಲಯಕ್ಕೆ ವಿವರವಾದ ಪ್ರಮಾಣ ಪತ್ರ ಸಲ್ಲಿಸುವಂತೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಭಯ ಶ್ರೀನಿವಾಸ್ ಓಕ ಹಾಗೂ ನ್ಯಾಯಮೂರ್ತಿ ನಾಗ ಪ್ರಸನ್ನ ಅವರ ವಿಭಾಗೀಯ ಪೀಠ ಆದೇಶಿಸಿದೆ.

ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ಇಂದು ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ರಾಜ್ಯ ಸರಕಾರ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಮಡಿಕೇರಿ ಕೋಟೆ ಹಾಗೂ ಅರಮನೆಯನ್ನು ಸ್ಮಾರಕವಾಗಿ ರಕ್ಷಿಸಲು ಶಿಥಿಲಗೊಂಡಿರುವ ಕಟ್ಟಡಗಳ ದುರಸ್ತಿ ಕಾಮಗಾರಿಗಾಗಿ ರೂ ಎಂಟು ಕೋಟಿ ಇಪ್ಪತ್ತು ಲಕ್ಷವನ್ನು ಬಿಡುಗಡೆ ಮಾಡಿದ್ದರೂ ಪುರಾತತ್ವ ಇಲಾಖೆಯ ನಿರ್ಲಕ್ಷ್ಯತೆಯಿಂದ ದುರಸ್ತಿ ಕಾಮಗಾರಿ ಆರಂಭಗೊಂಡು ರೂ 53 ಲಕ್ಷ ವೆಚ್ಚವಾದರೂ ಇನ್ನು ಶೇಕಡ 40ರಷ್ಟು ಕಾಮಗಾರಿ ಪ್ರಗತಿ ಸಾಧಿಸಿಲ್ಲ. ಪುರಾತತ್ವ ಇಲಾಖೆ ಅರಮನೆಯ ಹಂಚಿನ ಮಾಡು ತೆಗೆದು ಬಾಳಿಕೆ ಬಾರದ ತಗಡಿನ ಶೀಟುಗಳನ್ನು ಹಾಕಲಾಗಿದೆ. ಮಾಡಿನ ಕೆಳಗೆ ಕವಕೋಲಿನ ಜಾಗದಲ್ಲಿ ಕಡಿಮೆ ಬೆಲೆಯ ನೀಲಗಿರಿ ಮರವನ್ನು ಬಳಸಲಾಗಿದೆ. ಈ ರೀತಿ ಇಲಾಖೆ ಗುಣಮಟ್ಟ ಇಲ್ಲದ ಕಾವiಗಾರಿಯನ್ನು ಮುಂದುವರೆಸಿದರೆ ಕೋಟೆ, ಅರಮನೆಯ ರಕ್ಷಣೆ ಅಸಾಧ್ಯ., ಜುಲೈ 1ರಂದು ಅರ್ಜಿದಾರರು, ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದು ಅಧಿಕಾರಿಗಳು ಅರಮನೆ ರಕ್ಷಣೆಗೆ ಸಂಬಂಧಿಸಿದಂತೆ ವಿವರವಾದ ವರದಿ ತಯಾರಿಸಿ ನ್ಯಾಯಾಲದ ಮುಂದೆ ಮಂಡಿಸಬೇಕೆಂದೂ ರಿಟ್ ಅರ್ಜಿದಾರರ ಪರ ವಕೀಲರಾದ ಎನ್.ರವೀಂದ್ರನಾಥ್ ಕಾಮತ್ ಅವರು ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದರು.

ಸರಕಾರದ ಪರ ವಾದ ಮಂಡಿಸಿದ ಸರಕಾರಿ ವಕೀಲರು ಕೋಟೆ ಅರಮನೆಯ ಜಂಟಿ ಸಮೀಕ್ಷೆಯ ವರದಿ, ದುರಸ್ತಿಯಾಗುತ್ತಿರುವ ಕಟ್ಟಡದ ತಗಡಿನ ಹಾಳೆ ಹೊದಿಸಿರುವ ಭಾವ ಚಿತ್ರಗಳನ್ನು ವಿಭಾಗೀಯ ಪೀಠದ ಮುಂದೆ ಹಾಜರು ಪಡಿಸಿದರು. ಇದನ್ನು ಪರಿಶೀಲಿಸಿದ ವಿಭಾಗೀಯ ಪೀಠ, ಕೋಟೆ, ಅರಮನೆ ರಕ್ಷಣೆಗೆ ಆರು ತಿಂಗಳ ಹಿಂದೆ ಸರಕಾರದಿಂದ ಹಣ ಬಿಡುಗಡೆಗೊಂಡರೂ ಅರಮನೆಯ ದುರಸ್ತಿ ಕಾಮಗಾರಿಯ ವಿಳಂಬ, ಇಲಾಖೆಯ ನಿರ್ಲಕ್ಷ್ಯತೆಯ ಕುರಿತು ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತಪಡಿಸಿ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿದರು.

ಸರಕಾರದ ಪರ ವಿಜಯಕುಮಾರ್ ಪಾಟೀಲ್ ಹಾಗೂ ಪುರಾತತ್ವ ಇಲಾಖೆಯ ಪರ ನಾಗಶ್ರೀ ವಾದಮಂಡಿಸಿದರು.