ಸುಂಟಿಕೊಪ್ಪ, ಜು. 8: ಹೊರೂರು ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದ ಸಂದರ್ಭ ಕಾರ್ಮಿಕನೋರ್ವ ಚರಂಡಿಯೊಳಗೆ ಬಿದ್ದು ಪ್ರಾಣ ಉಳಿಸಿಕೊಂಡಿರುವ ಘಟನೆಯೊಂದು ವರದಿಯಾಗಿದೆ.
ಸುಂಟಿಕೊಪ್ಪ ವ್ಯಾಪ್ತಿಯ ಹೊರೂರು ಗ್ರೀನ್ ಲ್ಯಾಂಡ್ (ಎ) ತೋಟದಲ್ಲಿ ತಾ.7 ರಂದು ಸಂಜೆ 5.30ರ ಸಮಯದಲ್ಲಿ ಕಾರ್ಮಿಕ ಸುಬ್ರಾಯ (55) ಎಂಬವರು ಕೆಲಸ ಮುಗಿಸಿ ಲೈನ್ ಮನೆಗೆ ನಡೆದು ಕೊಂಡು ಬರುತ್ತಿದ್ದಾಗ ದಿಢೀರಾಗಿ ಕಾಡಾನೆಯೊಂದು ಎದುರಾಗಿದೆ. ಮಳೆಯಿದ್ದ ಕಾರಣ ಕೊಡೆ ಹಿಡಿದಿದ್ದ ಸುಬ್ರಾಯ ಅವರಿಗೆ ತೋಟದ ನಡುವೆ ಆನೆ ಇರುವುದು ಅರಿವಿಗೆ ಬರಲಿಲ್ಲ. ಏಕಾಏಕಿ ಕಾಡಾನೆ ಸುಬ್ರಾಯ ಅವರ ಮೇಲೆ ಎರಗಿದೆ. ಇದರಿಂದ ಅವರು ಹಾದಿ ಬದಿಯ ಚರಂಡಿಯೊಳಗೆ ಬಿದ್ದಿದ್ದಾರೆ. ಚರಂಡಿಯೊಳಗೆ ಕಾಲಿಡಲಾಗದ ಕಾಡಾನೆ ಕಾರ್ಮಿಕನನ್ನು ತುಳಿಯಲಾಗದೇ ಅಲ್ಲಿಂದ ಹೊರಟು ಹೋಗಿದೆ.