ಸಿದ್ದಾಪುರ, ಜು. 7 : ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಹುಂಡಿ ಗ್ರಾಮದಲ್ಲಿ ಬೆಂಗಳೂರಿನಿಂದ ಆಗಮಿಸಿದ ವ್ಯಕ್ತಿಯೋರ್ವನಿಗೆ ಹಾಗೂ ಆತನ ಕುಟುಂಬದವರಿಗೆ ಕೊರೊನಾ ವೈರಸ್ ಪತ್ತೆಯಾಯಿತು. ಈ ಹಿನ್ನೆಲೆ ಹುಂಡಿ ಗ್ರಾಮದಲ್ಲಿ ಸೀಲ್‍ಡೌನ್ ಮಾಡಲಾಗಿತ್ತು. ಆ ಭಾಗದ ಸುಮಾರು 65 ಕುಟುಂಬಗಳು ಮನೆಯಿಂದ ಹೊರಬರದಂತೆ ಗ್ರಾ.ಪಂ.ಯಿಂದ ಸೂಚನೆ ನೀಡಲಾಗಿತ್ತು. ಈ ವಿಚಾರ ತಿಳಿದ ಹುಂಡಿ ಗ್ರಾಮದ ನಿವಾಸಿ ಕುವೈತ್‍ನಲ್ಲಿ ಉದ್ಯೋಗದಲ್ಲಿರುವ ಇಸ್ಮಾಯಿಲ್ (ಬಾವ) ಅಗತ್ಯ ಆಹಾರ ಕಿಟ್‍ಗಳನ್ನು ಹುಂಡಿಯ ನಿವಾಸಿಗಳ ಮುಖಾಂತರ ವಿತರಿಸಿ ಮಾನವೀಯತೆ ಮೆರೆದರು. ಎಲ್ಲಾ ಕುಟುಂಬಗಳಿಗೂ ಆಹಾರ ಪದಾರ್ಥ ನೀಡುವಲ್ಲಿ ಇಸ್ಮಾಯಿಲ್ ಗೆಳೆಯರು ಯಶಸ್ವಿಯಾದರು.ಕೂಡಿಗೆ : ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಹುಟ್ಟುಹಬ್ಬವನ್ನು ತಾಲೂಕು ಬಿ.ಜೆ.ಪಿ. ಘಟಕದ ವತಿಯಿಂದ ಕೂಡಿಗೆ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಚರಣೆ ಮಾಡಲಾಯಿತು. ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿರುವವರಿಗೆ ದಿನೋಪಯೋಗಿ ವಸ್ತುಗಳನ್ನು ಮತ್ತು ಬಟ್ಟೆಗಳನ್ನು ವಿತರಣೆ ಮಾಡಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ಮನು ರೈ, ಎಂ.ಎನ್. ಚಂದ್ರಮೋಹನ್ ನೇತೃತ್ವದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್. ಮಂಜುಳಾ, ತಾಲೂಕು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೌತಮ್, ಖಜಾಂಚಿ ಪ್ರಜಾ, ಶರತ್, ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಮನು, ಬಿಜೆಪಿ ಮಂಡಲ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಯುವ ಮೋರ್ಚಾದ ಉಪಾಧ್ಯಕ್ಷ ಕೆ.ಎಂ. ಚಂದ್ರ ಮೂಡ್ಲಿಗೌಡ, ಕೆ.ಕೆ. ನಾಗರಾಜ ಶೆಟ್ಟಿ, ಬಸವನತ್ತೂರು ಬಿಜೆಪಿ ಬೂತ್ ಅಧ್ಯಕ್ಷ ಅರ್.ಕೆ. ಕೃಷ್ಣ, ಕೂಡಿಗೆ ಬೂತ್ ಅಧ್ಯಕ್ಷ ಕೇಶವ ರೈ, ಪ್ರಮುಖರಾದ ಪ್ರಶಾಂತ, ಲೋಕೇಶ್, ಧರ್ಮಣ್ಣ ಚಂದ್ರು ಇದ್ದರು.ಆಲೂರು-ಸಿದ್ದಾಪುರ : ಶನಿವಾರಸಂತೆ ಪಟ್ಟಣದ ಗಂಡೂರಾವ್ ಬಡಾವಣೆಯಲ್ಲಿ ಕೋವಿಡ್ ಸೋಂಕು ಪ್ರಕರಣವಾಗಿರುವ ಹಿನ್ನೆಲೆ ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಗುಂಡೂರಾವ್ ಬಡಾವಣೆಯಲ್ಲಿ ಬಡಜನತೆ, ಕೂಲಿ ಕಾರ್ಮಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿರುವುದರಿಂದ ಇದೀಗ ಬಡಾವಣೆಯನ್ನು ಸೀಲ್‍ಡೌನ್ ಮಾಡಿರುವುದರಿಂದ ಈ ಭಾಗದ ಜನರಿಗೆ ಆಹಾರದ ಸಮಸ್ಯೆ ಎದುರಾಗಿತ್ತು.

ಗ್ರಾ.ಪಂ. ಸದಸ್ಯ ಮತ್ತು ಪಟ್ಟಣದ ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಆಹಮ್ಮದ್ ಬಡ ಕುಟುಂಬದವರಿಗೆ ಉಚಿತವಾಗಿ ಪಡಿತರ ಆಹಾರ ಕಿಟ್‍ಗಳನ್ನು ವಿತರಣೆ ಮಾಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಹೆಚ್.ಆರ್. ಹರೀಶ್‍ಕುಮಾರ್ ಮತ್ತು ಪಟ್ಟಣದ ಪ್ರಮುಖರು ಇದ್ದರು.