ಗೋಣಿಕೊಪ್ಪ ವರದಿ, ಜು. 8 : ಕೊರೊನಾ ಹರಡುವಿಕೆ ನಿಯಂತ್ರಿಸಲು ದಕ್ಷಿಣ ಕೊಡಗಿನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೆ ನೀಡಿದ್ದ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗೋಣಿಕೊಪ್ಪ ಸಮೀಪದ ಅರ್ವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ವ್ಯಾಪಾರ ಎಂದಿನಂತೆ ನಡೆಯಿತು.

ಗೋಣಿಕೊಪ್ಪ, ತಿತಿಮತಿ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಎಲ್ಲಾ ವರ್ತಕರು ಅಂಗಡಿ-ಮುಂಗಟ್ಟು ಮುಚ್ಚಿ ಸಹಕಾರ ನೀಡಿದರು. ಪರಿಣಾಮ ಹೆಚ್ಚಿನ ವಾಹನ ಓಡಾಟ ಕೂಡ ಇರಲಿಲ್ಲ. ಹೊರ ಗ್ರಾಮ, ಹೊರ ಜಿಲ್ಲೆಗೆ ತೆರಳುವವರು ಮಾತ್ರ ಕಂಡು ಬಂದರು.

ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯ ರಸ್ತೆಗೆ ಒಳಪಡುವ ಅರ್ವತೊಕ್ಲು ಗ್ರಾಮ ಪಂಚಾಯಿತಿ ಅಂಗಡಿ ಮುಚ್ಚಲು ನಿರ್ಧರಿಸಿರಲಿಲ್ಲ. ಇದು ಸಾರ್ವಜನಿಕ ಟೀಕೆಗೆ ಒಳಗಾಯಿತು. ವ್ಯಾಪಾರ ಕೂಡ ಎಂದಿನಂತೆ ನಡೆಯಿತು. ನೆರೆ ಗ್ರಾಮ ಪಂಚಾಯಿತಿ ತೆಗೆದುಕೊಂಡ ನಿರ್ಣಯಕ್ಕೆ ಅರ್ವತೊಕ್ಲು ಗ್ರಾಮ ಪಂಚಾಯಿತಿ ಕೂಡ ಸಹಕರಿಸಬಹುದಿತ್ತು. ಅಂಗಡಿ ಮುಚ್ಚದೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಅಕ್ಷೇಪ ವ್ಯಕ್ತವಾಯಿತು.

ಬಾಳೆಲೆಯಲ್ಲಿ ಸ್ವಯಂ ಘೋಷಿತ ವ್ಯಾಪಾರ ಸ್ಥಗಿತಕ್ಕೆ ಉತ್ತಮ ಬೆಂಬಲ ಕೂಡ ವ್ಯಕ್ತವಾಯಿತು. ಬುಧವಾರ ಮತ್ತೆ ಗ್ರಾಮಸ್ಥರು ಸಭೆ ನಡೆಸಿ ತಾ. 25 ರವರೆಗೆ ದಿನ 7 ಗಂಟೆ ವ್ಯಾಪಾರ ನಡೆಸಲು ನಿರ್ಣಯ ತೆಗೆದುಕೊಂಡರು. ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ವ್ಯಾಪಾರಿಗಳು, ಸಾರ್ವಜನಿಕರು ಪಾಲ್ಗೊಂಡು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಲಾಗಿದೆ ಎಂದು ಜಿ. ಪಂ. ಸದಸ್ಯ ಬಾನಂಡ ಪ್ರಥ್ಯು ಮಾಹಿತಿ ನೀಡಿದ್ದಾರೆ.